ಕೆ.ಆರ್.ಪೇಟೆ: ಪರಿಸರ ಸಂರಕ್ಷಣೆ ಎಂಬುದು ಕೇವಲ ಯಾವುದೋ ಒಬ್ಬ ವ್ಯಕ್ತಿ, ಸಂಸ್ಥೆ, ಸರ್ಕಾರದ ಹೊಣೆಯಲ್ಲಿ ಬದಲಿಗೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಮಾಜ ಸೇವಕ ಆರ್ಟಿಓ ಮಲ್ಲಿಕಾರ್ಜುನ ತಿಳಿಸಿದರು.
ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಊಗಿನಹಳ್ಳಿ ಕಾರೇಮೇಳೆ ಶ್ರೀ ಸಿಂಗಮ್ಮ ದೇವಸ್ಥಾನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಾಮಿ ವಿವೇಕಾನಂದ ಸ್ವಯಂ ಸೇವಾ ಪ್ರತಿಷ್ಠಾನ ಹಾಗೂ ಪುನರಪಿ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ನೂರಕ್ಕೂ ಹೆಚ್ಚು ವಿವಿಧ ತಳಿಯ ಸಸಿಗಳನ್ನು ನೆಡುವ ಮೂಲಕ ಮತ್ತು ದೇವಾಲಯದ ಸುತ್ತಮುತ್ತ ಬೃಹತ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಿಡ ನೆಟ್ಟ ಮಾತ್ರಕ್ಕೆ ಅರಣ್ಯ ನಿರ್ಮಿಸಿದೊ ಎನ್ನುಕೊಳ್ಳಬಾರದು.ನೆಟ್ಟ ಸಸಿಗಳನ್ನ ತಮ್ಮ ಮಕ್ಕಳಂತೆ ಪೋಷಣೆ ಮಾಡಿ ಸಂರಕ್ಷಣೆ ಮಾಡಬೇಕು. ಮಳೆಗಾಲದಲ್ಲಿ ನೆಟ್ಟು ಬಿಟ್ಟು ಹೋದರೆ ಸಾಲದು, ಬೇಸಿಗೆಯಲ್ಲಿ ನೀರು ಹಾಕಿ ಕಾಪಾಡಬೇಕು. ಜೊತೆಗೆ ಸ್ಥಳೀಯ ಕಾರೇಮೇಳೆ ಸಿಂಗಮ್ಮ ದೇವಿ ಟೀಮ್ ಯುವಕರು ಆಸಕ್ತಿ ಹೆಚ್ಚಿಸಿಕೊಂಡು ನಿರಂತರವಾಗಿ ಆರೈಕೆ ಮಾಡಬೇಕು. ಪ್ರತಿಯೊಂದು ಸಸಿಯೂ ಒಂದು ಮರವಾಗಿ ಬೆಳೆದಾಗ ಮಾತ್ರ ಈ ಕಾರ್ಯಕ್ರಮ ಸಾರ್ಥಕ. ನಮ್ಮ ಪೂರ್ವಜರು ನಮಗೆ ಕೊಟ್ಟ ಹಸಿರು ಆಸ್ತಿಯನ್ನು ನಾವು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಜಾಣೆಗೌಡ ಮಾತನಾಡಿ ಒಂದು ಮರ ಕಡಿದರೆ ಹತ್ತು ಮರ ನೆಡಬೇಕು ಎಂಬುದು ಕೇವಲ ಘೋಷಣೆಯಾಗದೆ ಕಾರ್ಯರೂಪಕ್ಕೆ ಬರಬೇಕು. ಪರಿಸರ ಉಳಿದರೆ ಮಾತ್ರ ಮಾನವ ಉಳಿಯಲು ಸಾಧ್ಯ. ಇಂದು ಜಾಗತಿಕ ತಾಪಮಾನ, ಮಳೆ ಕೊರತೆ, ಅಂತರ್ಜಲ ಕುಸಿತ ಎಲ್ಲದಕ್ಕೂ ಕಾರಣ ಮರಗಳ ನಾಶ. ದೇವಾಲಯಗಳು, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳ ಆವರಣದಲ್ಲಿ ಕಡ್ಡಾಯವಾಗಿ ಗಿಡ ನೆಡುವ ಸಂಸ್ಕೃತಿ ಬೆಳೆಯಬೇಕು. ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸಿದರೆ ಮಾತ್ರ ಭವಿಷ್ಯ ಭದ್ರ. ಇಂದಿನ ಈ ಕಾರ್ಯಕ್ರಮ ಕೇವಲ ಸಸಿ ನೆಡುವುದಕ್ಕೆ ಸೀಮಿತವಾಗದೆ, ಅವುಗಳನ್ನು ಮರವಾಗಿ ಬೆಳೆಸುವ ಸಂಕಲ್ಪ ಮಾಡೋಣ ಎಂದರು.

ಬಳಿಕ ಮಾತನಾಡಿದ ಮಾದಪುರ ಡಾ.ರಾಮಕೃಷ್ಣಗೌಡ ಹವಾಮಾನ ವೈಪರೀತ್ಯ, ಸಾಂಕ್ರಾಮಿಕ ರೋಗಗಳು ಹೆಚ್ಚಾಗಲು ಪರಿಸರ ನಾಶವೇ ಕಾರಣ. ಶುದ್ಧ ಗಾಳಿ, ಶುದ್ಧ ನೀರು ಸಿಗಬೇಕಾದರೆ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಬೇಕು. ಪುನರಪಿ ತಂಡದ ಸೇವಾ ಕಾರ್ಯ ಯುವಕರಿಗೆ ಮಾದರಿಯಾಗಿದೆ. ಪ್ರತಿ ಮನೆಯ ಮುಂದೆ ಕನಿಷ್ಠ ಎರಡು ಮರ ಬೆಳೆಸಿದರೂ ಗ್ರಾಮ ಹಸಿರಿನಿಂದ ಕಂಗೊಳಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾವು, ಹೊಂಗೆ, ಬೇವು,ಆಲ, ಅರಳಿ, ಅಶ್ವತ್ಥ ಸೇರಿದಂತೆ ನೂರಕ್ಕೂ ಅಧಿಕ ಸಸಿಗಳನ್ನು ನೆಡಲಾಯಿತು.ಪ್ರತಿ ಸಸಿಗೂ ಟ್ರೀ ಗಾರ್ಡ್ ವ್ಯವಸ್ಥೆಗೆ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ತಿಮ್ಮಶೆಟ್ಟಿ, ಮುಖಂಡರಾದ ಗಣದಹಳ್ಳಿ ಸ್ವಾಮಿ, ಬಸವರಾಜು, ಪರಮೇಶ್, ಮಾದೇವ, ಪತ್ರಕರ್ತ ಬಲರಾಮ್, ದೇವಿ ಟೀಮ್, ಸಂಸ್ಥಾಪಕ ಸ್ವರಾಜ್, ಸಹ ಸಂಸ್ಥಾಪಕ ವೆಂಕಟೇಶ್ ಮತ್ತು ಪುನರಪಿ ತಂಡದ ಸದಸ್ಯರು, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರ ಆಪ್ತ ಸಹಾಯಕ ಗಂಜೀಗೆರೆ ಮಹೇಶ್ ಸೇರಿದಂತೆ ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*
