ತುಮಕೂರು: ಪರಿಸರ ಸಂರಕ್ಷಣೇ ಕೇವಲ ಒಂದು ದಿನದ ಆಚರಣೆಯಾಗಬಾರದು. ಅದು ನಮ್ಮ ದೈನಂದಿನ ಜೀವನದ ಭಾಗವಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತ ಕುಮಾರ್ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನವೋದಯ ವಿದ್ಯಾಲಯದ ಸಹಭಾಗಿತ್ವದಲ್ಲಿ ತುಮಕೂರಿನ ಐತಿಹಾಸಿಕ ಹಾಗೂ ಪ್ರಕೃತಿ ರಮಣೀಯ ತಾಣವಾದ ದೇವರಾಯನದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸುವಲ್ಲಿ ಕಾನೂನು ಚೌಕಟ್ಟು ಹಾಗೂ ಸಾರ್ವಜನಿಕರ ಜವಾಬ್ದಾರಿ ಎರಡೂ ಮುಖ್ಯ ಎಂದು ತಿಳಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳಾದ ಪವಿತ್ರ.ವಿ. ಹಾಗೂ ನಮಿತಾ.ಎಸ್. ಅವರು ಪಿಎಂ ಶ್ರೀ ನವೋದಯ ವಿದ್ಯಾಲಯದ ಶಾಲಾ ವಿದ್ಯಾರ್ಥಿಗಳಿಗೆ ಕಾಡಿನ ಮಹತ್ವ, ಜೀವವೈವಿಧ್ಯತೆ ಹಾಗೂ ಪರಿಸರ ಸಮತೋಲನ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು.
ವಿಶ್ವ ಪರಿಸರ ದಿನಚರಣೆ ಅಂಗವಾಗಿ ದೇವರಾಯನದುರ್ಗದ ಅರಣ್ಯ ಪ್ರದೇಶದ ಆವರಣದಲ್ಲಿ ವಿವಿಧ ಜಾತಿಯ ಅಪರೂಪದ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಸಂಕಲ್ಪ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಲೋಕೇಶ್ ಹವಳೆ, ತುಮಕೂರು ನ್ಯಾಯಾಂಗ ಘಟಕದ ಎಲ್ಲಾ ನ್ಯಾಯಾಧೀಶರುಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಮತ್ತು ಶಾಲಾ ಮಕ್ಕಳು ಹಾಜರಿದ್ದರು.
– ಚಂದ್ರಚೂಡ ಕೆ.ಬಿ.
