ಚನ್ನರಾಯಪಟ್ಟಣ, ಜೂ. 8: ಮಾಜಿ ಕಂದಾಯ ಸಚಿವ ಹೆಚ್.ಸಿ. ಶ್ರೀಕಂಠಯ್ಯ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಚನ್ನರಾಯಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ರಾಷ್ಟ್ರ ಮಟ್ಟದ ಅಣ್ಣಯ್ಯ ಕಪ್ ವಾಲಿಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ತಮಿಳುನಾಡಿನ ಯುನೈಟೆಡ್ ಸ್ಟ್ರೈಕರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ವಿಜೇತ ತಂಡಕ್ಕೆ ₹1.50 ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ ಪ್ರದಾನ ಮಾಡಲಾಯಿತು. ಕೇರಳ ತಂಡ ದ್ವಿತೀಯ ಸ್ಥಾನ ಪಡೆದು ₹1.40 ಲಕ್ಷ ನಗದು ಬಹುಮಾನ ಮತ್ತು ಟ್ರೋಫಿ ತನ್ನದಾಗಿಸಿಕೊಂಡರೆ, ಮುಂಬೈ ತಂಡ ತೃತೀಯ ಸ್ಥಾನ ಪಡೆದು ₹1.30 ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ ಪಡೆದುಕೊಂಡಿತು. ಹಾಸನ ಶ್ರೀಕಂಠಯ್ಯ ತಂಡ ಚತುರ್ಥ ಸ್ಥಾನ ಪಡೆದು ₹1.20 ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿಗೆ ಭಾಜನವಾಯಿತು.
ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಮಾಜಿ ಎಂಎಲ್ಸಿ ಗೋಪಾಲಸ್ವಾಮಿ, ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕಾ) ಅಧ್ಯಕ್ಷ ಹಾಗೂ ಶ್ರೀಕಂಠಯ್ಯ ಅವರ ಮೊಮ್ಮಗ ಹೆಚ್.ಸಿ. ಲಲಿತ್ ರಾಘವ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹೆಚ್.ಎಸ್. ವಿಜಯ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಬಾಗೂರು ಮಂಜೇಗೌಡ, ಎಂ. ಶಂಕರ್, ಡಿ.ಸಿ. ಸಣ್ಣಸ್ವಾಮಿ, ಎಚ್.ಕೆ. ಮಹೇಶ್, ಲಕ್ಷ್ಮಣ್, ಎಂ.ಎ. ರಂಗಸ್ವಾಮಿ ಹಾಗೂ ಹೆಚ್.ಸಿ. ಶ್ರೀಕಂಠಯ್ಯ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸಿದ್ದ ತಂಡಗಳ ನಡುವಿನ ರೋಚಕ ಪೈಪೋಟಿಗೆ ಸಾವಿರಾರು ಕ್ರೀಡಾಭಿಮಾನಿಗಳು ಸಾಕ್ಷಿಯಾದರು. ಪಂದ್ಯಾವಳಿಯ ಯಶಸ್ವಿ ಆಯೋಜನೆಗೆ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳು ಮೆಚ್ಚುಗೆ ವ್ಯಕ್ತಪಡಿಸಿದರು.
– ಮಂಜುನಾಥ್ ಐ. ಕೆ.
