ಕೆ.ಆರ್.ಪೇಟೆ,ಜು.03: ತಾಲ್ಲೂಕಿನಲ್ಲಿ ಎಸ್.ಐ.ಆರ್. ಬಗ್ಗೆ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡಿ ಎಲ್ಲರೂ ಸದರಿ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಚುನಾವಣಾ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ಮಾಡಿ ಅರಿವು ಮೂಡಿಸಬೇಕು.
ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಬೇಟಿ ನೀಡಿ ಎನ್ಯೂಮರೇಷನ್ ಫಾರ್ಮ್ ಗಳನ್ನು ವಿತರಣೆ ಮಾಡಬೇಕು. ಸರಿಯಾಗಿ ಭರ್ತಿ ಮಾಡಿಸಿ ಪಡೆದುಕೊಳ್ಳಬೇಕು.
ಇಲ್ಲದಿದ್ದರೆ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ವಿವಿಧ ಪ್ರಗತಿ ಪರ ಸಂಘಟನೆಗಳು ಹಾಗೂ ಬಿ.ಎಸ್.ಪಿ, ಎಸ್.ಡಿ.ಪಿ.ಐ, ಕೆ.ಆರ್.ಎಸ್. ಪಕ್ಷಗಳು ತಾಲ್ಲೂಕು ಆಡಳಿತವನ್ನು ಒತ್ತಾಯಿಸಿವೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ.ಎಸ್.ಪಿ. ತಾಲ್ಲೂಕು ಕೋಶಾಧ್ಯಕ್ಷ ಗಂಗಾಧರ್, ಕೆ.ಆರ್.ಎಸ್.ಪಕ್ಷದ ತಾಲ್ಲೂಕು ಕಾರ್ಯದರ್ಶಿ ಶಂಕರ್ನಾಗ್, ಟಾಕೀಸ್ ಶ್ರೀನಿವಾಸ್, ಅಲೀಮ್, ಎಸ್.ಡಿ.ಪಿ.ಐ ತಾಲ್ಲೂಕು ಅಧ್ಯಕ್ಷ ಸಲಾವುದ್ದೀನ್, ತಾಲ್ಲೂಕು ಕಾರ್ಯದರ್ಶಿ ನಜೀಬ್, ಕರ್ನಾಟಕ ಜನಶಕ್ತಿ ಸಂಘಟನೆಯ ಹಿರಿಯ ಮುಖಂಡ ಕೆ.ಆರ್.ಬನ್ನಾರಿ, ಕಮ್ಯೂನಿಟಿ ಡೆವಲಪ್ಮೆಂಟ್ ಫೋರಂ ಸಂಘಟನೆಯ ಅಧ್ಯಕ್ಷ ಮುಸಾದಿಕ್, ವಿವಿಧ ಸಂಘಟನೆಗಳ ಮುಖಂಡರಾದ ಜಾವಿದ್, ಇಫ್ರಾನ್, ಜಗದೀಶ್ ಮತ್ತಿತರರು ಎಸ್.ಐ.ಆರ್. ಕಾರ್ಯಾಚರಣೆಯ ಯಶಸ್ಸಿಗೆ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಮನೆ ಮನೆಗೆ ಎನ್ಯೂಮರೇಷನ್ ಫಾರಂಗಳನ್ನು ತಲುಪಿಸುವ ಬದಲು ಪೋನ್ ಮಾಡಿ ಶಾಲೆಗಳಿಗೆ ಕರೆಸಿಕೊಂಡು ವಿತರಣೆ ಮಾಡುತ್ತಿದ್ದಾರೆ. ಕೆಲವು ಬಿ.ಎಲ್.ಓ ಅಧಿಕಾರಿಗಳು ಸರಿಯಾಗಿ ತರಬೇತಿ ಪಡೆದುಕೊಂಡಿರುವುದಿಲ್ಲ. ಇದರಿಂದಾಗಿ ಬಿ.ಎಲ್.ಓ.ಗಳು ಅಲ್ಲದೆ ತಪ್ಪಾಗಿ ಎನ್ಯೂಮರೇಷನ್ ಫಾರಂಗಳನ್ನು ಭರ್ತಿ ಮಾಡುತ್ತಿದ್ದಾರೆ.
ಹೆಸರು ಉಳಿಸುವ ಕಾಲಂ ಮತ್ತು ಹೆಸರು ತೆಗೆದು ಹಾಕುವ ಕಾಲಂ ಎರಡನ್ನೂ ಸಹ ಭರ್ತಿ ಮಾಡುತ್ತಿದ್ದಾರೆ. ಇದರಿಂದ ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ ಸರಿಯಾಗಿ ತರಬೇತಿ ಪಡೆದುಕೊಂಡಿರುವ ಬೂತ್ ಮಟ್ಟದ ಅಧಿಕಾರಿಗಳು ವಾರ್ಡುವಾರು ಮತದಾರರ ಸಭೆ ನಡೆಸಿ ಅರಿವು ಮೂಡಿಸಬೇಕು.
ಟಾಂ- ಟಾಂ ಮಾಡಿಸಿ ಎಸ್.ಐ.ಆರ್ ಬಗ್ಗೆ ಜನ ಜಾಗೃತಿ ಮೂಡಿಸಬೇಕು. ಸರಿಯಾಗಿ ತರಬೇತಿ ಪಡೆದ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿ.ಎಲ್.ಓಗಳನ್ನು) ನೇಮಕ ಮಾಡಬೇಕು ಎಂದು ಒತ್ತಾಯ ಮಾಡಿದರು.
ಅಧಿಕಾರಿಗಳು ದಿನಪತ್ರಿಕೆಗಳಲ್ಲಿ ಎಸ್.ಐ.ಆರ್. ಬಗ್ಗೆ ಜಾಹೀರಾತು ನೀಡಿರುತ್ತಾರೆ. ಆದರೆ ಶೇ. 25ರಷ್ಟು ಮಂದಿಯೂ ಪತ್ರಿಕೆಗಳನ್ನು ಓದುವುದಿಲ್ಲ ಇದರಿಂದ ಎಲ್ಲಾ ಮತದಾರರಿಗೂ ಮಾಹಿತಿ ದೊರೆತಿರುವುದಿಲ್ಲ. ಇದರಿಂದಾಗಿ ಮತದಾರರು ಎಸ್.ಐ.ಆರ್ ಅಂದರೆ ಏನು ನಮಗೆ ಏನು ಉಪಯೋಗ ಎಂದು ಕೇಳುತ್ತಿದ್ದಾರೆ ಹಾಗಾಗಿ ಪ್ರತಿ ವಾರ್ಡುಗಳಲ್ಲಿ ಕನಿಷ್ಠ ಮೂರು ದಿನ ಸಭೆ ನಡೆಸಿ ಎಸ್.ಐ.ಆರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಇಲ್ಲದಿದ್ದರೆ ಬಡವರು, ಕೂಲಿ ಕಾರ್ಮಿಕರಿಗೆ ತೊಂದರೆಯಾಗಲಿದೆ. ಕೂಲಿ ಮಾಡುವವರು ಬೆಳಿಗ್ಗೆ 8ಗಂಟೆಗೆ ಕೂಲಿಗೆ ಹೋಗುತ್ತಾರೆ. ಸಂಜೆ 6ಗಂಟೆಗೆ ವಾಪಸ್ ಮನೆಗೆ ಬರುತ್ತಾರೆ.
ಅಧಿಕಾರಿಗಳು ಬೆಳಿಗ್ಗೆ 10ಗಂಟೆಗೆ ಮನೆ ಬಳಿ ಹೋಗಿ ಬಂದರೆ ಮನೆಯಲ್ಲಿ ಯಾರು ಇರುವುದಿಲ್ಲ. ಆಗ ಮನೆಯಲ್ಲಿನ ಕೂಲಿ ಕಾರ್ಮಿಕ ಮತದಾರರ ಮತವು ಕೈಬಿಟ್ಟು ಹೋಗುವ ಅಪಾಯ ಇದೆ ಇದನ್ನು ತಪ್ಪಿಸಿ ಕೂಲಿ ಮಾಡುವವರು ಕೂಲಿಯಿಂದ ವಾಪಸ್ ಮನೆಗೆ ಬಂದಾಗ ಸಂಜೆ 6ಗಂಟೆಯ ಮೇಲೆ ಹೋಗಿ ಅವರನ್ನು ಬೇಟಿ ಮಾಡಿ ಎನ್ಯೂಮರೇಷನ್ ಫಾರಂಗಳನ್ನು ನೀಡಿ, ಮತ್ತೆ ಸರಿಯಾಗಿ ಭರ್ತಿ ಮಾಡಿಸಿ ಪಡೆದುಕೊಳ್ಳಬೇಕು ಈ ಮೂಲಕ ಬಡವರು ಮತ್ತು ಕೂಲಿಕಾರ್ಮಿಕರ ಮತವು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಇಲ್ಲದಿದ್ದರೆ ಮೇಲ್ಕಂಡ ನಮ್ಮ ಎಲ್ಲಾ ಸಂಘಟನೆಗಳ ವತಿಯಿಂದ ಸಾರ್ವಜನಿಕರ ಸಹಕಾರ ಪಡೆದುಕೊಂಡು ತಾಲ್ಲೂಕು ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಮುಖಂಡರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಹೋರಾಟದ ಹಾದಿ ತುಳಿಯಲು ಅವಕಾಶ ನೀಡದೇ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಎಸ್.ಐ.ಆರ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
– ಶ್ರೀನಿವಾಸ್ ಆರ್.
