ಕೊರಟಗೆರೆ: ತಾಲೂಕಿನ ತೀತಾ ಗ್ರಾಮದ ಸಮೀಪದ ಗೊರವನಹಳ್ಳಿ–ತೀತಾ ನಡುವಿನ ಸೇತುವೆ ಬಳಿ ಸೋಮವಾರ ತಡರಾತ್ರಿ ನಡೆದ ಸರಣಿ ಅಪಘಾತಗಳಲ್ಲಿ ಓರ್ವ ಯುವಕ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ತೀತಾ ಗ್ರಾಮದ ಗೋವಿಂದರಾಜು (29) ಮೃತಪಟ್ಟ ದುರ್ದೈವಿ. ರಾತ್ರಿ ವೇಳೆ ಮದ್ಯದ ಅಮಲಿನಲ್ಲಿ ರಸ್ತೆ ಮೇಲೆ ಮಲಗಿದ್ದ ವೇಳೆ, ಕೆಟಿಎಂ ಬೈಕ್ನಲ್ಲಿ ಊರಿನತ್ತ ತೆರಳುತ್ತಿದ್ದ ಪ್ರವೀಣ್ ಅವರಿಗೆ ಗೋವಿಂದರಾಜು ಗಮನಕ್ಕೆ ಬಾರದೆ, ಬೈಕ್ ಅವರ ಮೇಲೆ ಹರಿದಿದೆ. ಪರಿಣಾಮ ಗೋವಿಂದರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ಬೈಕ್ ಸವಾರ ಪ್ರವೀಣ್ ಆಯತಪ್ಪಿ ಸೇತುವೆಯಿಂದ ಕೆಳಗೆ ಬಿದ್ದು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ನಂತರ ಅವರು ತಮ್ಮ ಸ್ನೇಹಿತ ವಿನೋದ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ತಿಳಿಸಿದ್ದಾರೆ. ವಿನೋದ್ ಸ್ಥಳಕ್ಕೆ ಬಂದಿದ್ದ ವೇಳೆ, ರಸ್ತೆ ಬದಿಯಲ್ಲಿ ನಿಂತಿದ್ದ ಅವರಿಬ್ಬರ ಬಳಿ ಮತ್ತೊಬ್ಬ ಬೈಕ್ ಸವಾರ ಚಿರಂಜೀವಿ ಅತಿವೇಗವಾಗಿ ಬಂದು ವಿನೋದ್ ಅವರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಡಿಕ್ಕಿಯ ಪರಿಣಾಮ ವಿನೋದ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಪುರುಷೋತ್ತಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
-ಶ್ರೀನಿವಾಸ್ ಕೊರಟಗೆರೆ.
