ನವದೆಹಲಿ, ಜೂನ್ 27: ಭಾರತ ಮತ್ತು ಬ್ರಿಟನ್ ನಡುವಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಜುಲೈ 15ರಿಂದ ಜಾರಿಗೆ ಬರಲಿದ್ದು, ದೇಶದ ಜವಳಿ ಹಾಗೂ ಉಡುಪು ಉದ್ಯಮಕ್ಕೆ ಮಹತ್ವದ ಉತ್ತೇಜನ ದೊರೆಯುವ ನಿರೀಕ್ಷೆಯಿದೆ. ಈ ಒಪ್ಪಂದದಡಿ ಬ್ರಿಟನ್ಗೆ ರಫ್ತು ಮಾಡುವ ಭಾರತದ ಶೇ.99ರಷ್ಟು ಉತ್ಪನ್ನಗಳಿಗೆ ಸುಂಕಮುಕ್ತ ಪ್ರವೇಶ ಸಿಗಲಿದ್ದು, ಭಾರತೀಯ ರಫ್ತುದಾರರಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ.
ಪ್ರಸ್ತುತ ಬ್ರಿಟನ್ಗೆ ರಫ್ತು ಮಾಡುವ ಜವಳಿ ಮತ್ತು ಉಡುಪುಗಳ ಮೇಲಿರುವ ಶೇ.12ರವರೆಗಿನ ಆಮದು ಸುಂಕ ಸಂಪೂರ್ಣ ತೆರವಾಗಲಿದ್ದು, ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಭಾರತದ ಉಡುಪು ರಫ್ತು ಆದಾಯಕ್ಕೆ ವಾರ್ಷಿಕ 1.35 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹11,610 ಕೋಟಿ) ಹೆಚ್ಚುವರಿ ಆದಾಯ ಸೇರ್ಪಡೆಯಾಗುವ ಸಾಧ್ಯತೆ ಇದೆ.
ತಜ್ಞರ ಅಂದಾಜಿನಂತೆ, ಬ್ರಿಟನ್ನ ಉಡುಪು ಆಮದು ಮಾರುಕಟ್ಟೆಯಲ್ಲಿ ಭಾರತದ ಪಾಲು ಈಗಿನ ಶೇ.6ರಿಂದ ಶೇ.12ಕ್ಕೆ ಏರಿಕೆಯಾಗುವ ನಿರೀಕ್ಷೆಯಿದ್ದು, ಇದು ದೇಶದ ಜವಳಿ ಉದ್ಯಮಕ್ಕೆ ಹೊಸ ಚೈತನ್ಯ ನೀಡಲಿದೆ.

ಉಡುಪು ರಫ್ತು ಉತ್ತೇಜನ ಮಂಡಳಿ (AEPC) ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ, ಭಾರತದ ಮುಕ್ತ ವ್ಯಾಪಾರ ಒಪ್ಪಂದಗಳ (FTA) ಬಳಕೆ ಇನ್ನೂ ಶೇ.25ರಷ್ಟೇ ಇರುವುದರಿಂದ, ಅದರ ಪ್ರಯೋಜನವನ್ನು ಹೆಚ್ಚಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು.
ಎಇಪಿಸಿಯ ಪ್ರಧಾನ ಕಾರ್ಯದರ್ಶಿ ಮಿಥಿಲೇಶ್ವರ್ ಠಾಕೂರ್ ಮಾತನಾಡಿ, ಭಾರತ–ಬ್ರಿಟನ್ ಎಫ್ಟಿಎಯಲ್ಲಿನ Rules of Origin ನಿಯಮಗಳು ಇತರ ಅನೇಕ ವ್ಯಾಪಾರ ಒಪ್ಪಂದಗಳಿಗಿಂತ ಹೆಚ್ಚು ಅನುಕೂಲಕರವಾಗಿದ್ದು, ವಿಶೇಷವಾಗಿ ಭಾರತೀಯ ಜವಳಿ ಮತ್ತು ಉಡುಪು ರಫ್ತುದಾರರಿಗೆ ಹೆಚ್ಚಿನ ಸ್ಪರ್ಧಾತ್ಮಕ ಲಾಭವನ್ನು ನೀಡಲಿವೆ ಎಂದು ತಿಳಿಸಿದರು.
ಭಾರತವು ಈಗಾಗಲೇ 50ಕ್ಕೂ ಹೆಚ್ಚು ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಹೊಂದಿದ್ದು, ಬ್ರಿಟನ್ನೊಂದಿಗೆ ಜಾರಿಯಾಗಲಿರುವ ಹೊಸ ಒಪ್ಪಂದವು ಜಾಗತಿಕ ಜವಳಿ ಹಾಗೂ ಉಡುಪು ರಫ್ತು ಮಾರುಕಟ್ಟೆಯಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
