ತುಮಕೂರು: ಕುಂಚಿಟಿಗ ಸಮಾಜದ ಏಕೈಕ ಶಾಸಕ, ಹಿರಿಯ ರಾಜಕಾರಣಿ, ಶಿರಾ ಕ್ಷೇತ್ರ ಶಾಸಕ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲೆಯ ಕುಂಚಿಟಿಗ ಸಮಾಜದ ವಿವಿಧ ಸಂಘಗಳ ಮುಖಂಡರು ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಸೋಮವಾರ ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಶ್ರೀಧರ್, ರಾಜ್ಯದ 25-30 ಲಕ್ಷ ಜನಸಂಖ್ಯೆಯ ಕುಂಚಿಟಿಗ ಸಮಾಜದ ಏಕೈಕ ಶಾಸಕರಾಗಿರುವ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಿ, ನಮ್ಮ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು. ಐದು ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾದ ಜಯಚಂದ್ರ ಅವರ ಅನುಭವ, ಹಿರಿತನ ಪರಿಗಣಿಸಿ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಮಾಜಿ ಅಧ್ಯಕ್ಷ ಆರ್.ಕಾಮರಾಜ್ ಮಾತನಾಡಿ, ಕುಂಚಿಟಿಗ ಒಕ್ಕಲಿಗ ಜನಾಂಗದ ಕ್ರಿಯಾಶೀಲ ರಾಜಕಾರಣಿ ಹಾಗೂ ಕಳೆದ 5 ದಶಕಗಳ ಸಕ್ರಿಯ ರಾಜಕೀಯ ಜೀವನದಲ್ಲಿ ಏಳು ಬಾರಿ ಕಳ್ಳಂಬೆಳ್ಳ ಮತ್ತು ಶಿರಾ ಕ್ಷೇತ್ರದಲ್ಲಿ ಶಾಸಕರಾಗಿ, ಸಚಿವರಾಗಿ ಟಿ.ಬಿ. ಜಯಚಂದ್ರ ಅವರು ರಾಜ್ಯದ ಜನರಿಗೆ ಬಹುಪಯೋಗಿ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಇಂತಹ ಹಿರಿಯ ನಾಯಕರಿಗೆ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ ಕುಂಚಿಟಿಗ ಸಮಾಜಕ್ಕೆ ಪ್ರಾತಿನಿಧ್ಯ ನೀಡುವ ಜೊತೆಗೆ ಜಯಚಂದ್ರ ಅವರ ಪಕ್ಷನಿಷ್ಠೆಯನ್ನು ಗೌರವಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಜಿ.ಆರ್. ಶಿವರಾಮಯ್ಯ ಮಾತನಾಡಿ, ಜಯಚಂದ್ರ ಅವರಿಗೆ ಸಚಿವ ಸ್ಥಾನ ನಿರಾಕರಿಸಿದರೆ ರಾಜ್ಯದ ಕುಂಚಿಟಿಗರು ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದಕ್ಕೆ ಅವಕಾಶ ಮಾಡಿಕೊಡದೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಕಾರ್ಯದರ್ಶಿ ಬಿ.ವಿ.ಶಿವರಾಜು, ಭಕ್ತರಹಳ್ಳಿ ದೇವರಾಜು, ದೊಡ್ಡಲಿಂಗಪ್ಪ, ಜಿ.ಎಲ್.ನರೇಂದ್ರಬಾಬು, ಹಿರಿಯವಕೀಲರು ಮತ್ತು ಕೆಂಪೇಗೌಡ ಪಟ್ಟಣ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಶಿವರಾಮಯ್ಯ ಮೊದಲಾದವರು ಹಾಜರಿದ್ದರು.
-ಚಂದ್ರಚೂಡ ಕೆ.ಬಿ.
