ತುಮಕೂರು:ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್.ಐ.ಆರ್) ಕುರಿತಂತೆ ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಎಸ್.ಐ.ಆರ್. ಕುರಿತ ವಿಶೇಷ ಜಾಗೃತಿ ಕಾರ್ಯಾಗಾರವನ್ನು ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ವಿಧಾನಪರಿಷತ್ ಸದಸ್ಯ ಡಾ.ರಮೇಶಬಾಬು ಮಾತನಾಡಿ,ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಂತರವು ಆರ್ಹ ಮತದಾರ ತನ್ನ ಹಕ್ಕಿನಿಂದ ವಂಚಿತರಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಎರಡನೇ ಸ್ವಾತಂತ್ರ ಹೋರಾಟ ಇದಾಗಿದೆ. ಹಾಗಾಗಿ ಪ್ರತಿಯೊಬ್ಬ ಮತದಾರರು ಫಾರಂ ತುಂಬುವ ಮೂಲಕ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮತದಾರರನ್ನು ಸಂಪರ್ಕಿಸಿ,ಅವರಲ್ಲಿ ಜಾಗೃತಿ ಮೂಡಿಸುವ ಮೂಲಕ ಅವರ ಹಕ್ಕುಗಳನ್ನು ಕಾಪಾಡಬೇಕಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷರಾದ ಮುರುಳೀಧರ ಹಾಲಪ್ಪ ಮಾತನಾಡಿ,ಎಸ್.ಐ.ಆರ್.ನಿಂದಾಗಿ ಎಷ್ಟೇ ಅತಿರಥ,ಮಹಾರಥ ರೆನಿಸಿಕೊಂಡ ರಾಜಕೀಯ ಧುರೀಣರು ಸಹ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಸೋಲು ಕಂಡಿದ್ದಾರೆ. ಎಸ್.ಐ.ಆರ್ ನಿಂದ ಶಾಸನ ಸಭೆ, ಸಂಸತ್ ಸದಸ್ಯರಿಗೆ ಮಾತ್ರತೊಂದರೆಯಾಗುವುದಿಲ್ಲ.ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ,ಗ್ರಾಮಪಂಚಾಯಿತಿಚುನಾವಣೆಗೆ ಸ್ಪರ್ಧಿಸುವವರಿಗೂ ಹೊಡೆತ ಬೀಳಲಿದೆ.ಹಾಗಾಗಿ ಪ್ರತಿ ಹಳ್ಳಿಯಲ್ಲಿಯೂ ಮತದಾರರ ಹಕ್ಕು ರಕ್ಷಣೆಗೆ ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕಾಗಿದೆ.ಒಂದು ವೇಳೆ ಮೈಮರೆತರೆ ನಾವು ಸೋಲುವ ಜೊತೆಗೆ, ಪಕ್ಷವೂ ಅಧಿಕಾರ ಕಳೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ,ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಎಂಬುದು ಸ್ವಾಯತ್ತ ಸಂಸ್ಥೆಗಳು ಒಗ್ಗೂಡಿ,ಬಿಜೆಪಿಯನ್ನು ನಿರಂತರವಾಗಿ ಅಧಿಕಾರದಲ್ಲಿ ಇಡುವ ಹುನ್ನಾರ ವಾಗಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ಅಹಮದ್, ಟಿ.ಬಿ.ಜಯಚಂದ್ರ, ಎಸ್.ಪಿ.ಮುದ್ದಹನುಮೇಗೌಡ ಕೆ.ಎಸ್.ಕಿರಣ್ಕುಮಾರ್,ಡಾ.ಎಸ್.ಷಫಿಅಹಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
