ಕೊರಟಗೆರೆ :- ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026ರ ಅಂಗವಾಗಿ ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ.) ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಸಂಗ್ರಹಿಸಲಿದ್ದು, ಸಾರ್ವಜನಿಕರು ಅಗತ್ಯ ದಾಖಲೆ ಹಾಗೂ ಮಾಹಿತಿಯನ್ನು ನೀಡಿ ಸಹಕರಿಸುವಂತೆ ತಹಶೀಲ್ದಾರ್ ಕೆ. ಮಂಜುನಾಥ್ ಮನವಿ ಮಾಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಯಶಸ್ಸಿಗೆ ನಿಖರವಾದ ಮತದಾರರ ಪಟ್ಟಿ ಅತ್ಯಂತ ಮುಖ್ಯವಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಸೇರ್ಪಡೆಯಾಗಬೇಕು ಎಂದು ತಿಳಿಸಿದರು.
1987ರ ನಂತರ ಜನಿಸಿ 18 ವರ್ಷ ಪೂರ್ಣಗೊಳಿಸಿರುವ ಅರ್ಹ ಯುವಜನರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಸಿಕೊಳ್ಳಬೇಕು. ಅಲ್ಲದೆ ಮರಣ ಹೊಂದಿರುವ ಅಥವಾ ಸ್ಥಳಾಂತರಗೊಂಡ ಮತದಾರರ ಹೆಸರುಗಳನ್ನು ತೆಗೆದುಹಾಕುವುದು, ವಿಳಾಸ ಬದಲಾವಣೆ ಸೇರಿದಂತೆ ಅಗತ್ಯ ತಿದ್ದುಪಡಿಗಳಿಗೆ ಬಿ.ಎಲ್.ಒ.ಗಳು ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಮಾಹಿತಿ ನೀಡುವಂತೆ ಅವರು ಹೇಳಿದರು.
ಮತದಾರರ ಪಟ್ಟಿಯನ್ನು ದೋಷರಹಿತ ಹಾಗೂ ಪಾರದರ್ಶಕವಾಗಿ ಸಿದ್ಧಪಡಿಸುವ ಉದ್ದೇಶದಿಂದ ಬಿ.ಎಲ್.ಒ.ಗಳಿಗೆ ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ. ದಾಖಲೆಗಳ ಪರಿಶೀಲನೆ, ಆನ್ಲೈನ್ ಮಾಹಿತಿ ನಮೂದು, ಮತದಾರರೊಂದಿಗೆ ಸಮನ್ವಯ ಸೇರಿದಂತೆ ವಿವಿಧ ವಿಷಯಗಳಲ್ಲಿ ಅವರಿಗೆ ತರಬೇತಿ ನೀಡಲಾಗಿದೆ ಎಂದರು.
ಮತದಾರರು ಎನ್ಯೂಮರೇಷನ್ ನಮೂನೆಯಲ್ಲಿ ಹೆಸರು, ತಂದೆಯ ಹೆಸರು, ಜನ್ಮದಿನಾಂಕ ಸೇರಿದಂತೆ ಅಗತ್ಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ಭಾವಚಿತ್ರ ಬದಲಾವಣೆಗೆ ಅವಕಾಶವಿದ್ದು, ಪಾಸ್ಪೋರ್ಟ್ ಗಾತ್ರದ ಬಣ್ಣದ ಭಾವಚಿತ್ರ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,09,495 ಮತದಾರರಿದ್ದು, ಇವರಲ್ಲಿ 1,03,303 ಪುರುಷರು, 1,06,185 ಮಹಿಳೆಯರು ಹಾಗೂ 7 ತೃತೀಯ ಲಿಂಗದ ಮತದಾರರು ಇದ್ದಾರೆ. ಕ್ಷೇತ್ರದ 240 ಮತಗಟ್ಟೆಗಳಿಗೆ 240 ಬಿ.ಎಲ್.ಒ.ಗಳನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಯಶಸ್ವಿಯಾಗಲು ರಾಜಕೀಯ ಪಕ್ಷಗಳ ಮುಖಂಡರು, ಬೂತ್ ಮಟ್ಟದ ಏಜೆಂಟರು, ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಬಿ.ಎಲ್.ಒ.ಗಳಿಗೆ ಸಂಪೂರ್ಣ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಚುನಾವಣಾ ಶಿರಸ್ತೇದಾರ್ ಮಂಜುನಾಥ್, ನಕುಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಕೊರಟಗೆರೆ.
