ಹಾಸನ: ಮನುಷ್ಯನಿಗೆ ದೇಹದ ಕೊಳೆಯನ್ನು ತೊಲಗಿಸಲು ಸ್ನಾನ ಎಷ್ಟು ಮುಖ್ಯವೋ, ಮನಸ್ಸಿನಲ್ಲಿ ಮನೆಮಾಡಿರುವ ಕೊಳೆ-ಕಲ್ಮಶಗಳನ್ನು ತೊಲಗಿಸಲು ಉತ್ತಮ ಪುಸ್ತಕಗಳನ್ನು ಓದುವುದು ಅಷ್ಟೇ ಮುಖ್ಯ. ಆದ್ದರಿಂದ ಉತ್ತಮ ಪುಸ್ತಕಗಳನ್ನು ಒಳಗೊಂಡ ಒಂದು ವಾಚನಾಲಯ ಪ್ರತಿಯೊಂದು ಮನೆಯಲ್ಲಿ ಇರಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಹೇಳಿದರು.
ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಚಿತ್ರಕಲಾವಿದ ಹಾಗೂ ನಿವೃತ್ತ ಚಿತ್ರಕಲಾ ಶಿಕ್ಷಕರಾದ ಬಿ. ಎಸ್. ದೇಸಾಯಿ ಅವರ ನಿವಾಸದಲ್ಲಿರುವ ಕಲಾ ಗ್ಯಾಲರಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಿನನಿತ್ಯದ ಕಾರ್ಯಭಾರದ ಒತ್ತಡ ಮುಗಿಸಿಕೊಂಡು ನಿದ್ರೆಗೆ ಜಾರುವ ಮುನ್ನ ಸ್ವಲ್ಪ ಹೊತ್ತು ಪುಸ್ತಕ ಓದಿದರೆ ಮನಸ್ಸಿಗೆ ನೆಮ್ಮದಿ ದೊರೆಯುವುದರ ಜೊತೆಗೆ ನಿದ್ರೆಯೂ ಸಹಜವಾಗಿ ಆವರಿಸುತ್ತದೆ. ಪುಸ್ತಕ ಓದುವುದು ಧ್ಯಾನಕ್ಕೆ ಸಮಾನವಾಗಿದೆ. ದಿನದಿಂದ ದಿನಕ್ಕೆ ನಮ್ಮ ಮನಸ್ಸು ಒಳ್ಳೆಯ ಹಾಗೂ ಕೆಟ್ಟ ಯೋಚನೆಗಳಿಂದ ಮಲಿನಗೊಳ್ಳುತ್ತದೆ. ಆ ಮಲಿನತೆಯನ್ನು ತೊಲಗಿಸಲು ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಚಿತ್ರಕಲಾವಿದ ಬಿ. ಎಸ್. ದೇಸಾಯಿ ಅವರ ಮನೆಯಲ್ಲಿ ಕಲಾ ಗ್ಯಾಲರಿಯೊಂದಿಗೆ ವಾಚನಾಲಯವೂ ಇರುವುದರಿಂದ, ಪ್ರಾಧಿಕಾರದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮಕ್ಕೆ ಈ ಮನೆ ಮಾದರಿಯಾಗಿದೆ ಎಂದು ಡಾ. ಮಾನಸ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿರ್ಮಲ ಚಿತ್ರಕಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಆರ್. ಸಿ. ಕಾರದಕಟ್ಟಿ ಮಾತನಾಡಿ, ಹಾಸನಕ್ಕೆ ಬಿ. ಎಸ್. ದೇಸಾಯಿ ಅವರು ಚಿತ್ರಕಲಾ ಶಿಕ್ಷಕರಾಗಿ ಬಂದ ನಂತರ ತ್ರಿವೇಣಿ ಸಂಗಮದಂತೆಯೇ ಕಲಾ ಪ್ರಾತ್ಯಕ್ಷಿಕೆಗಳು, ವಿಚಾರ ಸಂಕಿರಣಗಳು, ಚಿತ್ರಕಲಾ ಪ್ರದರ್ಶನಗಳು ಸೇರಿದಂತೆ ಅನೇಕ ಕಲಾ ಚಟುವಟಿಕೆಗಳು ಆರಂಭಗೊಂಡವು. ರಾಜ್ಯದ ಹಿರಿಯ ಹಾಗೂ ಯುವ ಚಿತ್ರಕಲಾವಿದರ ಆಗಮನ ಹೆಚ್ಚಾಗಿ, ಕಲೆಯ ಬಗ್ಗೆ ಜ್ಞಾನ ವಿಸ್ತಾರಗೊಂಡಿತು. ರಾಜ್ಯ ಚಿತ್ರಕಲಾ ಶಿಕ್ಷಕರ ಸಮ್ಮೇಳನ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಚಿತ್ರಕಲಾ ಶಿಬಿರ, ವಾರ್ಷಿಕ ಕಲಾ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ ಕೀರ್ತಿ ದೇಸಾಯಿ ಅವರದು ಎಂದು ಶ್ಲಾಘಿಸಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಕಥೆ, ಕವಿತೆ, ಸಾಹಿತ್ಯ ಮತ್ತು ಚಿತ್ರಕಲೆ ಪರಸ್ಪರ ಪೂರಕವಾಗಿವೆ. ಒಂದು ಕಥೆ, ಕಾದಂಬರಿ ಅಥವಾ ಕವಿತೆಯ ಸಾರವನ್ನು ಒಂದು ಚಿತ್ರ ಅಭಿವ್ಯಕ್ತಿಸಬಲ್ಲದು. ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮವು ಕನ್ನಡ ಪುಸ್ತಕ ಪ್ರಾಧಿಕಾರದ ಉತ್ತಮ ಯೋಜನೆಯಾಗಿದ್ದು, ಓದುವ ಅಭಿರುಚಿಯನ್ನು ಬೆಳೆಸಲು ಸಹಕಾರಿಯಾಗಿದೆ. ಪುಸ್ತಕಗಳನ್ನು ಖರೀದಿಸಿ ಓದಿ, ಸಂಗ್ರಹಿಸಿ, ಇತರರಿಗೂ ಎರವಲು ನೀಡುವ ಪರಂಪರೆ ಬೆಳೆಯಬೇಕು ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ಪ್ರಾಧ್ಯಾಪಕ ಡಾ. ಕುಶಲ್ ಬರಗೂರು ಮಾತನಾಡಿ, ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಆಶಯವಿದೆ. ಕವಿಗಳು, ಸಾಹಿತಿಗಳು ಹಾಗೂ ಲೇಖಕರು ತಮ್ಮ ಮನೆಗಳಲ್ಲಿ ಸಂಗ್ರಹಿಸಿರುವ ಪುಸ್ತಕಗಳ ಮಾಹಿತಿ ನೀಡಿದರೆ, ಅವರ ಮನೆಯಲ್ಲಿ ಅವರನ್ನು ಗೌರವಿಸಿ, ಅವರ ಸಾಹಿತ್ಯ ಕೃತಿಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಹಾಸನ ಜಿಲ್ಲಾ ಮಾಜಿ ಅಧ್ಯಕ್ಷ ಹಾಗೂ ಪತ್ರಕರ್ತ ಉದಯರವಿ, ಕದಂಬ ಸೈನ್ಯ ಕನ್ನಡ ಸಂಘಟನೆಯ ಹಾಸನ ಜಿಲ್ಲಾಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ ಗಣೇಶ್ ಅಂಕಪುರ, ಲೇಖಕ ಹಾಗೂ ಶಿಕ್ಷಕ ಸಿ. ಎನ್. ಚಿದಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಬಿ. ಎಸ್. ದೇಸಾಯಿ ದಂಪತಿಗಳನ್ನು ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಗೊರೂರು ಶ್ರೀಕಾಂತ್ ಪ್ರಾರ್ಥನೆ ನೆರವೇರಿಸಿದರು.
