ದಿನಪತ್ರಿಕೆಯಲಿ ಹಾಗೆಯೇ ಕಣ್ಣಾಡಿಸಿ ‘ಸರಿ; ತಡವಾಗುತ್ತೆ’ ಎಂದು ಮಡಿಸಿಡಲು ಹೊರಟವನಿಗೆ ಏನೋ ವಿಶೇಷ ಕಂಡಂತಾಯ್ತಲ್ಲ ಎಂದು ಪುನಃ ಬಿಡಿಸಿ ಆರನೇ ಪುಟದ ಕೆಳಮೂಲೆಯನ್ನು ನಿರುಕಿಸಿದರೆ ನನಗೆ ಪ್ರಿಯವಾದ ಸುದ್ದಿಯೇ ಕಾಣಬೇಕೇ? ನಿಜ ಹೇಳಬೇಕೆಂದರೆ ನಾನು ಆ ಸುದ್ದಿಯನ್ನು ನೋಡಿರಲೂ ಇಲ್ಲ. ಆದರೆ ಆರನೇ ಇಂದ್ರಿಯ ಅದು ಹೇಗೋ ಏನೋ ಇಲ್ಲಿ ಯಾವುದೋ ಅಗತ್ಯ ಮಾಹಿತಿಯಿದೆಯೆಂದು ಅತ್ಯಂತ ಸಹಜ ಎಂಬಂತೆ ಎಚ್ಚರಿಸಿತ್ತು. ಸರಸರನೇ ಮಾಹಿತಿ ಸಂಗ್ರಹಿಸಿದ ನಾನು ಆ ಮೂರು ದಿನಗಳ ಅವಧಿಗೆ ರಜೆಯನ್ನು ಯೋಜಿಸತೊಡಗಿದೆ. ಬಹಳ ಸಮಯದಿಂದ ಹೇಗಾದರೂ, ಎಂದಾದರೂ ಹೋಗಿಯೇತೀರಬೇಕೆಂದು ಆಕಾಂಕ್ಷೆಯಿಟ್ಟುಕೊಂಡಿದ್ದ ನನಗೆ ಈ ಸಂದರ್ಭ ಇಷ್ಟು ಬೇಗನೆ ಈ ರೀತಿ ಬಳ್ಳಿ ಕಾಲಿಗೆ ತೊಡರಿದಂತೆ ಆಕಸ್ಮಿಕವಾಗಿ ಸಂಭವಿಸಲಿದೆ ಎಂದು ಅನಿಸಿ ಸಂತಸವೇ ಆಯಿತು. ಆಗ ಇನ್ನೂ ಲೋಕಲ್ ಎಕ್ಸ್ಚೇಂಜ್ನ ಟ್ರಂಕ್ಕಾಲ್ಗಳ ಕಾಲ, ಎಕ್ಸ್ಚೇಂಜ್ ವ್ಯಾಪ್ತಿಯೊಳಗೇ ಸಂಪರ್ಕಿಸಬೇಕಾದಲ್ಲಿ ಒನ್ ಸೆವೆನ್ ನೈನ್ ಕೊಡಿ ಎಂದು ಟೆಲಿಫೋನ್ ಆಪರೇಟರ್ಗೆ ತಿಳಿಸಿದರೆ ಅವರು ತನ್ನೆದುರು ಇರುವ ದೊಡ್ಡ ಬೋರ್ಡ್ನಲ್ಲಿ ಒನ್ ಸೆವೆನ್ ನೈನ್ ಅನ್ನು ಹುಡುಕಿ, ನಮ್ಮ ಫೋನ್ನ ತಂತಿಯನ್ನು ಎತ್ತಿ ಒನ್ ಸೆವೆನ್ ನೈನ್ ನ ಸಂಪರ್ಕಕ್ಕೆ ಚುಚ್ಚಿಕೊಡಬೇಕಿತ್ತು. ಆಗ ನಾವು ಹಲೋ… ಹಲೋ… ಎಂದು ಮಾಹಿತಿ ತಲುಪಿಸುವಷ್ಟರಲ್ಲಿ ಸಾಕುಸಾಕಾಗಿ ಹೋಗುತ್ತಿತ್ತು.
ಇನ್ನು ಟ್ರಂಕ್ಕಾಲ್ ಆಗಿದ್ದರೆ ಮುಗಿದೇ ಹೋಯ್ತು. ನಮ್ಮ ಎಕ್ಸ್ಚೇಂಜಿಗೆ ಬೇರೆ ಊರಿನ ನಂಬರ್ ಅನ್ನು ಮೂವತ್ತಮೂರು ಬಾರಿ ಕೂಗಿ ಹೇಳಿ ಆನಂತರ ಟೆಲಿಫೋನಿನವರು ಆ ನಂಬರ್ನ ಎಕ್ಸ್ಚೇಂಜನ್ನು ಸಂಪರ್ಕಿಸಿ, ಆ ಎಕ್ಸ್ಚೇಂಜ್ನವರು ಬೇಕಾದ ನಂಬರ್ನವರನ್ನು ಸಂಪರ್ಕಿಸಿ ಅವರನ್ನು ಹೋಲ್ಡಿಂಗ್ನಲ್ಲಿರಲು ಹೇಳಿ ನಂತರ ನಮ್ಮ ಎಕ್ಸ್ಚೇಂeನ್ನು ಸಂಪರ್ಕಿಸಿ ನಮ್ಮ ಎಕ್ಸ್ಚೇಂಜ್ನವರು ನಮ್ಮನ್ನು ಸಂಪರ್ಕಿಸಿ ನಾವು ಅಪೇಕ್ಷಿಸಿದವರ ಸಂಪರ್ಕ ಸಾಧಿಸಿ ನಮ್ಮನ್ನು ಮಾತನಾಡಲು ಹೇಳಿ, ವಿಷಯ ತಲುಪಿಸುವಷ್ಟರಲ್ಲಿ ಇಲ್ಲಿ ಯಾರಾದರೂ ಸತ್ತಿದ್ದರೆ ಅವರ ದಫನ್ ಮುಗಿದಿರುತ್ತಿತ್ತು. ಬೆಳಿಗ್ಗೆ ಫೋನ್ ಮಾಡಿ ಸಂಪರ್ಕಕ್ಕೆ ಕಾಯ್ದು ಕುಳಿತಿದ್ದರೆ ಸಂಜೆಯೋ-ರಾತ್ರಿಯೋ ಮಾತನಾಡಲು ಸಾಧ್ಯವಾಗುತ್ತಿತ್ತು. ಈ ನಡುವೆ ಅಗತ್ಯ ಕೆಲಸಗಳಿಗೂ ಹೋಗದೇ, ಸಿಗಬಹುದಾದ ಸಂಪರ್ಕ ಸಿಕ್ಕಿ ಮಾತನಾಡಲು ಸಾಧ್ಯವಾಗದೇ ಎಲ್ಲಿ ಕೈತಪ್ಪಿ ಹೋಗುವುದೋ ಎಂದು ಕಾಯ್ದು ಕೂರುವುದಿತ್ತಲ್ಲಾ ಅದು ತೀರಾ ಸಂಕಟ. ಕಡೆಗೆ ಸಂಜೆ ಐದಕ್ಕೆ ‘ಆ ಎಕ್ಸ್ಚೇಂಜ್ ಲೈನ್ ಸರಿಯಿಲ್ಲ, ಮರ ಬಿದ್ದಿದೆಯಂತೆ, ಸಿಡಿಲು ಬಡಿದು ಎಕ್ಸೆಚೆಂಜ್ ಬರ್ಡೇ ಸುಟ್ಟುಹೋಗಿದೆಯಂತೆ, ಅಡಚಣೆಗಾಗಿ ವಿಷಾಧಿಸುತ್ತೇವೆ ನಾಳೆ ಟ್ರೈ ಮಾಡಿ’ ಅಂದದ್ದೂ ಉಂಟು.
ನನ್ನ ಗೆಳೆಯರೊಬ್ಬರ ಅಂಗಡಿಯಲ್ಲಿ ಕೆಲಸಕ್ಕಿದ್ದ ಆನಂದ ಎನ್ನುವವನಿಗೆ ಮಾಲೀಕರಿಲ್ಲದಾಗ ಟೆಲಿಫೋನ್ ಕರೆಯನ್ನು ಸ್ವೀಕಾರ ಮಾಡುವುದೆಂದರೆ ಒಂದು ಅಮೋಘ ಅತ್ಯಪೂರ್ವ ಅನುಭವ. ಬೇರೆಲ್ಲ ಮಾಡಲೇಬೇಕಿದ್ದ ಕೆಲಸಗಳನ್ನು ಬದಿಗಿಟ್ಟು ಕಿವಿಯೆಲ್ಲವನ್ನೂ ಫೋನಿನೆಡೆಗೇ ಕೇಂದ್ರೀಕರಿಸಿ ತನ್ನೆಲ್ಲ ಪಂಚೇಂದ್ರಿಯಗಳನ್ನು ಫೋನೆಂಬ ಮಾಯಾವಸ್ತುವಿನೆಡೆಗೇ ಗುರಿಮಾಡಿಕೊಂಡು ಚಾತಕಪಕ್ಷಿಯಂತೆ ಕಾಯುತ್ತಿದ್ದ.
ಫೋನ್ ರಿಂಗ್ ಆಗಲು ಇನ್ನೂ ಪ್ರಾರಂಭಿಸಿರುವುದಿಲ್ಲ; ಕಿಣ್ ಎನ್ನಬೇಕಷ್ಟೇ, ಇಲಿ ಮೇಲೆ ನೆಗೆಯುವ ಬೆಕ್ಕಿನಂತೆ ಫಣಂಗನೇ ಹಾರಿ, ಅತ್ತಲಿಂದ ಯಾರು ಯಾಕೆ ಎಲ್ಲಿಂದ ಮಾತನಾಡುತ್ತಿದ್ದಾರೆಂದು ಸಹಾ ವಿಚಾರಿಸದೇ “ಹಲೋ ನಾನು ಆನಂದ, ಆನಂದ ಪೂಜಾರಿ, ಫೋನಿನಲ್ಲಿ ಮಾತಾಡ್ತಿದೀನಿ, ಏನ್ ಮತೇ ಚೆನಾಗಿದೀರಾ….” ಎಂದು ಪ್ರಾರಂಭಿಸಿಯೇಬಿಡುತ್ತಿದ್ದ. ಫೋನಿನಲ್ಲಿ ಮಾತನಾಡುವುದು, ನನಗೆ ಫೋನ್ ಬಂದಿತು,್ತ ಇವತ್ತು ಅವರಿಗೆ ಫೋನ್ ಮಾಡಿದೆ ಎನ್ನುವುದು ಪ್ರತಿಷ್ಠೆಯ ಪ್ರಶ್ನೆ ಎಂದು ಹೇಳಿಕೊಳ್ಳುವಂಥಾ ಕಾಲದಲ್ಲಿ ನಾನು ಚಾರಣ ಹೋಗುವ ಸಲುವಾಗಿ ಬೆಂಗಳೂರಿನ ಎನ್.ವೈ.ಎ.ಸಿಯವರನ್ನು ಸಂಪರ್ಕಿಸಲು ಯತ್ನಿಸಿದ್ದೆ.
ಏನು ಮಾಡಿದರೂ ಸಂಪರ್ಕ ಸಿಗದಿದ್ದಾಗ ಹಳೇ ಗಂಡನ ಪಾದವೇ ಗತಿ ಎಂದು ಪತ್ರವನ್ನೇ ಬರೆದು ವಿವರಗಳನ್ನು ತಿಳಿದುಕೊಂಡೆ. ಕಿವಿಗಿಂತಲೂ ಕೋಡು ಎತ್ತರವಿದ್ದರೂ ಕಿವಿಯ ಸ್ಥಾನವನ್ನು, ಯಾವಾಗ ಬೇಕಾದರೂ ಮುರಿದು ಹೋಗಬಹುದಾದ ಕೋಡು ತುಂಬಲು ಸಾಧ್ಯವಿಲ್ಲವೆಂದು ಮನವರಿಕೆಯಾಯ್ತು.

