ಚನ್ನರಾಯಪಟ್ಟಣ, ಜೂನ್ 19: ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವುದು ಸಮಾಜದ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳನ್ನು ಅಭಿನಂದಿಸುವ ಮೂಲಕ ಹೆಚ್ಚಿನ ಸಾಧನೆಗೆ ಪ್ರೇರೇಪಿಸುವ ಕನ್ನಡ ಸಾಹಿತ್ಯ ಪರಿಷತ್ ಹಿರೀಸಾವೆ ಹೋಬಳಿ ಘಟಕದ ಕಾರ್ಯ ಶ್ಲಾಘನೀಯ ಎಂದು ಹಾಸನ–ಕೊಡಗು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಿರೀಸಾವೆ ಹೋಬಳಿ ಘಟಕ ಆಯೋಜಿಸಿದ್ದ 2025–26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಹಾಗೂ ಕನ್ನಡ ವಿಷಯದಲ್ಲಿ ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಡೆದ ‘ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

“ವಿದ್ಯೆ ಕಲಿತವರು ದಾರಿ ತಪ್ಪಬಹುದು, ಆದರೆ ಸಂಸ್ಕಾರ ಕಲಿತವರು ಎಂದಿಗೂ ದಾರಿ ತಪ್ಪುವುದಿಲ್ಲ. ಆದಿಚುಂಚನಗಿರಿ ಮಠದ ಪರಮಪೂಜ್ಯ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು 1986ರಲ್ಲಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು” ಎಂದು ಸ್ಮರಿಸಿದರು.

ಕನ್ನಡ ಭಾಷೆ ಅಮೃತ ಭಾಷೆಯಾಗಿದ್ದು, ರಾಜ್ಯದಲ್ಲಿರುವ ಅನ್ಯಭಾಷಿಕರು ಕನ್ನಡ ಕಲಿಯಬೇಕು. ಐಎಎಸ್, ಐಪಿಎಸ್ ಸೇರಿದಂತೆ ಕೇಂದ್ರ ಸರ್ಕಾರದ ಅಧಿಕಾರಿಗಳು ಕನ್ನಡ ಭಾಷೆ ಕಲಿತು ಕಾರ್ಯನಿರ್ವಹಿಸಿದರೆ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ನ್ಯಾಯಾಲಯಗಳ ತೀರ್ಪುಗಳು ಮತ್ತು ಆದೇಶಗಳು ಸಹ ಸ್ಥಳೀಯ ಭಾಷೆಯಲ್ಲಿ ಲಭ್ಯವಾಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಪ್ರೊ. ಹೊಸೂರು ಎನ್. ತಮ್ಮಣ್ಣಗೌಡ ಮಾತನಾಡಿ, ಮಕ್ಕಳಲ್ಲಿರುವ ಜ್ಞಾನವು ಪರೀಕ್ಷೆಗಳ ಮೂಲಕ ಪ್ರತಿಭೆಯಾಗಿ ಹೊರಹೊಮ್ಮುತ್ತದೆ. ಮನೆಯಲ್ಲಿ ಹಿರಿಯರು, ಶಾಲೆಯಲ್ಲಿ ಶಿಕ್ಷಕರು ಹಾಗೂ ಸಮಾಜದಲ್ಲಿ ಗುರುಗಳು ನೀಡುವ ಮಾರ್ಗದರ್ಶನವನ್ನು ಶ್ರದ್ಧೆಯಿಂದ ಪಾಲಿಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ಹಿರೀಸಾವೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಹೆಚ್.ಎ. ಪ್ರಮೋದ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪ್ರೊ. ಹೆಚ್.ಪಿ. ಶಂಕರ್, ಮಾಜಿ ಅಧ್ಯಕ್ಷ ಹೆಚ್.ಇ. ಬೋರಣ್ಣ, ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಟಿ. ತಿಮ್ಮೇಗೌಡ ಹಾಗೂ ಕಸಾಪದ ಪದಾಧಿಕಾರಿಗಳು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
