ಕೊರಟಗೆರೆ : – ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಕೊರಟಗೆರೆ ಪಟ್ಟಣದ ಲಂಡನ್ಸ್ ಕಿಡ್ಸ್ ಶಾಲೆಯಲ್ಲಿ ವಿದ್ಯಾರ್ಥಿಗಳು ವೈದ್ಯರ ಸಮವಸ್ತ್ರ ಧರಿಸಿ ವಿಶೇಷ ಕಾರ್ಯಕ್ರಮ ನಡೆಸುವ ಮೂಲಕ ವೈದ್ಯರಿಗೆ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳು ವೈದ್ಯರ ವೇಷಭೂಷಣ ಧರಿಸಿ ಭಾಗವಹಿಸಿದ್ದು, ಸಮಾಜದಲ್ಲಿ ವೈದ್ಯರ ಮಹತ್ವದ ಪಾತ್ರ, ನಿಸ್ವಾರ್ಥ ಸೇವೆ ಹಾಗೂ ಮಾನವೀಯತೆಯ ಕುರಿತು ಅವರಿಗೆ ಅರಿವು ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ದೇಶದ ಎಲ್ಲಾ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳನ್ನು ತಿಳಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕಿ ಶೃತಿ ಮಾತನಾಡಿ, “ಭಾರತೀಯ ಸಂಸ್ಕೃತಿಯಲ್ಲಿ ವೈದ್ಯರನ್ನು ‘ವೈದ್ಯೋ ನಾರಾಯಣೋ ಹರಿ’ ಎಂದು ಗೌರವಿಸಲಾಗುತ್ತದೆ. ವೈದ್ಯ ವೃತ್ತಿಯು ಕೇವಲ ಉದ್ಯೋಗವಲ್ಲ, ಅದು ಮಾನವಸೇವೆಯ ಅತ್ಯುನ್ನತ ರೂಪವಾಗಿದೆ. ಜ್ಞಾನ, ಸೇವಾಭಾವ, ತ್ಯಾಗ ಮತ್ತು ಜವಾಬ್ದಾರಿಯೊಂದಿಗೆ ಸಮಾಜದ ಆರೋಗ್ಯ ಕಾಪಾಡುವ ಮಹತ್ತರ ಹೊಣೆಗಾರಿಕೆಯನ್ನು ವೈದ್ಯರು ನಿರ್ವಹಿಸುತ್ತಿದ್ದಾರೆ. ಅವರು ರೋಗಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲ, ಜೀವ ಉಳಿಸುವ ರಕ್ಷಕರಾಗಿದ್ದಾರೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವೈದ್ಯರ ಕರ್ತವ್ಯಗಳು ಹಾಗೂ ಆರೋಗ್ಯ ಸೇವೆಯ ಮಹತ್ವದ ಕುರಿತು ಪರಿಚಯಿಸಲಾಯಿತು.
ಈ ಸಂದರ್ಭದಲ್ಲಿ ಶಾಹಿಜಾ, ಕವಿತಾ, ಪ್ರಿಯಾಂಕ, ಪೋಷಕರು ಹಾಗೂ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.
-ಶ್ರೀನಿವಾಸ್ ಕೊರಟಗೆರೆ.
