ಕೊರಟಗೆರೆ:- ಪಟ್ಟಣದ ಸುಭಾಷ್ ವಿಜ್ಞಾನ ಪದವಿ ಪೂರ್ವ ಕಾಲೇಜು 2025-26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಬೋರ್ಡ್ ಹಾಗೂ KCET-2026 ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿದ್ದು, ಶೇ.100 ಫಲಿತಾಂಶದೊಂದಿಗೆ ಮತ್ತೊಮ್ಮೆ ತನ್ನ ಶೈಕ್ಷಣಿಕ ಗುಣಮಟ್ಟವನ್ನು ಸಾಬೀತುಪಡಿಸಿದೆ.
ಕಾಲೇಜಿನ ವಿದ್ಯಾರ್ಥಿ ಸುಭಾಷ್ ಎಸ್.ಜಿ. ಅವರು KCET-2026ರ ಇಂಜಿನಿಯರಿಂಗ್ ವಿಭಾಗದಲ್ಲಿ 9,828ನೇ ರ್ಯಾಂಕ್ ಗಳಿಸುವ ಮೂಲಕ ಕೊರಟಗೆರೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಜೊತೆಗೆ ಪಶುವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ 4,102ನೇ ರ್ಯಾಂಕ್, ನರ್ಸಿಂಗ್ ವಿಭಾಗದಲ್ಲಿ 4,111ನೇ ರ್ಯಾಂಕ್ ಹಾಗೂ ಕೃಷಿ ಮತ್ತು ಫುಡ್ ಸೈನ್ಸ್ ವಿಭಾಗಗಳಲ್ಲಿ 4,732ನೇ ರ್ಯಾಂಕ್ ಗಳಿಸಿ ಗಮನಾರ್ಹ ಸಾಧನೆ ಮೆರೆದಿದ್ದಾರೆ.

ಇದೇ ವೇಳೆ KCET-2026ರ ಇಂಜಿನಿಯರಿಂಗ್ ವಿಭಾಗದಲ್ಲಿ ಶ್ರೀವತ್ಸ ಅವರು 28,457ನೇ ರ್ಯಾಂಕ್ ಹಾಗೂ ಅಮೂಲ್ಯ ಎಸ್. ಅವರು 28,532ನೇ ರ್ಯಾಂಕ್ ಗಳಿಸಿ ಕಾಲೇಜಿನ ಸಾಧನೆಗೆ ಮತ್ತಷ್ಟು ಮೆರುಗು ತಂದಿದ್ದಾರೆ.

ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್, ನರ್ಸಿಂಗ್, ಕೃಷಿ, ಬಿಪಿಟಿ (BPT) ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಅರ್ಹತೆ ಪಡೆದಿದ್ದಾರೆ. ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತಂದುಕೊಟ್ಟಿರುವುದು ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.

ಈ ಕುರಿತು ಪ್ರಾಂಶುಪಾಲರಾದ ನಿರ್ಮಲಾ ಗಂಗರಾಜು ಮಾತನಾಡಿ, ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಸಹಕಾರ ಹಾಗೂ ಉಪನ್ಯಾಸಕರ ಸಮರ್ಪಿತ ಮಾರ್ಗದರ್ಶನದಿಂದ ಈ ಯಶಸ್ಸು ಸಾಧ್ಯವಾಗಿದೆ. “ನಮ್ಮ ವಿದ್ಯಾರ್ಥಿಗಳ ಸಾಧನೆಯೇ ನಮ್ಮ ಹೆಮ್ಮೆ; ಅವರ ಯಶಸ್ಸೇ ನಮ್ಮ ಗುರಿ” ಎಂಬ ಧ್ಯೇಯದೊಂದಿಗೆ ಕಾಲೇಜು ಮುಂದುವರಿಯುತ್ತಿದೆ ಎಂದು ಹೇಳಿದರು.
– ಶ್ರೀನಿವಾಸ್ ಕೊರಟಗೆರೆ.
