ಕೊರಟಗೆರೆ : – ಕಷ್ಟಕಾಲದಲ್ಲಿ ನೆರವಾಗಲೆಂದು ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಜೀವ ವಿಮೆ (ಆರ್ಪಿಎಲ್ಐ) ಯೋಜನೆಯಲ್ಲಿ ಹೂಡಿಕೆ ಮಾಡಿದ್ದ ಹಣವನ್ನು ಪಡೆಯಲು ಮಹಿಳೆಯೊಬ್ಬರು ಅಲೆದಾಡುತ್ತಿರುವ ಘಟನೆ ಕೊರಟಗೆರೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ತಾಲೂಕಿನ ಹುಲಿಕುಂಟೆ ಗ್ರಾಮದ ಗೌಸ್ ಬಿ ಅವರು, ತಮ್ಮ ಮಗಳ ಮದುವೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಸಿ ಅವಧಿ ಪೂರ್ಣಗೊಂಡ ಬಳಿಕ ದೊರೆಯಬೇಕಾದ ಬಾಂಡ್ ಮೊತ್ತ ಹಾಗೂ ಬೋನಸ್ ಹಣವನ್ನು ಬಿಡುಗಡೆ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಗೌಸ್ ಬಿ ಅವರು ಸುಮಾರು 15 ವರ್ಷಗಳ ಹಿಂದೆ ಗ್ರಾಮೀಣ ಅಂಚೆ ಜೀವ ವಿಮೆ ಯೋಜನೆಗೆ ಸೇರ್ಪಡೆಗೊಂಡು ಪ್ರತಿ ತಿಂಗಳು ₹78 ಪ್ರೀಮಿಯಂ ಪಾವತಿಸುತ್ತಾ ಬಂದಿದ್ದಾರೆ. ಪಾಲಿಸಿ ಅವಧಿ ಪೂರ್ಣಗೊಂಡಿರುವ ಕಾರಣ ಹಣ ಬಿಡುಗಡೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರೂ, ವಿವಿಧ ದಾಖಲೆಗಳ ನೆಪದಲ್ಲಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನ ಮಗಳ ಮದುವೆ ನಿಗದಿಯಾಗಿದೆ. ಈ ಸಂದರ್ಭದಲ್ಲಿ ಹಣದ ಅವಶ್ಯಕತೆ ಹೆಚ್ಚಾಗಿದೆ. ಹಲವು ಬಾರಿ ಕಚೇರಿಗೆ ಭೇಟಿ ನೀಡಿದ್ದೇನೆ. ಈಗ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಕೇಳಲಾಗುತ್ತಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಬಳಿಕವೂ ಹಣ ಬಿಡುಗಡೆಗೆ ವಿಳಂಬ ಮಾಡುತ್ತಿರುವುದು ಬೇಸರ ತಂದಿದೆ ಎಂದು ಅವರು ದೂರಿದ್ದಾರೆ.
ಹುಲಿಕುಂಟೆ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಸುಶೀಲಮ್ಮ ಅವರ ವಿರುದ್ಧವೂ ಗೌಸ್ ಬಿ ಆಕ್ರೋಶ ವ್ಯಕ್ತಪಡಿಸಿದ್ದು, ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಿ ತಮ್ಮ ಹಣವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಜೀವ ವಿಮೆ ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ಕಡಿಮೆ ಪ್ರೀಮಿಯಂನಲ್ಲಿ ವಿಮಾ ರಕ್ಷಣೆ ಹಾಗೂ ಬೋನಸ್ ಸೌಲಭ್ಯ ಒದಗಿಸುವ ಉದ್ದೇಶದಿಂದ ಜಾರಿಯಲ್ಲಿದ್ದು, ಯೋಜನೆಯ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಸೇವೆ ದೊರೆಯಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಈ ಕುರಿತು ಅಂಚೆ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದ್ದು, ಫಲಾನುಭವಿಯ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
