ಚನ್ನರಾಯಪಟ್ಟಣ: ದಂಡಿಗನಹಳ್ಳಿ ಹೋಬಳಿಯ 10 ಗ್ರಾಮಗಳಲ್ಲಿ ಮೊದಲ ಹಂತದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಶಾಸಕರಿಗೆ ಹಂಚಿಕೆ ಮಾಡಿರುವ ಅನುದಾನದಡಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ. ಅಗ್ರಹಾರ, ಎ. ಚೋಳನಹಳ್ಳಿ, ಎನ್. ಬಿಂಡೇನಹಳ್ಳಿ, ಹೊನ್ನಶೆಟ್ಟಿಹಳ್ಳಿ, ನಾರಾಯಣಪುರ, ನಾಡನಹಳ್ಳಿ, ಪಿಳ್ಳಳ್ಳಿ, ಚನ್ನಾಪುರ, ಗೆಜ್ಜಗಾರನಹಳ್ಳಿ ಹಾಗೂ ಆನೇಕೆರೆ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಷ್ಟು ರಸ್ತೆ ನಿರ್ಮಿಸಲಾಗಿದೆ ಎನ್ನುವುದಕ್ಕಿಂತ ಸಾರ್ವಜನಿಕರಿಗೆ ಅಗತ್ಯವಿರುವ ಹಾಗೂ ಹೆಚ್ಚಿನ ಅನುಕೂಲ ಕಲ್ಪಿಸುವ ರಸ್ತೆಗಳನ್ನು ನಿರ್ಮಿಸುವುದು ಮುಖ್ಯವಾಗಿದೆ. ಪ್ರತಿ ಕಾಮಗಾರಿಗೆ 10 ರಿಂದ 15 ಲಕ್ಷ ರೂ. ಅನುದಾನ ಹಂಚಿಕೆ ಮಾಡಲಾಗಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ರಸ್ತೆ ಪೂಜೆ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಸಾರ್ವಜನಿಕರು ಹಲವು ಅಭಿವೃದ್ಧಿ ಕಾಮಗಾರಿಗಳ ಅಗತ್ಯವನ್ನು ತಮ್ಮ ಗಮನಕ್ಕೆ ತಂದಿದ್ದು, ಅನುದಾನ ಲಭ್ಯತೆಗೆ ಅನುಗುಣವಾಗಿ ಆದ್ಯತೆ ಮೇರೆಗೆ ಅವುಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ. ಸೂರಜ್ ರೇವಣ್ಣ, “ಮೊದಲು ಅವರು ಆರು ತಿಂಗಳು ನಿರ್ವಿಘ್ನವಾಗಿ ರಾಜ್ಯಭಾರ ನಡೆಸಲಿ. ನಂತರ ನಮ್ಮ ಕಾರ್ಯಕರ್ತರನ್ನು ಆಹ್ವಾನಿಸಿರುವ ಕುರಿತು ಮಾತನಾಡುತ್ತೇನೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಆನೇಕೆರೆ ಬಾಲಚಂದ್ರ, ಹೊನ್ನಶೆಟ್ಟಿಹಳ್ಳಿ ನಾಗರಾಜು, ಕೆ.ಜೆ. ಸುರೇಶ್, ಎ. ಚೋಳನಹಳ್ಳಿ ಸುರೇಶ್, ಕುಂಬೇನಹಳ್ಳಿ ಸುರೇಶ್, ಅಗ್ರಹಾರ ಲಕ್ಕೇಗೌಡ, ದಿನೇಶ್, ಡೈರಿ ತಮ್ಮಯ್ಯಣ್ಣ, ಯೋಗೇಶ್, ಅಗ್ರಹಾರ ಕೊಪ್ಪಲು ಪ್ರಭಾಕರ್, ಯಲಿಯೂರು ಕೊಪ್ಪಲು ವಿಕಾಸ್, ಅಗ್ರಹಾರ ಗೇಟ್ ಮೋಹನ್, ಎನ್. ಬಿಂಡೇನಹಳ್ಳಿ ಸತೀಶ್, ಪುಟ್ಟಪ್ಪ, ಲಕ್ಕಪ್ಪ, ದಿನೇಶ್, ಸೋಮಶೇಖರ, ಚಂದ್ರಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
