ಚನ್ನರಾಯಪಟ್ಟಣ : ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವುದು ಸಮಾಜದ ಕರ್ತವ್ಯ, ಕನ್ನಡ ಸಾಹಿತ್ಯ ಪರಿಷತ್ ಘಟಕವು ಮಕ್ಕಳನ್ನು ಅಭಿನಂದಿಸುವ ಮೂಲಕ ಅವರು ಹೆಚ್ಚಿನ ಸಾಧನೆ ಮಾಡುವಂತೆ ಪ್ರೇರೆಪಿಸುತ್ತಿರುವುದು ಉತ್ತಮವಾದ ಕೆಲಸ ಎಂದು ಆದಿಚುಂಚನಗಿರಿ ಹಾಸನ–ಕೊಡಗು ಮಠದ ಕಾರ್ಯದರ್ಶಿಗಳಾದ ಶಂಭುನಾಥಸ್ವಾಮೀಜಿ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಹಿರೀಸಾವೆ ಹೋಬಳಿ ಘಟಕವು ಇಲ್ಲಿನ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಹಯೋಗದಲ್ಲಿ ಏರ್ಪಡಿಸಿದ್ದ 2025–26ನೇ ಸಾಲಿನ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಮತ್ತು ಕನ್ನಡ ಭಾಷೆಯಲ್ಲಿ ಪೂರ್ಣ ಅಂಕಗಳನ್ನುಗಳಿಸಿದ ಹೋಬಳಿಯ ಶಾಲೆಗಳ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ವಿದ್ಯೆ ಕಲಿತವರು ದಾರಿ ತಪ್ಪಬಹುದು, ಆದರೆ ಸಂಸ್ಕಾರ ಕಲಿತವರು ಎಂದಿಗೂ ದಾರಿ ತಪ್ಪುವುದಿಲ್ಲ. ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮಿಜಿಗಳು 1986 ರಲ್ಲಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿ, ಮಕ್ಕಳಿಗೆ ಕೃತಿಗಳನ್ನು ರಚನೆ ಮಾಡಲು ಪ್ರೇರೆಪಿಸಿದರು ಎಂದರು.
ಕನ್ನಡ ಭಾಷೆ ಅಮೃತ ಭಾಷೆ, ರಾಜ್ಯದಲ್ಲಿರುವ ಅನ್ಯಭಾಷಿಕರಿಗೆ ಕನ್ನಡವನ್ನು ಕಲಿಸಬೇಕು. ಐಎಎಸ್, ಐಪಿಎಸ್ ಸೇರಿದಂತೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಕನ್ನಡ ಭಾಷೆ ಕಲಿತು, ಕೆಲಸ ಮಾಡಿದಾಗ ಜನರಿಗೆ ಅನುಕೂಲವಾಗುತ್ತದೆ. ಇತ್ತೀಚೆಗೆ ಕೆಲವು ನ್ಯಾಯಾಲಯದ ತೀರ್ಪುಗಳು ಕನ್ನಡದಲ್ಲಿ ಬರುತ್ತಿವೆ, ಮಂದಿನ ದಿನಗಳಲ್ಲಿ ಎಲ್ಲಾ ಕೋರ್ಟ್ ಗಳ ಆದೇಶ, ತೀರ್ಪುಗಳು ಸ್ಥಳಿಯ ಭಾಷೆಯಲ್ಲಿ ಬರುವಂತೆ ಅಗಬೇಕು ಎಂದರು.
ಸಾಹಿತಿ ಪ್ರೊ ಹೊಸೂರು ಎನ್ ತಮ್ಮಣ್ಣಗೌಡ ಮಾತನಾಡಿ, ಮಕ್ಕಳಲ್ಲಿ ಇರುವ ಜ್ಞಾನವು ಪರೀಕ್ಷೆಗಳ ಮೂಲಕ ಪ್ರತಿಭೆಯಾಗಿ ಹೊರಬರುತ್ತದೆ. ಮನೆಯಲ್ಲಿ ಹಿರಿಯರು, ಶಾಲೆಯಲ್ಲಿ ಶಿಕ್ಷಕರು ಮತ್ತು ಸಭೆಯಲ್ಲಿ ಗುರುಗಳು ಹೇಳುವುದನ್ನು ಶ್ರದ್ಧೆಯಿಂದ ಕೇಳಿದರೆ, ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದರು.ಹಿರೀಸಾವೆ
ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಹೆಚ್.ಎ. ಪ್ರಮೋದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಪ್ರೋ.ಹೆಚ್.ಪಿ ಶಂಕರ್, ಮಾಜಿ ಅಧ್ಯಕ್ಷರಾದ ಹೆಚ್.ಇ.ಬೋರಣ್ಣ, ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಟಿ.ತಿಮ್ಮೇಗೌಡ, ಕಸಾಪದ ಪದಾಧಿಕಾರಿಗಳು ಹಾಜರಿದ್ದರು.
