ಅರಕಲಗೂಡು, ಜೂನ್ 17: ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಟಿ. ಮಾಯೆಗೌಡನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಮೂರು ಕರುಗಳಿಗೆ ಗಾಯಗೊಳಿಸಿರುವ ಘಟನೆ ಮುಂಜಾನೆ ಸಂಭವಿಸಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಗ್ರಾಮದ ನಿವಾಸಿ ದಿಲೀಪ್ ಅವರಿಗೆ ಸೇರಿದ ಜಾನುವಾರು ಶೆಡ್ಗೆ ಮುಂಜಾನೆ ಸುಮಾರು 5 ಗಂಟೆ ವೇಳೆಗೆ ನುಗ್ಗಿದ ಚಿರತೆ, ಅಲ್ಲಿದ್ದ ಮೂರು ಕರುಗಳ ಮೇಲೆ ಏಕಾಏಕಿ ದಾಳಿ ನಡೆಸಿದೆ. ಚಿರತೆಯ ದಾಳಿಯಿಂದ ಕರುಗಳು ಗಾಯಗೊಂಡಿದ್ದು, ಅವುಗಳ ಕಿರುಚಾಟ ಕೇಳಿ ಮನೆಯವರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದಾಗ ಚಿರತೆ ಅಲ್ಲಿಂದ ಪರಾರಿಯಾಗಿದೆ ಎಂದು ತಿಳಿದುಬಂದಿದೆ.
ಗ್ರಾಮದ ಮಧ್ಯಭಾಗದ ಸಮೀಪವೇ ಈ ಘಟನೆ ನಡೆದಿರುವುದರಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆ ಓಡಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದು, ಇದೀಗ ನೇರವಾಗಿ ಜಾನುವಾರು ಶೆಡ್ಗೆ ನುಗ್ಗಿ ದಾಳಿ ನಡೆಸಿರುವುದು ಭಯವನ್ನು ಮತ್ತಷ್ಟು ಹೆಚ್ಚಿಸಿದೆ.
ಗ್ರಾಮದ ಸುತ್ತಮುತ್ತ ದಟ್ಟ ಪೊದೆಗಳು, ತೋಟಗಳು ಹಾಗೂ ಕೃಷಿ ಜಮೀನುಗಳಿರುವ ಕಾರಣ ಚಿರತೆ ಆಶ್ರಯ ಪಡೆದಿರಬಹುದೆಂದು ಸ್ಥಳೀಯರು ಶಂಕಿಸಿದ್ದಾರೆ. ಚಿರತೆ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರು ಹಾಗೂ ಕೂಲಿ ಕಾರ್ಮಿಕರು ಮುಂಜಾನೆ ಮತ್ತು ಸಂಜೆ ವೇಳೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೆರಳಲು ಆತಂಕ ಪಡುತ್ತಿದ್ದಾರೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಮನೆಯಿಂದ ಹೊರಬರಲು ಸಹ ಭಯಪಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಘಟನೆ ಕುರಿತು ಜಾನುವಾರುಗಳ ಮಾಲೀಕ ದಿಲೀಪ್ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅಧಿಕಾರಿಗಳು ಶೀಘ್ರದಲ್ಲೇ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಚಿರತೆಯನ್ನು ಸೆರೆಹಿಡಿಯಲು ಬೋನ್ ಅಳವಡಿಸುವ ಭರವಸೆಯನ್ನೂ ನೀಡಿದ್ದಾರೆ.
“ಮುಂಜಾನೆ ಸುಮಾರು 5 ಗಂಟೆ ವೇಳೆಗೆ ಚಿರತೆ ನಮ್ಮ ಶೆಡ್ಗೆ ನುಗ್ಗಿ ಮೂರು ಕರುಗಳ ಮೇಲೆ ದಾಳಿ ನಡೆಸಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ” ಎಂದು ದಿಲೀಪ್ ಹೇಳಿದರು.
ಗ್ರಾಮಸ್ಥರು ಚಿರತೆ ಸಂಚಾರವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಬೋನ್ ಅಳವಡಿಸುವುದು, ರಾತ್ರಿ ವೇಳೆ ಗಸ್ತು ವ್ಯವಸ್ಥೆ ಮಾಡುವುದು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
