ನುಗ್ಗೇಹಳ್ಳಿ, ಜೂ. 5: ನುಗ್ಗೇಹಳ್ಳಿಯ ಪ್ರತಿಷ್ಠಿತ ಗೋಕುಲ ವಿದ್ಯಾ ಸಂಸ್ಥೆಯು ಕಳೆದ 30 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದು, ಸಂಸ್ಥೆಯ 30 ವರ್ಷಗಳ ಯಶಸ್ವಿ ಪಯಣದ ಅಂಗವಾಗಿ ಹಾಗೂ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ 30 ವಿಶೇಷ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
ಕಾರ್ಯಕ್ರಮದ ಅಂಗವಾಗಿ ನುಗ್ಗೇಹಳ್ಳಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗೋಕುಲ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಶ್ರೀ ಪೃಥ್ವಿ ಯಾದವ್, ಮುಖ್ಯ ಶಿಕ್ಷಕರಾದ ಶ್ರೀಮತಿ ಭುವನೇಶ್ವರಿ ಜಿ. ಯಾದವ್, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಡಾ. ಸುಹಾಸ್, ಡಾ. ನವೀನ್, ಡಾ. ರಮ್ಯಾ ಮತ್ತು ನಾಗೇಂದ್ರ ಭಾಗವಹಿಸಿ ಸಸಿಗಳನ್ನು ವಿತರಿಸಿ ಗಿಡಗಳನ್ನು ನೆಟ್ಟರು.
ಅದೇ ರೀತಿ ನುಗ್ಗೇಹಳ್ಳಿ ಪೊಲೀಸ್ ಠಾಣೆ, ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿ, ಜಂಬೂರು ಗ್ರಾಮ ಪಂಚಾಯಿತಿ, ಕೆನರಾ ಬ್ಯಾಂಕ್ ಹಾಗೂ ನುಗ್ಗೇಹಳ್ಳಿ ಕೃಷಿ ಇಲಾಖೆ ಆವರಣಗಳಲ್ಲಿಯೂ ಸಸಿಗಳನ್ನು ವಿತರಿಸಿ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.
ಶಾಲಾ ಆವರಣದಲ್ಲಿಯೂ ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. “ಒಂದು ಗಿಡ ನೆಡಿ – ಒಂದು ಜೀವ ಉಳಿಸಿ” ಎಂಬ ಸಂದೇಶದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಪ್ರತಿನಿಧಿಗಳು, “ಇಂದಿನ ಗಿಡ ನಾಳಿನ ನೆರಳು; ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ” ಎಂದು ಪರಿಸರ ಕಾಳಜಿಯ ಸಂದೇಶ ಸಾರಿದರು.
