ಹಾಸನ, ಆ.3: ತೆರೆದ ಹಳೆಯ ಬಾವಿಗೆ ಬಿದ್ದು ಮೇಲೆ ಬರಲಾಗದೆ ನರಳಾಡುತ್ತಿದ್ದ ಬೀದಿನಾಯಿಯನ್ನು ತನ್ನ ಜೀವದ ಹಂಗು ತೊರೆದು ಬಾವಿಗೆ ಇಳಿದು ರಕ್ಷಿಸಿದ ಬಾಲಕನ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಂಡಿಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪಾಳು ಬಿದ್ದಿದ್ದ ತೆರೆದ ಬಾವಿಗೆ ಬೀದಿನಾಯಿಯೊಂದು ಬಿದ್ದು ಹೊರಬರಲಾಗದೆ ನರಳಾಡುತ್ತಿತ್ತು. ನಾಯಿಯ ಕರುಣಾಜನಕ ಸ್ಥಿತಿಯನ್ನು ಕಂಡ ಬಾಲಕ **ಅಕುಲ್** ಅದನ್ನು ರಕ್ಷಿಸಲು ಮುಂದಾದನು.
ಸ್ಥಳದಲ್ಲಿದ್ದ ಯುವಕನ ಸಹಾಯದಿಂದ ಹಳೆಯ ಟೈರ್ಗೆ ಹಗ್ಗ ಕಟ್ಟಿ, ಚೀಲವನ್ನು ತೆಗೆದುಕೊಂಡು ಅಕುಲ್ ಬಾವಿಯೊಳಗೆ ಇಳಿದನು. ಅಕುಲ್ ಬಾವಿಗೆ ಇಳಿಯುತ್ತಿದ್ದಂತೆ ಗಾಬರಿಗೊಂಡ ನಾಯಿ ಓಡಾಡಲು ಆರಂಭಿಸಿದ್ದರಿಂದ ಅದನ್ನು ಹಿಡಿಯಲು ಸಾಕಷ್ಟು ಹರಸಾಹಸ ಪಡಬೇಕಾಯಿತು.

ಕೊನೆಗೆ ನಾಯಿಯನ್ನು ಸುರಕ್ಷಿತವಾಗಿ ಚೀಲದೊಳಗೆ ಹಾಕಿ, ಚೀಲಕ್ಕೆ ಹಗ್ಗ ಕಟ್ಟಿ ಮೇಲಿದ್ದ ಯುವಕನಿಗೆ ಸೂಚನೆ ನೀಡಿದನು. ಯುವಕ ಹಗ್ಗದ ಮೂಲಕ ಚೀಲವನ್ನು ಮೇಲಕ್ಕೆ ಎಳೆದು ನಾಯಿಯನ್ನು ಸುರಕ್ಷಿತವಾಗಿ ಹೊರತೆಗೆದನು. ಬಳಿಕ ಅಕುಲ್ ಕೂಡ ಟೈರ್ನ ಸಹಾಯದಿಂದ ಬಾವಿಯಿಂದ ಮೇಲಕ್ಕೆ ಬಂದನು.
ಬಾಲಕ ಅಕುಲ್ನ ಧೈರ್ಯ, ಜೀವದ ಮೇಲಿನ ಕಾಳಜಿ ಮತ್ತು ಮಾನವೀಯತೆಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಪಾಯಕಾರಿಯಾಗಿ ತೆರೆದಿರುವ ಇಂತಹ ಹಳೆಯ ಬಾವಿಗಳನ್ನು ತಕ್ಷಣ ಮುಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
