ಕೊರಟಗೆರೆ:- ತಾಲೂಕಿನ ಹನುಮಂತಪುರ ಗ್ರಾಮಸ್ಥರನ್ನು 4 ದಿನಗಳಿಂದ ಬೆಚ್ಚಿಬೀಳಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಸಿಸಿ ಕ್ಯಾಮೆರಾದಲ್ಲಿ ನಾಯಿ ಹೊತ್ತೊಯ್ಯುವ ದೃಶ್ಯ ಸೆರೆಯಾಗಿದ್ದರಿಂದ ಆತಂಕಗೊಂಡಿದ್ದ ಗ್ರಾಮಸ್ಥರು ಈಗ ನಿಟ್ಟುಸಿರು ಬಿಟ್ಟಿದ್ದಾರೆ.
ಜೂ.25ರಂದು ಹನುಮಂತಪುರ ಗ್ರಾಮದ ಸರ್ವೇ ನಂ. 8/9, 10 ಹಾಗೂ 6ರಲ್ಲಿರುವ ಎಲೆರಾಂಪುರ ನಿವಾಸಿ ರಾಜಣ್ಣ ಅವರ *ಬುದ್ಧನ ಮನೆ ವಾಲ್ಮೀಕಿ ವನ ಫಾರ್ಮ್ ಹೌಸ್* ಬಳಿ ಚಿರತೆ ದಾಳಿ ನಡೆಸಿ ನಾಯಿಯನ್ನು ಹೊತ್ತೊಯ್ದಿತ್ತು. ಈ ಭಯಾನಕ ದೃಶ್ಯ ಫಾರ್ಮ್ ಹೌಸ್ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ತಕ್ಷಣ ಎಚ್ಚೆತ್ತ ರಾಜಣ್ಣ ಅವರು ಕೊರಟಗೆರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಫಾರ್ಮ್ ಹೌಸ್ ಬಳಿ ಬೋನು ಅಳವಡಿಸಿದ್ದರು.
*ಬೋನಿಗೆ ಬಿದ್ದಿದ್ದು ಯಾವಾಗ?* ಜೂನ್ 29ರ ಮುಂಜಾನೆ ಸುಮಾರು 4 ಗಂಟೆಗೆ ಬೋನಿನೊಳಗೆ ಕೋಳಿ ತಿನ್ನಲು ಬಂದ ಚಿರತೆ ಸೆರೆಯಾಗಿದೆ. ಮಾಹಿತಿ ಸಿಗುತ್ತಿದ್ದಂತೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.

*ಕಾರ್ಯಾಚರಣೆ ತಂಡ* : ಮದುಗಿರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನ್ ಹಾಗೂ ಕೊರಟಗೆರೆ ವಲಯ ಅರಣ್ಯಾಧಿಕಾರಿ ಹನುಮಂತರಾಜು ಅವರ ಮಾರ್ಗದರ್ಶನದಲ್ಲಿ, ಉಪ ವಲಯ ಅರಣ್ಯಾಧಿಕಾರಿ ದಿಲೀಪ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪೃಥ್ವಿ, ಗಂಗಾಧರ್, ವೆಂಕಟೇಶ್, ಕೆಂಪಯ್ಯ ಹಾಗೂ ಚಾಲಕ ಕೃಷ್ಣಮೂರ್ತಿ ಗ್ರಾಮಸ್ಥರ ಸಹಕಾರದೊಂದಿಗೆ ಕಾರ್ಯಾಚರಣೆ ಯಶಸ್ವಿಗೊಳಿಸಿದರು.
ಸೆರೆ ಸಿಕ್ಕ ಚಿರತೆಯನ್ನು ಆರೋಗ್ಯ ತಪಾಸಣೆ ನಡೆಸಿ, ಬಳಿಕ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಅರಣ್ಯ ಇಲಾಖೆ ಮನವಿ:
“ಕಾಡು ಪ್ರಾಣಿಗಳು ಊರೊಳಗೆ ಕಂಡುಬಂದರೆ ಜನರು ಆತಂಕಪಡಬೇಡಿ, ಗುಂಪುಗೂಡಬೇಡಿ. ತಕ್ಷಣ *1926 ಸಹಾಯವಾಣಿ* ಅಥವಾ ಸ್ಥಳೀಯ ಅರಣ್ಯ ಕಚೇರಿಗೆ ಮಾಹಿತಿ ನೀಡಿ. ನಾವಿದ್ದೇವೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ.
