ಕೊರಟಗೆರೆ : – ತಾಲೂಕಿನ ಮಲ್ಪನಹಳ್ಳಿ ಗ್ರಾಮದಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದ ಊಟ ಸೇವಿಸಿದ ಬಳಿಕ 25ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ಶುಕ್ರವಾರ ವರದಿಯಾಗಿದೆ.
ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಊಟ ಸೇವಿಸಿ ಮನೆಗಳಿಗೆ ತೆರಳಿದ್ದ ಗಂಡು ಹಾಗೂ ಹೆಣ್ಣಿನ ಮನೆಯವರಲ್ಲಿ ಹಲವರಿಗೆ ಏಕಾಏಕಿ ವಾಂತಿ, ಭೇದಿ, ಸುಸ್ತು ಸೇರಿದಂತೆ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಅವರನ್ನು ತಕ್ಷಣ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಸ್ವಸ್ಥಗೊಂಡವರಲ್ಲಿ 6ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಹಾಗೂ 4ನೇ ತರಗತಿ ವಿದ್ಯಾರ್ಥಿ ಆದಿತ್ಯ ಸೇರಿದಂತೆ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 15 ಮಂದಿಯನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ತೀವ್ರ ಅಸ್ವಸ್ಥಗೊಂಡ ಕೆಲವರನ್ನು ಐಸಿಯು ಘಟಕದಲ್ಲಿ ದಾಖಲಿಸಿ ನಿಗಾ ವಹಿಸಲಾಗಿದೆ. ಹತ್ತಕ್ಕೂ ಹೆಚ್ಚು ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವೈದ್ಯಕೀಯ ಸಿಬ್ಬಂದಿ ತುರ್ತು ಚಿಕಿತ್ಸೆಗೆ ಮುಂದಾಗಿದ್ದು, ರೋಗಿಗಳ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಆಹಾರ ವಿಷಬಾಧೆ ಶಂಕೆ ವ್ಯಕ್ತವಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಘಟನೆಯ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಕುರಿತು ಆಸ್ಪತ್ರೆಯ ವೈದ್ಯ ರಾಮಕೃಷ್ಣಯ್ಯ ಮಾತನಾಡಿ ಎಲ್ಲಾ ರೋಗಿಗಳಿಗೂ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಬಹುತೇಕ ರೋಗಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
