ಹಾಸನ, ಜೂ.೨೨: ಬೇಲೂರು ತಾಲ್ಲೂಕಿನಲ್ಲಿ ನಡೆದಿರುವುದಾಗಿ ಆರೋಪಿಸಲಾಗಿರುವ ಬಗರ್ಹುಕುಂ ಭೂ ಮಂಜೂರಾತಿ ಹಗರಣ ಪ್ರಕರಣ ಇದೀಗ ಮಹತ್ವದ ಘಟ್ಟ ತಲುಪಿದ್ದು, ಸಿಐಡಿ ತನಿಖೆ ಪೂರ್ಣಗೊಂಡ ನಂತರ ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಲಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಾನೂನು ಪ್ರಕಾರ ಶಿಕ್ಷೆಯಾಗುವ ವಿಶ್ವಾಸವಿದೆ ಎಂದು ದೂರುದಾರ ಕೆ.ಆರ್. ರಾಮಣ್ಣ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಹಲವು ವರ್ಷಗಳಿಂದ ಹೋರಾಟ ನಡೆಸಿದ ಪರಿಣಾಮ ಪ್ರಕರಣ ಇಂದು ನಿರ್ಣಾಯಕ ಹಂತಕ್ಕೆ ತಲುಪಿದೆ. ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿರುವ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆದಿದ್ದು, ಈಗ ಸತ್ಯಾಂಶಗಳು ಒಂದೊಂದಾಗಿ ಹೊರಬರುತ್ತಿವೆ. ಬಗರ್ಹುಕುಂ ಸಕ್ರಮ ಸಮಿತಿಯ ಮೂಲಕ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ನಿಯಮ ಉಲ್ಲಂಘಿಸಿ ಹಂಚಿಕೆ ಮಾಡಲಾಗಿದೆ ಎಂಬುದು ಪ್ರಕರಣದ ಕೇಂದ್ರಬಿಂದುವಾಗಿದೆ.
ಸುಮಾರು ೨,೭೫೦ ಎಕರೆ ಭೂಮಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಅಕ್ರಮ ಕಂಡುಬಂದಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಮಂಜೂರು ಮಾಡಿರುವ ಗಂಭೀರ ಆರೋಪಗಳಿವೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿರುವುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಂದಿನ ತಹಶೀಲ್ದಾರರು, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಸುಮಾರು ೩೦ ಮಂದಿ ವಿವಿಧ ಹಂತಗಳಲ್ಲಿ ಪಾತ್ರವಹಿಸಿದ್ದಾರೆ ಎಂಬ ಆರೋಪವಿದ್ದು, ಈಗಾಗಲೇ ೧೬ ಮಂದಿಯನ್ನು ಬಂಧಿಸಲಾಗಿದೆ ಎಂದರು. ಪ್ರಕರಣದ ಆರಂಭದ ದಿನಗಳನ್ನು ನೆನಪಿಸಿಕೊಂಡ ರಾಮಣ್ಣ, ಮೊದಲಿಗೆ ತಮ್ಮ ದೂರನ್ನು ಪೊಲೀಸರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು ಎಂದು ಆರೋಪಿಸಿದರು.
ನಂತರ ವಿಶೇಷ ನ್ಯಾಯಾಲಯದ ಮೊರೆ ಹೋಗಿ ಕಾನೂನು ಹೋರಾಟ ನಡೆಸಿದ ಪರಿಣಾಮ ೨೦೨೩ರ ಜನವರಿ ೨೩ರಂದು ಪ್ರಕರಣ ದಾಖಲಾಗಿತ್ತು ಎಂದು ಹೇಳಿದರು. ಪ್ರಕರಣ ದಾಖಲಾಗಿದ ನಂತರ ಆರೋಪಿಗಳು ವಿವಿಧ ನ್ಯಾಯಾಲಯಗಳಲ್ಲಿ ಜಾಮೀನು ಹಾಗೂ ಎಫ್ಐಆರ್ ರದ್ದುಪಡಿಸುವ ಪ್ರಯತ್ನ ನಡೆಸಿದರೂ ನ್ಯಾಯಾಲಯಗಳು ಅದನ್ನು ತಿರಸ್ಕರಿಸಿವೆ.
ಇತ್ತೀಚೆಗೆ ಜಾಮೀನು ಅರ್ಜಿಯೂ ತಿರಸ್ಕೃತವಾದ ಹಿನ್ನೆಲೆಯಲ್ಲಿ ಸಿಐಡಿ ಕ್ರಮ ಮತ್ತಷ್ಟು ಚುರುಕುಗೊಂಡಿದೆ ಎಂದು ತಿಳಿಸಿದರು. ೨೦೧೬ರಿಂದ ೨೦೨೨ರ ನಡುವೆ ಬಗರ್ಹುಕುಂ ಯೋಜನೆಯಡಿ ಸಲ್ಲಿಕೆಯಾಗಿದ್ದ ಎರಡು ಸಾವಿರಕ್ಕೂ ಅಧಿಕ ಅರ್ಜಿಗಳ ಪೈಕಿ ಸುಮಾರು ೧,೪೩೦ ಅರ್ಜಿಗಳು ಅನುಮಾನಾಸ್ಪದವಾಗಿವೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ. ಹಲವಾರು ಅರ್ಜಿದಾರರು ಯೋಜನೆಯ ಮಾನದಂಡಗಳಿಗೆ ಅರ್ಹರಾಗಿರಲಿಲ್ಲ. ಆದರೂ ಅವರಿಗೆ ಭೂಮಿ ಮಂಜೂರು ಮಾಡಿರುವುದು ದಾಖಲೆಗಳಿಂದ ಗೊತ್ತಾಗಿದೆ ಎಂದು ಹೇಳಿದರು.
ಕೆಲವು ಅರ್ಜಿಗಳಲ್ಲಿ ಅರ್ಜಿದಾರರ ಮಾಹಿತಿ, ಭೂಮಿಯ ವಿವರ ಹಾಗೂ ದಾಖಲೆಗಳಲ್ಲಿ ತೀವ್ರ ವೈರುಧ್ಯಗಳು ಕಂಡುಬಂದಿದ್ದು, ಇವು ಅಕ್ರಮ ಮಂಜೂರಾತಿಗೆ ಸಾಕ್ಷಿಯಾಗಿವೆ ಎಂದು ಆರೋಪಿಸಿದರು.
ಅಂದಿನ ಸಕಲೇಶಪುರ ಉಪವಿಭಾಗಾಧಿಕಾರಿ ಪ್ರತೀಕ್ ಬಯಲ್ ನಡೆಸಿದ ಪರಿಶೀಲನಾ ವರದಿಯಲ್ಲೂ ಹಲವು ಗಂಭೀರ ಅಂಶಗಳು ಬೆಳಕಿಗೆ ಬಂದಿವೆ. ಅನೇಕ ಕಡತಗಳಲ್ಲಿ ನಿಯಮಗಳನ್ನು ಪಾಲಿಸದೆ ಭೂಮಿ ಮಂಜೂರು ಮಾಡಲಾಗಿದೆ ಹಾಗೂ ದಾಖಲೆಗಳ ನೈಜತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ ಎಂದು ರಾಮಣ್ಣ ಹೇಳಿದರು.
ಬಗರ್ಹುಕುಂ ಸಕ್ರಮ ಸಮಿತಿಯ ಅಧ್ಯಕ್ಷರಾಗಿದ್ದ ಕಾರಣ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಈ ಪ್ರಕರಣದ ನೈತಿಕ ಹಾಗೂ ಆಡಳಿತಾತ್ಮಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಆರೋಪಿಸಿದರು.
ಈ ಹಗರಣದ ಮೂಲಕ ಅಕ್ರಮವಾಗಿ ಮಂಜೂರಾಗಿರುವ ಸರ್ಕಾರಿ ಭೂಮಿಯನ್ನು ವಾಪಸ್ ಸರ್ಕಾರದ ವಶಕ್ಕೆ ಪಡೆಯಬೇಕು. ಜೊತೆಗೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಇದು ಕೇವಲ ಒಂದು ವ್ಯಕ್ತಿ ಅಥವಾ ಒಂದು ಹುದ್ದೆಗೆ ಸಂಬಂಧಿಸಿದ ಪ್ರಕರಣವಲ್ಲ. ಸರ್ಕಾರಿ ಆಸ್ತಿಯ ರಕ್ಷಣೆಯ ಪ್ರಶ್ನೆ. ಆದ್ದರಿಂದ ನ್ಯಾಯಾಲಯ ಸಂಪೂರ್ಣ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಹೇಳಿದರು. ಸಿಐಡಿ ತನಿಖೆ ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಬಳಿಕ ಪ್ರಕರಣದ ವಿಚಾರಣೆ ವೇಗ ಪಡೆದು ಸತ್ಯ ಹೊರಬರಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಕಾಂತ್ ಇತರರು ಉಪಸ್ಥಿತರಿದ್ದರು.
