ದೇಶದಲ್ಲಿ ಟೆನ್ನಿಸ್ ಕ್ರೀಡೆಯ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ಅಸೆಟ್ಸ್, ಭಾರತದ ಖ್ಯಾತ ಟೆನ್ನಿಸ್ ಅಕಾಡೆಮಿಯಾದ ರೋಹನ್ ಬೋಪಣ್ಣ ಟೆನ್ನಿಸ್ ಅಕಾಡೆಮಿ (ಆರ್ಬಿಟಿಎ) ಜೊತೆ ಐದು ವರ್ಷಗಳ ಮಹತ್ವದ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.
ಈ ಒಪ್ಪಂದದಡಿ ಅಸೆಟ್ಸ್ ಸಂಸ್ಥೆಯು ಆರ್ಬಿಟಿಎಗೆ ಸಹ-ಪಾಲುದಾರನಾಗಿ ಕಾರ್ಯನಿರ್ವಹಿಸಿ, ಅಕಾಡೆಮಿಯ ಮೂಲಸೌಕರ್ಯ ವಿಸ್ತರಣೆ ಹಾಗೂ ಪ್ರತಿಭಾನ್ವಿತ ಯುವ ಆಟಗಾರರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬೆಂಬಲ ನೀಡಲಿದೆ. ಕೇವಲ ಪ್ರಾಯೋಜಕತ್ವಕ್ಕೆ ಸೀಮಿತವಾಗದೆ, ಜಾಗತಿಕ ಮಟ್ಟದ ಟೆನ್ನಿಸ್ ಚಾಂಪಿಯನ್ಗಳನ್ನು ರೂಪಿಸುವ ದೀರ್ಘಾವಧಿಯ ಯೋಜನೆಗೆ ಇದು ಬುನಾದಿಯಾಗಲಿದೆ.
ಎರಡು ಬಾರಿ ಗ್ರಾಂಡ್ ಸ್ಲಾಮ್ ಪ್ರಶಸ್ತಿ ವಿಜೇತ ಹಾಗೂ ಮಾಜಿ ವಿಶ್ವ ನಂ.1 ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಸ್ಥಾಪಿಸಿರುವ ಆರ್ಬಿಟಿಎ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಟೆನ್ನಿಸ್ ಅಭಿವೃದ್ಧಿಗೆ ಶ್ರಮಿಸುತ್ತಿದೆ. 10ಕ್ಕೂ ಹೆಚ್ಚು ವಿಶೇಷ ತರಬೇತಿ ಕಾರ್ಯಕ್ರಮಗಳ ಮೂಲಕ ಈಗಾಗಲೇ 700ಕ್ಕೂ ಹೆಚ್ಚು ಆಟಗಾರರಿಗೆ ತರಬೇತಿ ನೀಡಿದ್ದು, ಕೋಚ್ಗಳು, ಕ್ರೀಡಾ ವಿಜ್ಞಾನಿಗಳು, ಫಿಸಿಯೋಥೆರಪಿಸ್ಟ್ಗಳು, ಪೌಷ್ಟಿಕಾಂಶ ತಜ್ಞರು ಹಾಗೂ ಕ್ರೀಡಾ ಮನೋವಿಜ್ಞಾನ ತಜ್ಞರ ಸಹಯೋಗದಲ್ಲಿ ಸಮಗ್ರ ತರಬೇತಿ ನೀಡುತ್ತಿದೆ.
ಅಸೆಟ್ಸ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸುನಿಲ್ ಪಾರಿಕ್ ಮಾತನಾಡಿ, ಪ್ರತಿಭಾನ್ವಿತ ಯುವ ಆಟಗಾರರನ್ನು ಗುರುತಿಸಿ ಅವರಿಗೆ ವಿಶ್ವದರ್ಜೆಯ ತರಬೇತಿ ನೀಡುವಲ್ಲಿ ಆರ್ಬಿಟಿಎ ಉತ್ತಮ ಕೆಲಸ ಮಾಡುತ್ತಿದ್ದು, ಈ ಸಹಭಾಗಿತ್ವದಿಂದ ಆ ಪ್ರಯತ್ನ ಮತ್ತಷ್ಟು ಬಲಗೊಳ್ಳಲಿದೆ. ಕ್ರೀಡೆಯು ಯುವಜನರಲ್ಲಿ ಶಿಸ್ತು, ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಶಕ್ತಿ ಹೊಂದಿದೆ ಎಂದು ಹೇಳಿದರು.
ಆರ್ಬಿಟಿಎ ಸಂಸ್ಥಾಪಕ ರೋಹನ್ ಬೋಪಣ್ಣ ಮಾತನಾಡಿ, ವಿಶ್ವದರ್ಜೆಯ ಆಟಗಾರರನ್ನು ರೂಪಿಸಲು ಪ್ರತಿಭೆಯ ಜೊತೆಗೆ ಗುಣಮಟ್ಟದ ಕೋಚಿಂಗ್, ಕ್ರೀಡಾ ವಿಜ್ಞಾನ ಹಾಗೂ ದೀರ್ಘಾವಧಿಯ ಬೆಂಬಲ ಅತ್ಯಗತ್ಯವಾಗಿದೆ. ಅಸೆಟ್ಸ್ ಜೊತೆಗಿನ ಈ ಪಾಲುದಾರಿಕೆ ಭಾರತೀಯ ಟೆನ್ನಿಸ್ಗೆ ಹೊಸ ಶಕ್ತಿ ನೀಡಲಿದ್ದು, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಆಟಗಾರರನ್ನು ರೂಪಿಸಲು ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿನ್ಯಾಸ ಮತ್ತು ಸುಸ್ಥಿರ ಅಭಿವೃದ್ಧಿಗೆ ಹೆಸರಾಗಿರುವ ಅಸೆಟ್ಸ್ ಸಂಸ್ಥೆಯು ತನ್ನ ವಸತಿ ಯೋಜನೆಗಳಲ್ಲಿ ಕ್ರೀಡಾ ಹಾಗೂ ಫಿಟ್ನೆಸ್ ಮೂಲಸೌಕರ್ಯಗಳಿಗೆ ವಿಶೇಷ ಆದ್ಯತೆ ನೀಡುತ್ತಿದೆ. ಈ ಪಾಲುದಾರಿಕೆಯ ಮೂಲಕ ಬೆಂಗಳೂರಿನಿಂದ ಆರಂಭವಾಗಿ ದೇಶದ ಟೆನ್ನಿಸ್ ಭವಿಷ್ಯಕ್ಕೆ ಮಹತ್ವದ ಕೊಡುಗೆ ನೀಡುವ ಗುರಿ ಹೊಂದಿದೆ.
