ಹಾಸನ, ಜೂನ್ 17: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಸದಸ್ಯರು ನೋಂದಾಯಿಸಿಕೊಳ್ಳುವಂತೆ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಕರೆ ನೀಡಿದರು.
ಹಾಸನದ ಶ್ರೀ ಬಸವೇಶ್ವರ ದೇವಾಲಯ ಆವರಣದಲ್ಲಿ ಬುಧವಾರ ನಡೆದ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ತಾಲ್ಲೂಕು ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಮಹಾಸಭೆಯು ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮ, ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸದಸ್ಯತ್ವ ಅಭಿಯಾನವನ್ನು ಬಲಪಡಿಸಬೇಕಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚಿನ ಸದಸ್ಯತ್ವ ನೋಂದಣಿ ಮಾಡಿರುವ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಹಾಸನದಲ್ಲಿ ಬಾಳೆಹೊನ್ನೂರು ರಂಭಾಪುರಿ ಮಠದ ಜಗದ್ಗುರುಗಳನ್ನು ಆಹ್ವಾನಿಸಿ ಲಿಂಗಪೂಜೆ, ಲಿಂಗಧಾರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ಇದಲ್ಲದೆ, ಸ್ಥಳೀಯ ಆಸ್ಪತ್ರೆಗಳ ಸಹಯೋಗದೊಂದಿಗೆ ಹೃದಯ ತಪಾಸಣೆ ಹಾಗೂ ಆರೋಗ್ಯ ಶಿಬಿರಗಳನ್ನು ಆಯೋಜಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ತಾಲ್ಲೂಕು ಸಮಿತಿಯ ಉಪಾಧ್ಯಕ್ಷ ಟಿ.ಪಿ. ನಾಗರಾಜ್, ಲೀಲಾ ಧರ್ಮಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ವಿ. ಹೇಮಂತ್ ಕುಮಾರ್, ಸಹಕಾರ್ಯದರ್ಶಿ ಶೇಟ್ಟಿಹಳ್ಳಿ ಧರ್ಮ, ಚಾಂಧಿನಿ ಭೂಷಣ್, ಜಿಲ್ಲಾ ಉಪಾಧ್ಯಕ್ಷೆ ಗೀತಾ ಪುಟ್ಟಸ್ವಾಮಿ, ಜಿಲ್ಲಾ ನಿರ್ದೇಶಕರಾದ ಶೋಭನ್ ಬಾಬು, ಹೆಚ್.ಎನ್. ಶರತ್ ಭೂಷಣ್, ಹೆಚ್. ವಿಜಯ್ ಕುಮಾರ್, ತಾಲ್ಲೂಕು ನಿರ್ದೇಶಕರಾದ ರಾಜಶೇಖರ್ ಮೂರ್ತಿ (ಪಾಪು), ಡಿ.ವಿ. ಮದನ್, ಮಯೂರಿ ಲೋಕೇಶ್, ಸಾವಿತ್ರಿ ವಿಜಯ್ ಕುಮಾರ್, ಸಂಪತ್ ಕುಮಾರ್, ಮಲ್ಲಿಗೆವಾಳು ಮೋಹನ್ ಕುಮಾರ್, ದೇವರಾಜ್, ಬಿ. ದಿವಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಹಿಳಾ ನಿರ್ದೇಶಕರಾದ ಅನುಸೂಯಾ ಕಲ್ಯಾಣಕುಮಾರ್, ಸುಶೀಲಾ ಪಾಲನೇತ್ರ, ಸವಿತಾ ಭೂಷಣ್ ಹಾಗೂ ಶೈಲಾ ಮದನ್ ಅವರು ಹೆಚ್ಚಿನ ಸದಸ್ಯರನ್ನು ನೋಂದಾಯಿಸಿರುವ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.
– ಶಿವಕುಮಾರ್ ಕಟ್ಟಾಯ
