ಹಾಸನ: ಹಾಸನ ವಿಜಯನಗರ ಬಡಾವಣೆಯ ಟಾರ್ಗೇಟ್ ಪದವಿ ಪೂರ್ವ ಕಾಲೇಜಿನಲ್ಲಿ ಕದಂಬ ಸೈನ್ಯ ಹಾಸನ ಜಿಲ್ಲಾ ಘಟಕ ಮತ್ತು ಕಾಲೇಜಿನ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ನಂತರ ಕಾಲೇಜಿನಲ್ಲಿ ನಡೆದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪರಿಸರವಾದಿ ಹಾಗೂ ನಾಡಿನ ಹೆಸರಾಂತ ಚಿತ್ರ ಕಲಾವಿದರು ಶ್ರೀ ಬಿ. ಎಸ್. ದೇಸಾಯಿ ಮಾತನಾಡಿ, ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತಾ ಬಂದಿದ್ದೇವೆ. ಆದರೂ ಪರಿಸರ ನಾಶ ನಿಂತಿಲ್ಲ, ಸಕಲ ಜೀವ ಜಂತುಗಳನ್ನು ಕಾಪಾಡುವ ಪರಿಸರ ಮನುಷ್ಯನ ಕ್ರೂರತೆಯಿಂದ, ಅನಾವಶ್ಯಕ ಯೋಜನೆಗಳ ಹೆಸರಿನಲ್ಲಿ ದಟ್ಟವಾದ ಕಾಡು ಬೆಟ್ಟ, ಕೆರೆ, ಕಟ್ಟೆ, ನದಿ ಎಲ್ಲವೂ ಬರಿದಾಗುತ್ತಿವೆ. ಉಳಿದ ಕಡೆ ರಾಸಾಯನಿಕಗಳಿಂದ, ಪ್ಲಾಸ್ಟಿಕ್ ಮತ್ತು ವಿವೇಚನಾ ರಹಿತ ತ್ಯಾಜ್ಯಗಳ ವಿಲೇವಾರಿಯಿಂದ, ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಶಿಸುತ್ತ ಇದೆ ಎಂದು ವಿಷಾದಿಸಿದರು.
ಪರಿಸರ ನಾಶ ಮಾಡಿ ಮನುಷ್ಯನಿಗೆ ಉಳಿಗಾಲವಿಲ್ಲ ಪರಿಸರ ನಾಶ ಮಾಡಿ ಎಷ್ಟು ದೇವರ ಪೂಜಿಸಿದರೆ ಏನು ಫಲ !
ಪರಿಸರ ನಾಶದ ಫಲವೇ ಪ್ರಾಣಿ ಮತ್ತು ಮನುಷ್ಯನ ಸಂಘರ್ಷ ಮತ್ತು ಹವಾಮಾನ ವೈಪರಿತ್ಯಗಳು. ವಿಶ್ವ ಪರಿಸರ ದಿನ ಕೇವಲ ಆಚರಣೆ ಆಗದೆ ಪ್ರಕೃತಿಯನ್ನು ರಕ್ಷಿಸುವ, ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ, ಪಕ್ಷಿ ಪ್ರಾಣಿ ಸಕಲ ಜೀವ ಜಂತುಗಳು ಪರಿಸರಕ್ಕೆ ಪೂರಕವಾಗಿ ಬದುಕುತ್ತವೆ. ಮನುಷ್ಯ ಮಾತ್ರ ಪರಿಸರಕ್ಕೆ ಕಂಟಕನಾಗಿದ್ದಾನೆ ಎಂದರು. ವಿಶ್ವ ಪರಿಸರ ದಿನ 2026 ಥೀಮ್ “ಪ್ರಕೃತಿಯ ಸ್ಪೂರ್ತಿ ಉತ್ತಮ ಹವಾಮಾನಕ್ಕಾಗಿ ಹಾಗೂ ನಮ್ಮ ಭವಿಷ್ಯಕ್ಕಾಗಿ”
ಇದು ಕೇವಲ ಘೋಷಣೆಯಾಗದೆ ಪರಿಪಾಲನೆಯಾಗಬೇಕು. ಆಗ ಪರಿಸರ ಸಮತೋಲನ ಸಾಧ್ಯ. ಜಾಗೃತಿ ಮೂಡಿಸುವುದು, ಪ್ರತಿಯೊಬ್ಬ ನಾಗರಿಕನಿಗೂ ಅರಿವು ಮೂಡಿಸುವುದು.
ಭೂಮಿಯ ರಕ್ಷಣೆ ಗಾಳಿ, ನೀರು, ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಿ, ಮುಂದಿನ ಪೀಳಿಗೆಗೆ ಸುರಕ್ಷಿತ ಹಸಿರು ಭೂಮಿಯನ್ನು ಬಿಟ್ಟುಕೊಡುವುದು.
ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿ ಸಂಕುಲಗಳನ್ನು ರಕ್ಷಿಸಲು ಪರಿಸರ ಸಮತೋಲನ ಕಾಪಾಡಿಕೊಳ್ಳಲು ಜನರನ್ನು ಪ್ರೇರೇಪಿಸುವುದು ಮುಖ್ಯವಾಗಿದೆ ಎಂದರು.
ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡರು ಮಾತನಾಡಿ ಪರಿಸರ ಜಾಗೃತಿ
ಕೇವಲ ಸರ್ಕಾರದ ಮಟ್ಟದಲ್ಲಿರದೆ, ಪ್ರತಿಯೊಬ್ಬ ವ್ಯಕ್ತಿ ಗಿಡ ನೆಡುವುದು, ಮಿತವಾಗಿ ಸಂಪನ್ಮೂಲ ಬಳಸುವುದು ಸ್ವಚ್ಛತೆಯನ್ನು ಕಾಪಾಡುವುದು ಆ ಮೂಲಕ ಪ್ರಕೃತಿಯ ಜೊತೆಗೆ ಬದುಕಲು ಕಲಿಯುವುದು ಬಹಳ ಮುಖ್ಯ. ಪರಿಸರ ಸಂರಕ್ಷಣೆ ಎನ್ನುವುದು ಕೇವಲ ಒಂದು ದಿನದ ಆಚರಣೆಯಾಗದೆ, ನಮ್ಮ ದೈನಂದಿನ ಜೀವನದ ಭಾಗವಾಗಬೇಕು ಎಂದರು.
ಕದಂಬ ಸೈನ್ಯ ಹಾಸನ ಜಿಲ್ಲಾ ಘಟಕದ ಅಧ್ಯಕ್ಷರಾದ ಪ್ರೊ. ಎ. ಹೆಚ್. ಗಣೇಶ್ ಅಂಕಪುರ ಮಾತನಾಡಿ ಹಳ್ಳಿಗಾಡಿನಲ್ಲಿ ಸ್ವಚ್ಛಂದ ಪರಿಸರ ಇರುತ್ತದೆ. ನಾವು ಬಾಲ್ಯದ ಓದುವ ದಿನಗಳಲ್ಲಿ ಹೊಲಗದ್ದೆಗಳಲ್ಲಿ ದನಕರುಗಳನ್ನು ಮೇಹಿಸಿಕೊಂಡು ಶಾಲೆಯ ಪಾಠಗಳನ್ನು ಓದುತ್ತಿದ್ದವು. ಹೋಂವರ್ಕ್ ಮಾಡಿಕೊಳ್ಳುತ್ತಿದ್ದವು. ಇಂದು ಓದಿಗೆ ಅನೇಕ ಅವಕಾಶಗಳಿವೆ. ಕೇವಲ ಡಾಕ್ಟರ್ ಮತ್ತು ಇಂಜಿನಿಯರ್ ಗುರಿ ಜೊತೆಗೆ ಎಲ್ಲಾ ವಿಷಯಗಳಲ್ಲೂ ವಿದ್ಯಾರ್ಥಿಗಳು ಜ್ಞಾನಾರ್ಜನೆ ಬೆಳಸಿಕೊಳ್ಳಬೇಕು ಎಂದರು. ಸಿರಿಗನ್ನಡ ವೇದಿಕೆ ಹಾಸನ ಜಿಲ್ಲಾ ಅಧ್ಯಕ್ಷರು ಆನಂದ್ ಪಟೇಲ್ ನೆಲ್ಲಿಗೆರೆ, ಮಾತಾನಾಡಿ ಪ್ರಕೃತಿಯೇ ಮಾನವನ ಶ್ರೇಷ್ಠ ಗುರು, ಹಸಿರೇ ಮನಷ್ಯನ ಉಸಿರು, ಪರಿಸರ ಮಾನವ ಜೀವನದ ಅವಿಭಾಜ್ಯ ಅಂಗ,ಪರಿಸರವಿಲ್ಲದೆ ಯಾವ ಜೀವಿಯನ್ನು ಉಳಿಸಿಕೊಳ್ಳಲು ಅಸಾಧ್ಯ ನಮ್ಮ ಭೂಮಿ ಪರಿಸರವನ್ನು ನಾವೇ ರಕ್ಷಿಸದಿದ್ದರೆ ಮತ್ಯಾರು ರಕ್ಷಿಸಲು ಸಾಧ್ಯ? ಜೂನ್ 5ರ ವಿಶ್ವ ಪರಿಸರ ದಿನದ ಶುಭ ಸಂದರ್ಭದಲ್ಲಿ ಎಲ್ಲೆ ಗಿಡಗಳನ್ನು ನೆಟ್ಟು ಸಂಭ್ರಮಿಸಬೇಕು ನಮ್ಮೆಲ್ಲರ ಉಸಿರಲ್ಲಿ ಪರಿಸರ ಪ್ರೇಮ ನಿತ್ಯೋತ್ಸವ ವಾಗಬೇಕು ಎಂದು ವಿದ್ಯಾರ್ಥಿಗಳನ್ನು ಕುರಿತು ಅರಿವು ಮೂಡಿಸಿದರು. ಸಾಹಿತಿ ಗೊರೂರು ಅನಂತರಾಜು ಮಾತನಾಡಿದರು. ಕಾಲೇಜಿನ ಉಪನ್ಯಾಸಕರು ನವೀನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ “ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದ” ಸಹಕಾರದಿಂದ, “ಪ್ರಾಣಿ ಮತ್ತು ಪಕ್ಷಿಗಳು ಹೇಗೆ ಪರಿಸರಕ್ಕೆ ಪೂರಕ ” ಈ ವಿಷಯದ ಬಗ್ಗೆ ಪ್ರಬಂಧ ಬರೆಯಲು, ಉತ್ತಮವಾಗಿ ಬರೆದ 20 ವಿದ್ಯಾರ್ಥಿಗಳಿಗೆ ಪ್ರಶಂಶಾ ಪತ್ರ ಹಾಗೂ ಬಹುಮಾನ ನೀಡುವ ಘೋಷಣೆಯನ್ನು ಬಿ. ಎಸ್. ದೇಸಾಯಿ ಮಾಡಿದರು. ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕರು ಹಾನಗಲ್ ದೇವರಾಜ್ ವಂದಿಸಿದರು. ಇದೇ ಸಂಧರ್ಭ ಕಾಲೇಜಿನ ಕನ್ನಡ ಉಪನ್ಯಾಸಕರು ಹಾನಗಲ್ ದೇವರಾಜು ಅವರ ಕನ್ನಡ ಸಾಹಿತ್ಯ ಸಂಪದ ಪುಸ್ತಕವನ್ನು ವೇದಿಕೆಯಲ್ಲಿ ಗಣ್ಯರು ಲೋಕಾರ್ಪಣೆ ಮಾಡಿದರು.
