ಬೆಂಗಳೂರು: ಐಪಿಎಲ್ 2026ರ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಹೊರಾಗಿಯೂ, ಮಧ್ಯಪ್ರದೇಶದ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ ಅವರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಬಿಸಿಸಿಐ ಆಯ್ಕೆಗಾರರ ಈ ನಡೆಗೆ ಆರ್ಸಿಬಿ ಅಭಿಮಾನಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುಬ್ರಮಣ್ಯಂ ಬದ್ರೀನಾಥ್ ಮಾತ್ರ ಆಯ್ಕೆ ಸಮಿತಿಯ ಈ ನಿರ್ಧಾರವನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಅಬ್ಬರಿಸಿದ್ದ ರಜತ್ ಪಾಟಿದಾರ್ 14 ಇನ್ನಿಂಗ್ಸ್ಗಳಲ್ಲಿ 41.75 ರ ಸರಾಸರಿ ಹಾಗೂ 192.69 ರ ಸ್ಟ್ರೈಕ್ ರೇಟ್ನಲ್ಲಿ ಬರೋಬ್ಬರಿ 501 ರನ್ ಚಚ್ಚಿದ್ದರು. ಮಧ್ಯಮ ಓವರ್ಗಳಲ್ಲಿ ಸ್ಪಿನ್ನರ್ಗಳ ವಿರುದ್ಧ ಅಬ್ಬರಿಸುವ ಅವರ ಶೈಲಿ ಆರ್ಸಿಬಿ ತಂಡಕ್ಕೆ ದೊಡ್ಡ ಶಕ್ತಿಯಾಗಿತ್ತು.
ಮುಖ್ಯಾಂಶಗಳು
-
ಐಪಿಎಲ್ 2026 ರಲ್ಲಿ 501 ರನ್ ಸಿಡಿಸಿದರೂ ಭಾರತ ಟಿ20 ತಂಡದಲ್ಲಿ ಸಿಗದ ಸ್ಥಾನ.
-
ಪಾಟಿದಾರ್ ಮತ್ತು ಶಿವಂ ದುಬೆ ಹೋಲಿಕೆ ತಪ್ಪು ಎಂದ ಸಿಎಸ್ಕೆ ಮಾಜಿ ಆಟಗಾರ ಬದ್ರೀನಾಥ್.
-
ಅಗ್ರ ಕ್ರಮಾಂಕದಲ್ಲಿ ಸ್ಥಾನ ಖಾಲಿ ಇಲ್ಲದ ಕಾರಣ ರಜತ್ ಪಾಟಿದಾರ್ಗೆ ತಪ್ಪಿದ ಅವಕಾಶ.
ದುಬೆ ಬದಲಿಗೆ ಪಾಟಿದಾರ್ ಆಯ್ಕೆ: ಫುಟ್ಬಾಲ್ನಲ್ಲಿ ಗೋಲ್ಕೀಪರ್ ಜಾಗಕ್ಕೆ ಫಾರ್ವರ್ಡ್ ಆಟಗಾರನನ್ನು ತಂದಂತೆ!
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ‘ಕ್ರಿಕ್ ವಿತ್ ಬದ್ರಿ’ಯಲ್ಲಿ ಮಾತನಾಡಿರುವ ಬದ್ರೀನಾಥ್, ರಜತ್ ಪಾಟಿದಾರ್ ಮತ್ತು ಶಿವಂ ದುಬೆ ಅವರನ್ನು ಹೋಲಿಕೆ ಮಾಡುವುದು ತಪ್ಪು ಎಂದಿದ್ದಾರೆ.
ಬದ್ರೀನಾಥ್ ವಿಶ್ಲೇಷಣೆ: “ದುಬೆ ಬದಲಿಗೆ ಪಾಟಿದಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಫುಟ್ಬಾಲ್ನಲ್ಲಿ ಗೋಲ್ಕೀಪರ್ ಜಾಗಕ್ಕೆ ಫಾರ್ವರ್ಡ್ ಆಟಗಾರನನ್ನು ಬದಲಾಯಿಸಿದಂತೆ. ಶಿವಂ ದುಬೆ ಒಬ್ಬ ಫಿನಿಶರ್ ಮತ್ತು ತಂಡಕ್ಕೆ ಬೌಲಿಂಗ್ ಕೊಡುಗೆಯನ್ನೂ ನೀಡಬಲ್ಲ ಆಲ್-ರೌಂಡರ್ ಆಗಿದ್ದಾರೆ. ಆದರೆ ರಜತ್ ಪಾಟಿದಾರ್ ಒಬ್ಬ ಪೂರ್ಣ ಪ್ರಮಾಣದ ಬ್ಯಾಟರ್. ಹೀಗಾಗಿ ಶಿವಂ ದುಬೆ ಬದಲಿಗೆ ಪಾಟಿದಾರ್ಗೆ ಅವಕಾಶ ನೀಡಬೇಕಿತ್ತು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ.”
ಪಾಟಿದಾರ್ ಮೂಲತಃ ಟಾಪ್-4 ನಲ್ಲಿ ಆಡುವ ಬ್ಯಾಟರ್ ಆಗಿದ್ದು, ಪ್ರಸ್ತುತ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದಲ್ಲಿ ಈಗಾಗಲೇ ಅತ್ಯುತ್ತಮ ಬ್ಯಾಟರ್ಗಳಿದ್ದಾರೆ. ಹೀಗಾಗಿ ಅವರು ಅವಕಾಶ ವಂಚಿತರಾಗಿದ್ದಾರೆ ಎಂದು ಬದ್ರೀನಾಥ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ ಜೊತೆ ಸ್ಪರ್ಧೆ
ಬದ್ರೀನಾಥ್ ಪ್ರಕಾರ, ರಜತ್ ಪಾಟೀದಾರ್ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಅವರು ಆಲ್-ರೌಂಡರ್ಗಳ ಜೊತೆಯಲ್ಲ, ಬದಲಿಗೆ ಅಗ್ರ ಕ್ರಮಾಂಕದ ಶುದ್ಧ ಬ್ಯಾಟರ್ಗಳೊಂದಿಗೆ ಸ್ಪರ್ಧಿಸಬೇಕಾಗುತ್ತದೆ. “ಒಂದು ವೇಳೆ ಪಾಟಿದಾರ್ಗೆ ಅವಕಾಶ ನೀಡಬೇಕೆಂದರೆ ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ ಅಥವಾ ಇಶಾನ್ ಕಿಶನ್ ಅವರಲ್ಲಿ ಒಬ್ಬರನ್ನು ಕೈಬಿಡಬೇಕಾಗುತ್ತದೆ. ಆದರೆ ಪ್ರಸ್ತುತ ಫಾರ್ಮ್ ಆಧಾರದ ಮೇಲೆ ಅದು ಸಾಧ್ಯವಿಲ್ಲ. ಹೀಗಾಗಿ ಸದ್ಯಕ್ಕೆ ಭಾರತ ತಂಡದಲ್ಲಿ ರಜತ್ ಪಾಟಿದಾರ್ ಅವರಿಗೆ ಯಾವುದೇ ಜಾಗ ಖಾಲಿ ಇಲ್ಲ” ಎಂದು ಬದ್ರೀನಾಥ್ ಸ್ಪಷ್ಟಪಡಿಸಿದ್ದಾರೆ.
ಭಾರತ ಟಿ20 ತಂಡ ಹೀಗಿದೆ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ.
