ಚನ್ನರಾಯಪಟ್ಟಣ, ಜು. 6: ತಾಲೂಕಿನ ಚನ್ನರಾಯಪಟ್ಟಣ–ಅಮಾನಿಕೆರೆ ಕುಡಿಯುವ ನೀರಿನ ಏತ ನೀರಾವರಿ ಯೋಜನೆ (ತೋಟಿ ಪ್ರಾಜೆಕ್ಟ್)ಗೆ ಭೂಮಿ ಕಳೆದುಕೊಂಡ ರೈತರಿಗೆ ಭೂಸ್ವಾಧೀನ ಪರಿಹಾರ ಬಿಡುಗಡೆ ಮಾಡಿ, ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಸೋಮವಾರ ವಿಧಾನಸೌಧದಲ್ಲಿರುವ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿದ ಶಾಸಕರು, ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪರಿಹಾರವನ್ನು ತ್ವರಿತವಾಗಿ ಬಿಡುಗಡೆಗೊಳಿಸಿ ಅವಾರ್ಡ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಮನವಿ ಪತ್ರ ನೀಡಿದರು.
ಚನ್ನರಾಯಪಟ್ಟಣ ಅಮಾನಿಕೆರೆಯಿಂದ ನೀರನ್ನು ಎತ್ತಿ ತಾಲೂಕಿನ 25 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಪ್ರಸ್ತುತ 900 ಮೀಟರ್ ರೈಸಿಂಗ್ ಮೇನ್ ಕಾಮಗಾರಿ ಬಾಕಿಯಿದೆ. ಯೋಜನೆಯ ಆರಂಭದಿಂದ 16 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಅವಾರ್ಡ್ ಆಗದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಶಾಸಕರು ಸಚಿವರ ಗಮನಕ್ಕೆ ತಂದರು.

ಭೂಮಿ ಕಳೆದುಕೊಂಡ ರೈತರುಗಳಿಗೆ ಪರಿಹಾರ ಸಿಗದ ಕಾರಣ ಕಾಮಗಾರಿಗೆ ಅಡಚಣೆ ಉಂಟಾಗುತ್ತಿದೆ. ಹೀಗಾಗಿ ಭೂಸ್ವಾಧೀನ ಪರಿಹಾರ ಹಾಗೂ ಕಟ್ಟಡ ಸೇರಿದಂತೆ ಇತರೆ ಮೌಲ್ಯಮಾಪನ ಮೊತ್ತ ಸೇರಿ ಒಟ್ಟು ₹11.19 ಕೋಟಿ ಬಿಡುಗಡೆ ಮಾಡಿ, ಅವಾರ್ಡ್ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಚನ್ನರಾಯಪಟ್ಟಣ ತಾಲೂಕಿನ ಸಾವಿರಾರು ರೈತರು ಹಾಗೂ ಗ್ರಾಮಸ್ಥರ ಕುಡಿಯುವ ನೀರಿನ ಅವಶ್ಯಕತೆಗೆ ಈ ಯೋಜನೆ ಅತ್ಯಂತ ಮಹತ್ವದ್ದಾಗಿರುವುದರಿಂದ, ವಿಳಂಬವಿಲ್ಲದೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕರು ಒತ್ತಾಯಿಸಿದರು.
ಮನವಿಗೆ ಸ್ಪಂದಿಸಿದ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ಅಗತ್ಯ ಭೂಸ್ವಾಧೀನ ಪರಿಹಾರ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡುವಂತೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು. ಅಲ್ಲದೆ, ಶೀಘ್ರದಲ್ಲೇ ಚನ್ನರಾಯಪಟ್ಟಣ ತಾಲೂಕಿಗೆ ಭೇಟಿ ನೀಡಿ ಯೋಜನೆಯ ಪ್ರಗತಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.
