ಕೆ.ಆರ್.ಪೇಟೆ, ಜು. 3: ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಛಲವಾದಿ ಮಹಾಸಭೆಯ ನೂತನ ಪದಾಧಿಕಾರಿಗಳನ್ನು ಕಿಕ್ಕೇರಿ ಪಟ್ಟಣದ ಅರಳೀಕಟ್ಟೆ ವೃತ್ತದ ಬಯಲು ರಂಗಮಂದಿರದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್, ರಾಜ್ಯ ಸಮಿತಿ ಸದಸ್ಯ ಡಿ. ಪ್ರೇಮ್ ಕುಮಾರ್, ತಾಲ್ಲೂಕು ಗೌರವಾಧ್ಯಕ್ಷ ಸೋಮಸುಂದರ್, ಕಾರ್ಯದರ್ಶಿ ಹರಿಹರಪುರ ನರಸಿಂಹ ಹಾಗೂ ಸೊಸೈಟಿ ಮಾಜಿ ಅಧ್ಯಕ್ಷ ಮುರಳೀಧರ್ ಅವರ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಕಿಕ್ಕೇರಿ ಹೋಬಳಿ ಘಟಕದ ಗೌರವಾಧ್ಯಕ್ಷರಾಗಿ ಬೀಚನಹಳ್ಳಿ ಸಣ್ಣಯ್ಯ, ಅಧ್ಯಕ್ಷರಾಗಿ ಶಂಕರ್ ಕೆ.ಆರ್. ಕಳ್ಳನಕೆರೆ, ಉಪಾಧ್ಯಕ್ಷರಾಗಿ ಚಂದ್ರು ಬಸವನಹಳ್ಳಿ, ಕಾರ್ಯದರ್ಶಿಯಾಗಿ ವೆಂಕಟೇಶ್ (ಬೋಳ ಮಾರನಹಳ್ಳಿ), ಖಜಾಂಚಿಯಾಗಿ ರುದ್ರೇಶ್ (ಮಾರ್ಗೋನಹಳ್ಳಿ) ಅವರನ್ನು ಆಯ್ಕೆ ಮಾಡಲಾಯಿತು. ಜೊತೆಗೆ ವಿವಿಧ ಗ್ರಾಮಗಳ ಪ್ರತಿನಿಧಿಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಡಿ. ಪ್ರೇಮ್ ಕುಮಾರ್, ಛಲವಾದಿ ಮಹಾಸಭೆಯ ಸಂಸ್ಥಾಪಕರಾದ ದಿವಂಗತ ಕೆ. ಶಿವರಾಂ ಅವರ ಆದರ್ಶ, ಸಾಮಾಜಿಕ ಕಳಕಳಿ ಹಾಗೂ ಸಂಘಟನಾ ಚಿಂತನೆಗಳು ಇಂದಿಗೂ ಎಲ್ಲರಿಗೂ ಪ್ರೇರಣೆಯಾಗಿವೆ. ಅವರ ಆಶಯಗಳನ್ನು ಸಾಕಾರಗೊಳಿಸಲು ಸಮಾಜ ಸಂಘಟಿತರಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ತಾಲ್ಲೂಕು ಅಧ್ಯಕ್ಷ ಊಚನಹಳ್ಳಿ ನಟರಾಜ್ ಮಾತನಾಡಿ, ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲೂ ಸಕ್ರಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಗ್ರಾಮ ಮಟ್ಟದಲ್ಲಿ ಸಂಘಟನೆ ಬಲಪಡಿಸಿ ಶೀಘ್ರದಲ್ಲೇ ತಾಲ್ಲೂಕು ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಗೌರವಾಧ್ಯಕ್ಷ ಸೋಮಸುಂದರ್ ಮಾತನಾಡಿ, ಛಲವಾದಿ ಸಮುದಾಯದ ಎಲ್ಲರೂ ಮಹಾಸಭೆಯ ಸದಸ್ಯತ್ವ ಪಡೆದು ಸಂಘಟಿತರಾಗಬೇಕು. ಸಂವಿಧಾನಬದ್ಧವಾಗಿ ದೊರೆಯುವ ಸೌಲಭ್ಯಗಳನ್ನು ಪಡೆದು ಸಮಾಜದ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಕೆ. ಶಿವರಾಂ ಅವರ ಆಶಯಗಳನ್ನು ಈಡೇರಿಸಬೇಕು ಎಂದು ಕರೆ ನೀಡಿದರು.
– ಶ್ರೀನಿವಾಸ್ ಆರ್.
