ಚಾರ್ ಧಾಮ- ಪ್ರವಾಸ ಕಥನ
ಮುಂದುವರಿದ ಭಾಗ…
ನಾವೆಲ್ಲ ಬೆಳಿಗಿನ ಜಾವ ಮೂರುವರೆ ಗಂಟೆಗೆ ಬದ್ರಿನಾರಾಯಣನ ಅಭಿಷೇಕದ ವಿ ಐ ಪಿ ಟಿಕೆಟ್ ತಗೊಂಡಿದ್ದಿವಿ. ತುಂಬಾ ಸಮಯಾವಕಾಶ ಇದ್ದಿದ್ದರಿಂದ ಸಾಯಂಕಾಲ ದೇವಸ್ಥಾನಕ್ಕೆ ಹೋಗಿ ಬದ್ರಿನಾರಾಯಣನ ದರ್ಶನ ಮಾಡಿ ಬಂದೆವು. ಮತ್ತೆ ಅದೇ ನೂಕುನುಗ್ಗಲು. ವಿ ಐ ಪಿ ಗಳಿಗೆ ಕೆಲ ನಿಮಿಷಗಳ ದರ್ಶನ, ನಮಗೆ ಕ್ಷಣ ಕಾಲ ದರ್ಶನ. ನನಗೇನು ಬೇಜಾರಿಲ್ಲ. ಕೆಲವರು ಮನಸ್ಸಿನಲ್ಲೇ ನೊಂದುಕೊಳ್ಳುತ್ತಿದ್ದರು. ನನ್ನ ಪಾಲಿಗೆ ಸ್ವಾಮಿಯ ಕ್ಷಣ ದೃಷ್ಟಿ ಸಾಕು.
ಸ್ವಾಮಿಗೂ ಬೇಕಾಗಿದ್ದು ಇಷ್ಟೆ ತಾನೆ. ದರ್ಶನವಾದ ಮೇಲೆ ನಮ್ಮನ್ನು 3 ಕಿಲೋಮೀಟರ್ಸ ದೂರದಲ್ಲಿರುವ ಮಾನಾ ಹಳ್ಳಿಗೆ ಕರೆದುಕೊಂಡು ಹೋದರು. ಈ ಹಳ್ಳಿಯು ಭಾರತ ಗಡಿಯ ಕೊನೇ ಹಳ್ಳಿ. ಸುಮಾರು 1 ಕಿಲೋಮೀಟರ್ ನೆಡೆದಾಡಬೇಕು. ಹೋಗುವ ದಾರಿಯಲ್ಲಿ ತಿನಿಸು ಮತ್ತು ಟೀ ಅಂಗಡಿಯ ಸಾಲುಗಳು.
ಕೈ ಕಸೂತಿ ವುಲನ್ ಅಂಗಡಿಗಳು ಕಂಡವು. ಇಲ್ಲಿ ವ್ಯಾಸ ಮುನಿಗಳು ಗಣಪತಿ ಗುಹೆಯ ಮಂದಿರದಲ್ಲಿ ಮಹಾಭಾರತ ಬರೆದರೆಂಬ ವಾಖ್ಯಾನ ಇದೆ. ಹಳ್ಳಿಯ ಅಂಚಿನಲ್ಲೆ ಚೀನಾ ಬಾರ್ಡರ್. ಅಲ್ಲಿಂದ ಆಚೆ ಯಾರಿಗೂ ಪ್ರವೇಶವಿಲ್ಲ. ಆರ್ಮಿಗೆ ಮಾತ್ರ ಪ್ರವೇಶ. ಮಧ್ಯದಲ್ಲಿ ಸರಸ್ವತಿಯ ಜಲಪಾತ ಮತ್ತು ಹೊಸದಾದ ಸರಸ್ವತಿಯ ಮಂದಿರವನ್ನು ನೋಡಬಹುದು.
ಬೆಳಿಗಿನ ಜಾವ ಎರಡು ಗಂಟೆಗೆ ಎದ್ದು, ಫ್ರೆಶ್ ಆಗಿ ಮೂರುವರೆಗೆ ಗಂಟೆಗೆ ರೆಡಿ ಆದೆವು. ಹೆಲಿ ಗೈಡ್ಸ ನಮ್ಮನ್ನು ದೇವಸ್ಥಾನಕ್ಕೆ ಕರೆದೋಯ್ದರು. ವಿ ಐ ಪಿ ಲಾಂಜ್ ನಲ್ಲಿ ನಮ್ಮ ಚಪ್ಪಲಿಗಳನ್ನು ಬಿಡಲು ಹೇಳಿದರು. ವಿ ಐ ಪಿ ದಾರಿಯಲ್ಲಿ ನಮ್ಮನ್ನು ಕರೆದೋಯ್ದು ಮೊದಲೇ ನಿಯೋಜಿತ ವಿ ಐ ಪಿ ದರ್ಶನದ ಅಂಗಳದಲ್ಲಿ ಕೂರಿಸಿದರು.

ಕಾಲ್ನಡಿಗೆಯಲ್ಲಿ ನೆಡೆದ ನಮ್ಮ ಪಾದಗಳು ಸರಿಗಮ ಹಾಡ ತೊಡಗಿದವು. ಈ ಪೂಜೆಗೆಂದೇ ಕೆಲವರು ಸಕ್ಕರೆಯಲ್ಲಿ ಪಾಕ ಮಾಡಿದ ಕಡ್ಲೆ ಕಾಳನ್ನು ಖರೀದಿಸಿದ್ದರು. ನಾಲ್ಕುವರೆ ಸುಮಾರಿಗೆ ನಮ್ಮ ಹೆಸರನ್ನು ಕೂಗ ತೊಡಗಿದರು. ನಮ್ಮ ಸರದಿ ಕೊನೆಗೆ ಬಂತು. ಒಳಗೆ ಹೋದ ನನಗೆ ಸದ್ಯ ಕಬ್ಬಿಣದ ಕೂರು ಆಸನ ಸಿಕ್ತು. ಒಮ್ಮೆ ದೇವರ ದರ್ಶನ ಮಾಡಿ ಗೊಂಬೆಯಂತೆ ಕೂತುಬಿಟ್ಟೆ.
ಗರ್ಭ ಗುಡಿಯ ಒಳಗೆ ಸುಮಾರು 50 ರಿಂದ 60 ಭಕ್ತರು ಆಸೀನರಾಗಿದ್ದರು. ಮೊದಲು ಹೆಸರನ್ನ ಕರೆದವರು ದೇವರ ಮುಂದೆಯೇ ಕೂತಿದ್ದರು. ಕೆಲವರು ಸರದಿಯ ಪ್ರಕಾರ ಕೆಳಗೆ ಕೂತಿದ್ದರೆ ಮತ್ತೊಬ್ಬರು ನಿಂತಿದ್ದರು. ನಾನಂತೂ ಆರಾಮಧಾಯಕ ಕೂರುವ ಆಸನದಲ್ಲಿ ಕೂತುಬಿಟ್ಟಿದ್ದೆ. ನನಗೆ ಬಹಳಸಮಯ ಕೆಳಗೆ ಕೂರಲಾಗುವುದಿಲ್ಲ. ಪಂಡಿತರು ಮಂತ್ರ ಪಠಣ ಮಾಡುತ್ತಿದ್ದರು. ಅಷ್ಟರಲ್ಲಿ ಭಕ್ತಾದಿಗಳು ಕೂರಲು ತಿಣುಗಾಡುತ್ತಿದ್ದರು. ಜಾಗ ಬಿಡದಿದ್ದರೆ ಅಗಲವಾದ ಕಣ್ಣು ಬಿಟ್ಟು ಮತ್ತು ಮನಸ್ಸಿನಲ್ಲೇ ಶಾಪ ಹಾಕುತ್ತಿದನ್ನು ಮನಗಂಡೆ. ದೊಡ್ಡ ಪಂಡಿತರು ಬಂದರು.

ಅವರ ಮಂತ್ರ ಪಠಣದೊಂದಿಗೆ ಪಿನ್ ಡ್ರಾಪ್ ಸೈಲನ್ಸ್. ಮಂತ್ರ ಪಠಣ ಕೇಳುವುದಕ್ಕೆ ಚೆನ್ನಾಗಿತ್ತು. ಬದ್ರಿನಾರಾಯಣನ ಅಭಿಷೇಕ ಮಾಡುವ ಪೂಜಾರಿ ಆದಿ ಶಂಕರಾಚಾರ್ಯರ ವಂಶದ ಕುಡಿಯಂತೆ. ಈತನ ಹೆಸರು ರಾಹುಲ್. ಸುಮಾರು 4 ಗಂಟೆಗೆ ಶುರು ಆದ ಅಭಿಷೇಕ 7 ಗಂಟೆಯವರೆಗೆ ನಡೆಯಿತು. ಬದ್ರಿನಾರಾಯಣನು ಪದ್ಮಾಸನದ ಸ್ಥಿತಿಯಲ್ಲಿ ಕೂತಿರುವನಾಗಿರುತ್ತಾನೆ. ಆದಿ ಶಂಕರಾಚಾರ್ಯರು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ ಎನ್ನುವುದು ಪಂಡಿತರ ವಾದ. ಮೂಲತಹ ವಿಗ್ರಹವು ದೊಡ್ಡ ಸಾಲಿಗ್ರಾಮ ಎನ್ನುವರು. ಪುರಾಣದಲ್ಲಿನ ಕತೆಯಲ್ಲಿ ಬದ್ರಿನಾರಾಯಣನ ಬಲ ಭುಜದ ಜಾಗದಲ್ಲಿ ಬೃಗುಮಹಾ ಋಷಿಯು ಕಾಲಿನಿಂದ ಒದ್ದ ಎಂದು ಬರೆಯಲಾಗಿದೆ. ಕಾಲಿಟ್ಟ ಗುರುತು ಬಲ ಭುಜದಲ್ಲಿ ಕಾಣುತ್ತೆ ಎಂದು ಪಂಡಿತರು ಹೇಳುವರು.

ಈ ಸಮಯದ ಒಳಗೆ ನಾ ಕಂಡ ಸ್ವಾರಸ್ಯಕರ ಘಟನಾವಲಿಗಳನ್ನ ವಿವರುಸುತ್ತೇನೆ. ಹೆಚ್ಚುಕಡಿಮೆ ಮೂರು ತಾಸುಗಳ ಅಭಿಷೇಕ. ಮೊದ ಮೊದಲು ನೆರೆದಿದ್ದವರು ಬದ್ರಿನಾರಾಯಣನಿಗೆ ಕೈ ಮುಗಿದಿದ್ದೇ ಮುಗಿದಿದ್ದು. ಅರ್ಧ ಗಂಟೆ ಗಂಗೆಯ ಸ್ನಾನ. ಯಾರಿಗು ಸಮಸ್ಯೆ ಅನ್ನಿಸಿಲಿಲ್ಲ. ಇನ್ನೂ ಕೈ ಮುಗಿದು ಕುಳಿತಿದ್ದರು. ಇವರ ತಾಳ್ಮೆ ಕಿಂಚಿತ್ತೂ ವೆತ್ಯಾಸ ಆಗಲಿಲ್ಲ. ಮುಂದಿನ ಅರ್ಧ ಗಂಟೆಯ ಕಾಲ ಮಕಮಲ್ ಬಟ್ಟೆಯಲ್ಲಿ ಮೂರ್ತಿಯನ್ನು ಮುಟ್ಟಿ ಮುಟ್ಟಿ ಒರಿಸಿದರು.
ಇಲ್ಲಿಂದಲೇ ಕೆಲವರು ತಾಳ್ಮೆ ಕಳೆದುಕೊಂಡಿದ್ದರು. ಗಮನ ಮತ್ತು ಏಕಾಗ್ರತೆ ಕಮ್ಮಿ ಆಯ್ತು. ಮುಂದಿನ ಅರ್ಧ ಗಂಟೆ ಶುದ್ದ ಮಾಡಿದ ಮೇಲೆ ಗಂಧದ ಅಲಂಕಾರ ಶುರು ಮಾಡಿದರು. ಗಂಧದ ಅಲಂಕಾರ ತುಂಬ ಚೆನ್ನಾಗಿ ಮಾಡಿದ್ದರು. 50 ರಿಂದ 60 ವಯೋಮಾನದವರ ತಾಳ್ಮೆಯು ಕಮ್ಮಿ ಆಗುತ್ತಾ ಬಂತು. ಕೆಲವರು ಎದ್ದರು, ಮತ್ತೋರ್ವರು ಕಾಲು ಚಾಚಿದರು ಮತ್ತು ಇನ್ನೊಬ್ಬ ತನ್ನ ಕಾಲುಗಳಿಗೆ ಮಸ್ಸಾಜ್ ಹಚ್ಚಿದ. ಮುಂದಿನ ಅರ್ಧ ಗಂಟೆ ಪೂಜಾರಿ ವಸ್ತ್ರ ಅಲಂಕಾರ ಶುರು ಮಾಡಿದರು. ಮುಂದೆ ಕೂತಂತಾ ಡಿಸ್ಟ್ರಕ್ಟರ್ ಮಗ ಓ ಎಂದು ಅಳಲು ಶುರು ಮಾಡಿದ. ಕಾರಣ ಕೆಳಗೆ ಕೂರಲು ಆಗುತ್ತಿಲ್ಲ. ನೋಡಿ ನಾವು ನಮ್ಮ ಮಕ್ಕಳನ್ನು ಸುಖದ ಸುಪ್ಪತ್ತಿಗೆಯಲ್ಲಿ ಬೆಳಸುತ್ತೇವೆ. ನನ್ನ ಮುಂದೆ ಕೆಲ ಹುಡುಗರು ಕೂತಿದ್ದರು. ಅವರಿಗೆ ಅವರ ಕೈಯಲ್ಲಿ ಇದ್ದ ಮೊಬೈಲ್ ದೇವರಾಗಿತ್ತು.
ಯಾರೋ ಕೆಳಗೆ ಕೂತವರು ನನಗೆ ನನ್ನ ಕೂರು ಆಸನದಲ್ಲಿ ಕೂರಲು ಅರ್ಧ ಆಸನವನ್ನು ಕೊಡಿ ಎಂದು ಗೋಗೆರೆದರು. ಗೋಗೆರದಾತ ತಾನು ಅಗಲವಾಗಿ ಕೂರಲು ನನ್ನನ್ನೆ ದಬ್ಬುತ್ತಿದ್ದ. ಇನ್ನೇನು ಮಾಡುವುದು, ಎದ್ದು ನಿಂತೆ. ಅಲಂಕಾರ ಪೂರ್ತಿ ಆಯಿತು, ದೇವರಿಗೆ ಬೂಕಾ ಅಂದರೆ ಹಸಿವು ನೀಗಿಸಲು ಅಲ್ಲಿಯ ಪರದೆಯನ್ನು ಎಳೆದುಬಿಟ್ಟರು. ಒಳಗೆ ದೇವರಿಗೆ ಊಟ, ಹೊರಗೆ ನಾನು ಸೇರಿ ಎಲ್ಲರಿಗೂ ಚಡಪಡಿಕೆ. ಎಲ್ಲಿಗೆ ಹೋಗೋಣ.

ಎಲ್ಲಾ ಬಾಗಿಲು ಬಂದ್. ಹೂರಗೆ ಎಲ್ಲೆಂದರಲ್ಲಿ ಪೋಲೀಸ್ ಹಾಗು ಜನವೂ ಜನ. ಅಂದು ಉತ್ತರಾಖಂಡದ ಮುಖ್ಯಮಂತ್ರಿ ಧಮಿ ಬರುವುದಿತ್ತು. ಕಷ್ಟದಲ್ಲೇ ಅರ್ಧ ಗಂಟೆ ಕಳೆದೆ. ಚಿಕ್ಕ ಆರತಿ, ದೊಡ್ಡ ಆರತಿ ಆಯಿತು, ನಾನು ಸರಸರನೇ ಹೊರಗೆ ಬಂದು ಕೈ,ಕಾಲು,ನೆಟ್ಟಗೆ ಮಾಡಿದನಂತರ ನನಗೆ ಮರು ಜೀವ ಬಂದತ್ತಾಯಿತು.
ಸ್ನೇಹಿತರೆ ನನಗೆ ಅಷ್ಟುಹೊತ್ತು ಕೂರಲು ಅಂತಾ ಒಲವು ಇರಲಿಲ್ಲ. ಆದರೆ ನಾನು ದೇವರನ್ನು ನೋಡಿದಷ್ಟೇ ಖುಷಿ ಕೊಟ್ಟಿದ್ದು ಮುಂದೆ ಕೂತಿದ್ದ ಒಬ್ಬ ಭಕ್ತನನ್ನು ನೋಡಿ. ಈತ ಮೂರು ಗಂಟೆಯೂ ಬದ್ರಿನಾರಾಯಣನ ಮುಂದೆ ತಲೆ ತಗ್ಗಿಸಿದವನು ಎತ್ತಲೇ ಇಲ್ಲ. ಅವನನ್ನೇ ನೋಡುತ್ತಿದ್ದ ನನಗೆ ಸ್ವಲ್ಪ ಪುಣ್ಯ ಬಂದಿರಬಹುದು. ಅಲ್ಲಿ ನೆರೆದಿದ್ದ ಭಕ್ತಾದಿಗಳ ಪರಾಕಾಷ್ಠೆಯನ್ನು ನೋಡಿದ ನನಗೆ ದೇವರನ್ನೇ ನೋಡಿದಷ್ಟು ಸಂತೋಷವಾಯಿತು. ನಾನು ಧನ್ಯನಾದೆ.
ಹೋಟೆಲ್ಗೆ ಹೋಗಿ ಮಲಗಿದೆವು. ಎಚ್ಚರವಾಗಿದ್ದು ಬೆಳಿಗ್ಗೆ 10 ಗಂಟೆಗೆ. ಒಟ್ಟಾರೆ ಹೋಗಿದ್ದ ಕಡೆ ಒಳ್ಳೆ ರೂಮ್ಗಳು, ಒಳ್ಳೆಯ ಊಟ ಮತ್ತು ಒಳ್ಳೆಯ ಆತಿಥ್ಯ. ಎಲ್ಲಾ ಪುಣ್ಯ ಕ್ಷೇತ್ರಗಳಲ್ಲಿ ಸರಾಗವಾಗಿ ದರ್ಶನಗಳಾದವು. ಇನ್ನು ನಾವು ಡೆಹ್ರಾಡೂನ್ ಹೂಗ ಬೇಕು. ಆದರೇ ನಮ್ಮ ದುರದೃಷ್ಟವೇನೋ ಗೊತ್ತಿಲ್ಲ, ಹವಾಮಾನ ವೈಪರೀತ್ಯದಿಂದ ಬೆಳಿಗ್ಗೆಯೇ ರೆಡಿ ಇದ್ದ ನಮಗೆ ಮುಕ್ತಿ ದೊರೆತಿದ್ದು ಸಾಯಂಕಾಲ 6 ಗಂಟೆಗೆ. ನಮ್ಮಲ್ಲಿ ಬಂದ ಕೆಲವರು ಮಂಜು ಇಲ್ಲದ ಸಮಯದಲ್ಲಿ ಡೆಹ್ರಾಡೂನ್ಗೆ ಸೇರಿಕೊಂಡರು.

ಆದರೇ ನಮ್ಮ 6 ಮಂದಿಗೆ, ದಟ್ಟವಾದ ಮಂಜು, ಮಳೆ ಮತ್ತು ಮೋಡ ಇದ್ದಿದ್ದರಿಂದ ಹೆಲಿಕಾಪ್ಟರ್ ಬರಲೇ ಇಲ್ಲ. ಹೆಲಿ ಪ್ಯಾಡ್ನಲ್ಲೇ ಕಾಯುತ್ತಾ ಕಾರಿನಲ್ಲೇ ಕೂತಿದ್ದೆವು. ಒಮ್ಮೆ ಬೇರೆ ಹೆಲಿಕಾಪ್ಟರ್ ಬಂತಾದರೂ ಹೆಲಿ ಪ್ಯಾಡ್ ಕಾಣದೇ ಇದ್ದಿದ್ದರಿಂದ ಗೋವಿಂದ ಘಾಟ್ ಹೆಲಿ ಪ್ಯಾಡ್ನಲ್ಲಿ ಸ್ವಲ್ಪ ಸಮಯ ಕಳೆದು ಇಲ್ಲಿ ಮಂಜು ಕರಗದೇ ಇದ್ದಿದ್ದರಿಂದ ಆ ಯಾತ್ರಿಗಳನ್ನು ಡೆಹ್ರಾಡೂನ್ಗೆ ವಾಪಸ್ ಕರೆದೋಯ್ದರು. ಪಾಪ ಆ ಯಾತ್ರಿಗಳಿಗೆ ಬದರಿನಾಥ ದರ್ಶನ ಮಿಸ್ ಆಯಿತು.
ಸಾಯಂಕಾಲ 6 ಗಂಟೆಗೆ ನಮ್ಮನ್ನು ಕಾರಿನಲ್ಲಿ ಕಣಿವೆ ಇಳಿಸಿ ಗೋವಿಂದ ಘಾಟ್ ಹೆಲಿ ಪ್ಯಾಡ್ಗೆ ಕರೆದೋಯ್ದು ಅಲ್ಲಿ ನಮಗೋಸ್ಕರ ಹೆಲಿಕಾಪ್ಟರ್ ಡೆಹ್ರಾಡೂನಿಂದ ಬಂದು ಡೆಹ್ರಾಡೂನ್ಗೆ ಕರೆದೋಯ್ಯಲಾಯಿತು. ಸುಮಾರು ಮುಕ್ಕಾಲು ಗಂಟೆಯ ಪ್ರಯಾಣ. ನಮ್ಮ ಇಡೀ ಪ್ರವಾಸದ ಥ್ರಿಲ್ ನಮ್ಮ ಹೆಲಿಕಾಪ್ಟರ್ “ವರ್ಟಿಕಲ್ ಟೇಕ್ ಆಪ್” ಆದಾಗ. ಸುಮಾರು ಮೂರು ಸಾವಿರ ಅಡಿ ಎತ್ತರಕ್ಕೆ ಕ್ಷಣಾರ್ಧದಲ್ಲಿ ಏರಿತು. ಈ ದೃಶ್ಯ ನಮಗೆ ಅವಿಸ್ಮರಣೀಯ. ಇಲ್ಲಿಗೆ ನಾವು ನಮ್ಮ ಪ್ರವಾಸ ಮುಗಿಸಿದೆವು.

ನನ್ನಲ್ಲಿ ಹಿಮಾಲಯ ಪರ್ವತ ದರ್ಶನ ಮತ್ತು ಹಿಮ ಶಿಖರಗಳು ಅಚ್ಚಳಿಯದೇ ಉಳಿದುಬಿಟ್ಟಿದೆ. ಈ ಪ್ರವಾಸದಲ್ಲಿ ‘ಕೊರೋನಾ ವೈರಸ್’ ತರಲಿಲ್ಲ ಆದರೇ ‘ಸ್ಟಮಕ್ ಬಗ್’ ಬಿಡಲಿಲ್ಲ. ನನ್ನ ಈ ಪ್ರವಾಸ ಕಥನ ಯಾತ್ರಿಗಳಿಗೆ ಕೈ ಪಿಡಿ ಆಗಬಹುದೇನೊ ಎಂಬ ಆಶಾ ಭಾವನೆಯೊಂದಿಗೆ….
ಮುಗಿಯಿತು….
– ಖ್ಯಾತ ಮನೋವೈದ್ಯ ನಾಗೇಶ್ ಎ.ಎಂ.

