ಬೆಂಗಳೂರು, ಜು. 7: ಭಾರತದ ಅತಿ ದೊಡ್ಡ ಹಾಗೂ ಏಕೈಕ ಆಸ್ಕರ್-ಮಾನ್ಯತೆ ಪಡೆದ ಕಿರುಚಿತ್ರೋತ್ಸವವಾದ ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ (BISFF) ತನ್ನ 16ನೇ ಆವೃತ್ತಿಯನ್ನು ಆಗಸ್ಟ್ 14ರಿಂದ 16ರವರೆಗೆ ಬೆಂಗಳೂರಿನ ಆರುಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಆಯೋಜಿಸುತ್ತಿದೆ. ಆನ್ಲೈನ್ ಪ್ರದರ್ಶನಗಳು ಆಗಸ್ಟ್ 6ರಿಂದ 16ರವರೆಗೆ ನಡೆಯಲಿವೆ.
ಈ ವರ್ಷದ ಚಿತ್ರೋತ್ಸವದಲ್ಲಿ 100ಕ್ಕೂ ಹೆಚ್ಚು ದೇಶಗಳಿಂದ 11 ವಿಭಾಗಗಳಲ್ಲಿ ದಾಖಲೆಯ 3,340 ಕಿರುಚಿತ್ರಗಳು ಸ್ಪರ್ಧೆಗೆ ಸಲ್ಲಿಕೆಯಾಗಿದ್ದು, 5,000ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ 1,000ಕ್ಕೂ ಹೆಚ್ಚು ಚಲನಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ಸಿನಿಮಾ ಆಸಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ಈ ಬಾರಿ BISFF ತನ್ನ ಸ್ಪರ್ಧಾತ್ಮಕ ವಿಭಾಗವನ್ನು ಇನ್ನಷ್ಟು ವಿಸ್ತರಿಸಿದ್ದು, ಆಸ್ಕರ್ ಅರ್ಹತೆ ನೀಡುವ ಅಂತರರಾಷ್ಟ್ರೀಯ, ಭಾರತೀಯ ಹಾಗೂ ಅನಿಮೇಷನ್ ವಿಭಾಗಗಳ ಜೊತೆಗೆ AI (ಮಷೀನ್ ಮೇಡ್ ಮೂವೀಸ್) ಮತ್ತು ಡ್ಯಾನ್ಸಿಂಗ್ ಲೆನ್ಸ್ (ಸ್ಕ್ರೀನ್ಡ್ಯಾನ್ಸ್) ಎಂಬ ಎರಡು ಹೊಸ ವಿಭಾಗಗಳನ್ನು ಪರಿಚಯಿಸಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಚಿತ್ರಗಳು ಹಾಗೂ ನೃತ್ಯ ಮತ್ತು ಛಾಯಾಗ್ರಹಣದ ಸಂಯೋಜನೆಯ ಸಿನಿಮಾ ಕಲೆಗೆ ಈ ವಿಭಾಗಗಳು ವಿಶೇಷ ವೇದಿಕೆಯಾಗಲಿವೆ.

ಚಿತ್ರೋತ್ಸವದ ಕುರಿತು ಮಾತನಾಡಿದ ಸಂಸ್ಥಾಪಕ ಹಾಗೂ ಕಲಾತ್ಮಕ ನಿರ್ದೇಶಕ ಆನಂದ್ ವರದರಾಜ್, 16 ವರ್ಷಗಳ ಹಿಂದೆ ಯುವ ಪ್ರತಿಭೆಗಳಿಗೆ ತಮ್ಮ ಕಿರುಚಿತ್ರಗಳನ್ನು ಪ್ರದರ್ಶಿಸಿ ವಿಮರ್ಶೆ ಪಡೆಯಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ಆರಂಭವಾದ ಈ ಉತ್ಸವ ಇಂದು ವಿಶ್ವದ ಪ್ರಮುಖ ಕಿರುಚಿತ್ರೋತ್ಸವಗಳಲ್ಲಿ ಒಂದಾಗಿ ಬೆಳೆದಿದೆ ಎಂದು ಹೇಳಿದರು. ಆರಂಭದಲ್ಲಿ ಕೇವಲ 30 ಚಿತ್ರಗಳಿದ್ದರೆ, ಇಂದು 3,000ಕ್ಕೂ ಹೆಚ್ಚು ಪ್ರವೇಶಗಳು ದೊರೆಯುತ್ತಿವೆ. ಇಲ್ಲಿಂದ ಹೊರಹೊಮ್ಮಿದ ಹಲವು ನಿರ್ದೇಶಕರು ಆಸ್ಕರ್ ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ ಎಂದು ಅವರು ತಿಳಿಸಿದರು.

‘ACT’ ಎಂಬುದು ಈ ಬಾರಿಯ ಚಿತ್ರೋತ್ಸವದ ಆಶಯವಾಗಿದ್ದು, ಮಾಡು (Do), ಪ್ರದರ್ಶಿಸು (Perform), ವರ್ತಿಸು (Behave) ಎಂಬ ಮೂರು ಪರಿಕಲ್ಪನೆಗಳ ಮೂಲಕ ಸಿನಿಮಾ ಸಮಾಜದಲ್ಲಿ ಬದಲಾವಣೆಗೆ ಪ್ರೇರಕವಾಗಬೇಕು ಎಂಬ ಸಂದೇಶವನ್ನು ಸಾರಲಿದೆ.
BISFF ಭಾರತದಲ್ಲೇ ಆಸ್ಕರ್ ಅರ್ಹತೆ ನೀಡುವ ಏಕೈಕ ಕಿರುಚಿತ್ರೋತ್ಸವವಾಗಿದೆ. ಇಲ್ಲಿ ಪ್ರಶಸ್ತಿ ಪಡೆದ ಚಿತ್ರಗಳಿಗೆ ನೇರವಾಗಿ ಅಕಾಡೆಮಿ ಪ್ರಶಸ್ತಿಗಳ ಸ್ಪರ್ಧೆಗೆ ಅರ್ಹತೆ ದೊರೆಯುತ್ತದೆ. ಈ ಹಿಂದೆ I Am Not a Robot, An Irish Goodbye, Ice Merchants, The Dress ಹಾಗೂ Feeling Through ಮೊದಲಾದ ಚಿತ್ರಗಳು BISFF ಮೂಲಕ ಅಂತರರಾಷ್ಟ್ರೀಯ ಮನ್ನಣೆ ಪಡೆದಿವೆ.
ಈ ವರ್ಷದ ಸ್ಪರ್ಧೆಗೆ ಅಂತರರಾಷ್ಟ್ರೀಯ ವಿಭಾಗದಿಂದ 1,726, ಭಾರತೀಯ ವಿಭಾಗದಿಂದ 756, ಕರ್ನಾಟಕದಿಂದ 306, ಅನಿಮೇಷನ್ ವಿಭಾಗದಲ್ಲಿ 284 ಹಾಗೂ ಕ್ವೀರ್, AI ಮತ್ತು ಸ್ಕ್ರೀನ್ಡ್ಯಾನ್ಸ್ ವಿಭಾಗಗಳಲ್ಲಿ ತಲಾ 118 ಚಿತ್ರಗಳು ಸಲ್ಲಿಕೆಯಾಗಿವೆ.
ಚಿತ್ರೋತ್ಸವವು ಬೆಂಗಳೂರಿನ ಸುಚಿತ್ರ ಫಿಲ್ಮ್ ಸೊಸೈಟಿ, ಆರ್ವಿ ಯೂನಿವರ್ಸಿಟಿ, ಲಿಟ್ಸ್ಕೂಲ್, ಅಲಯನ್ಸ್ ಫ್ರಾಂಸೆಸ್, ಗೋಥೆ ಇನ್ಸ್ಟಿಟ್ಯೂಟ್ ಮ್ಯಾಕ್ಸ್ ಮುಲ್ಲರ್ ಭವನ ಹಾಗೂ ಇಂಡಿಯನ್ ಹೆರಿಟೇಜ್ ಅಕಾಡೆಮಿ ಸೇರಿದಂತೆ ಆರು ಪ್ರಮುಖ ಸ್ಥಳಗಳಲ್ಲಿ ನಡೆಯಲಿದೆ.
ಚಿತ್ರ ಪ್ರದರ್ಶನಗಳ ಜೊತೆಗೆ ಡಿಸ್ಕವರಿ ಫಿಲ್ಮ್ ಮಾರ್ಕೆಟ್, ಪ್ರೊಡ್ಯೂಸರ್ ಬಜಾರ್, ಎಕೋಸ್ ಫಿಲ್ಮ್ ಸ್ಕೂಲ್ ಕಾನ್ಫರೆನ್ಸ್, ಪ್ಯಾನೆಲ್ ಚರ್ಚೆಗಳು, ಕಾರ್ಯಾಗಾರಗಳು ಹಾಗೂ ಮಾಸ್ಟರ್ಕ್ಲಾಸ್ಗಳನ್ನೂ ಆಯೋಜಿಸಲಾಗಿದೆ. ಇವುಗಳಲ್ಲಿ ದೇಶ-ವಿದೇಶಗಳ ಸಿನಿಮಾ ತಜ್ಞರು ಹಾಗೂ ಉದ್ಯಮದ ಗಣ್ಯರು ಭಾಗವಹಿಸಲಿದ್ದಾರೆ.
ಚಿತ್ರೋತ್ಸವದಲ್ಲಿ ಭಾಗವಹಿಸಲು ಪ್ರತಿನಿಧಿಗಳ ನೋಂದಣಿ ಈಗಾಗಲೇ ಆರಂಭವಾಗಿದ್ದು, ಆಸಕ್ತರು www.bisff.in ಮೂಲಕ ನೋಂದಾಯಿಸಿಕೊಳ್ಳಬಹುದು.
