ಇಲ್ಲಿ ನಾನು ಏರಿದ್ದ ಬಸ್ಸಿನೊಳಗೆ ಯಾರೋ ಒಬ್ಬ ಅಸಾಮಿ ಒಂದು ರೂಪಾಯಿಗೆ ಹದಿನೈದು ಮೀನಿನಂತೆ ಅಗ್ಗವಾಗಿ ಸಿಕ್ಕಿತೆಂದು ಸಂತೆಯಲ್ಲಿ ಕೊಂಡಿದ್ದ ಭೂತಾಯಿ ಮೀನನ್ನು ಪ್ಲಾಸ್ಟಿಕ್ ವೈರ್ ಚೀಲದಲ್ಲಿ ಹಾಕಿಕೊಂಡು, ಅದನ್ನಿಡಲು ಜಾಗವಿಲ್ಲದೇ ಪ್ರಯಾಣಿಕರು ನೇತಾಡಲು ಜೋತುಬಿಟ್ಟಿರುವ ಹಿಡಿಕೆಯನ್ನು ಹಿಡಿದುಕೊಂಡಿದ್ದ ಕೈಯಲ್ಲೇ ಹಿಡಿದುಕೊಂಡಿದ್ದಾನೆ. ಅದರೊಳಗಿಂದ ಜಿನುಗುತ್ತಿದ್ದ ಮೀನಿನ ಅಸಹ್ಯಭರಿತ ರಸ, ಚೀಲ ಜೋತಾಡುತ್ತಾ ತೂಗಾಡುತ್ತಿದ್ದಂತೆ ಕುಳಿತಿದ್ದವರ, ನಿಂತಿದ್ದವರ ಮೈಮೇಲೆ, ಬಟ್ಟೆಗಳ ಮೇಲೆ ತಟ್ ತಟ್ಟೆಂದು ಬೀಳುತ್ತಿತ್ತು. ಹೈಸ್ಕೂಲು ಹುಡುಗಿಯೊಬ್ಬಳ ಯೂನಿಫಾರ್ಮಿನ ಜಾಕೆಟ್ ಮೀನಿನ ರಸದಿಂದ ತೋಯ್ದು ಘಮ್ಮೆನ್ನಲಾರಂಭಿಸಿತು. ಪಕ್ಕದ ಸೀಟಿನಲ್ಲಿ ಕುಳಿತಿದ್ದ ಕಪ್ಪು ಕೋಟಿನ, ಕಪ್ಪು ಟೋಪಿಯ ತೋಟದ ಕರೀಗೌಡರು ಈ ಅಸಾಮಿಗೆ ಗದರಲು ಬಾಯಿ ತೆರೆಯುತ್ತಿದ್ದಂತೆ, ಅವರ ಮೂಗು ಮತ್ತು ಬಾಯಿಯ ನಡುವಿನ ಜಾಗಕ್ಕೇ ಲಥ್ ಎಂದು ಮೀನಿನ ರಸ ಮೆತ್ತಿಕೊಳ್ಳಬೇಕೇ!
“ಗಬ್ಲು ಶನಿ ಮುಂಡೆಮಗ್ನೇ, ಮೀನ್ಸಾರು ತಿನ್ಬೇಕು ಅಂತಾ ನಮಗೆಲ್ಲಾ ಪನ್ನೀರ್ ಇಡ್ತಾ ಇದಿಯಾ? ರೀ ಕಂಡಕ್ಟರ್, ಈ ಕಸಗಲು ನನ್ಮಗನ್ನ ಇಳಿಸ್ತೀರೋ, ಇಲ್ಲ ನಾವೇ ಇಳೀಬೇಕೋ? ನಿಲ್ಲಿಸ್ರೀ ಬಸ್! ನಿಲ್ಲಿಸ್ರೀ ಡ್ರೈವರ್ರೇ!!” ಎಂದು ಗೌಡರು ಭೋರ್ಗರೆಯತೊಡಗಿದರು.
ಆ ದಾರಿಯಲ್ಲಿ ಆ ದಿನಕ್ಕೆ ಅದೇ ಕೊನೆಯ ಬಸ್ಸಾಗಿದ್ದರಿಂದ ಈ ಕರೀಗೌಡರೇನೂ ಬಸ್ಸಿನಿಂದ ಇಳಿಯುತ್ತಿರಲಿಲ್ಲ; ಅದು ಬೇರೆ ಪ್ರಶ್ನೆ. ಕಂಡಕ್ಟರ್ ಇನ್ನೂ ಡ್ರೈವರ್ ಹಿಂಭಾಗದಲ್ಲಿ ಟಿಕೆಟ್ ಕೊಡುತ್ತಿದ್ದ. ಹ್ಯಾಂಡ್ಪೋಸ್ಟ್ನಲ್ಲಿ ರೈಸ್ಮಿಲ್ಗೆ ಬಂದಿದ್ದ ಅನೇಕರು ಅಕ್ಕಿ-ನುಚ್ಚು, ತೌಡು ಮೂಟೆಗಳೊಂದಿಗೆ ಹಿಂಬದಿಯಲ್ಲಿ ಮಾತ್ರ ಪ್ರವೇಶದ್ವಾರವಿದ್ದ ಬಸ್ಸನ್ನೇರಲು ಪೈಪೋಟಿ ನಡೆಸತೊಡಗಿದರು. ಈ ಬಸ್ ಬಿಟ್ಟರೆ ಆ ದಿನ ಊರಿಗೆ ಹೋಗುವಂತೆಯೇ ಇರಲಿಲ್ಲವಾದ್ದರಿಂದ ಮೂರ್ನಾಲ್ಕು ಜನ ಮೂಟೆಗಳನ್ನು ಬಸ್ನ ಪ್ರವೇಶದ್ವಾರದ ಬಳಿಯೇ ರಸ್ತೆ ಮೇಲೆ ಇಟ್ಟು, ಬಸ್ನ ಮುಂಭಾಗಕ್ಕೆ ಬಂದು ತಮ್ಮನ್ನು ಹಾಗೂ ತಮ್ಮ ಮೂಟೆಗಳನ್ನು ಹತ್ತಿಸಿಕೊಳ್ಳದೇ ಬಸ್ ಮುಂದಕ್ಕೆ ಹೋಗುವಂತಿಲ್ಲ ಎಂಬಂತೆ ತಡೆಯೊಡ್ಡಿದ್ದರು.
ಇತ್ತ ಬಸ್ನೊಳಗೆ ಮೀನಿನ ಅಸಾಮಿ, “ಏನ್ ಸಾವ್ಕರ್ರೇ, ನಿಮಗೇನೋ ಸೀಟ್ ಸಿಕ್ಕಿದೆ ಅಂತಾ ರೋಪ್ ಹಾಕ್ತೀರಾ? ನಾನೇನ್ ಪುಗ್ಸಟ್ಟೆ ಹೋಗ್ತಿಲ್ಲ. ನಾನೂ ಟಿಕೆಟ್ ತಗಂಡೇಯ ತಿಳ್ಕಳಿ,” ಎಂದ.
“ರೀ ಕಂಡಕ್ಟರ್, ಇಳಿಸ್ರೀ ಈ ಶನಿಮುಂಡೇಮಗನ್ನ. ಕುಡಿದು ಬೇರೆ ಬಂದಿದಾನೆ!” ಎಂದರು ಕರೀಗೌಡರು.
ಅಷ್ಟರಲ್ಲಿ ಯಾರೋ ಬಸ್ ಹತ್ತಲಿಕ್ಕೆ ಯತ್ನಿಸುತ್ತಾ ಹಿಡಿದುಕೊಳ್ಳಲು ಏನೂ ಸಿಗದೇ ನನ್ನ ಪ್ಯಾಂಟಿನ ಬೆಲ್ಟ್ ಅನ್ನು ಬಲವಾಗಿ ಹಿಡಿದು ಅದರ ಸಪೋರ್ಟ್ನಲ್ಲಿ ಬಸ್ನೊಳಗೆ ನುಸುಳಲು ಹಲ್ಲು ಕಚ್ಚಿ ಪ್ರಯತ್ನಿಸಬೇಕೇ! ಕೇವಲ ಒಂದೇ ಕೈಯಲ್ಲಿ ಕಂಬಿ ಹಿಡಿದು, ಇನ್ನೊಂದು ಕೈಯಲ್ಲಿ ಬ್ಯಾಗಿನೊಂದಿಗೆ ಬ್ಯಾಲೆನ್ಸ್ ಮಾಡುತ್ತಿದ್ದ ನಾನು ಸಮತೋಲನ ತಪ್ಪಿ ಅರ್ಧಚಂದ್ರಾಕಾರವಾಗಿ ರೌಂಡ್ ಹೊಡೆದೆ.
“ಬಿಡ್ರೀ, ಯಾರ್ರೀ ಅದು? ಬಿಡ್ರೀ!” ಎಂದರೂ ಆ ಮನುಷ್ಯ, ಇನ್ನೂ ಸ್ಟಾರ್ಟಿಂಗ್ನಲ್ಲೇ ಇದ್ದ ಈ ಬಸ್ಸನ್ನು ಬಿಟ್ಟರೆ ಕೆಟ್ಟೆ ಎಂಬಂತೆ ಇನ್ನಾರದೋ ಕೈಯಲ್ಲಿದ್ದ ಬ್ಯಾಗನ್ನೇ ಹಿಡಿದು ಜಗ್ಗತೊಡಗಿದ. ಫ್ಯಾಕ್ಟಂಫಾಸ್ 20-20-15 ಎಂಬ ಗೊಬ್ಬರದ ಚೀಲದಿಂದ ಸೂಬರಿಗೆ ಹೊಲಿಸಿದ್ದ ಆ ಚೀಲದ ಹ್ಯಾಂಡಲ್ ಪಠಾರನೆ ಕಿತ್ತುಹೋಗಿ, ಬ್ಯಾಗಿನೊಂದಿಗೆ ಆ ಮನುಷ್ಯನೂ ಬಸ್ನಿಂದ ಕೆಳಗೆ ಉದುರಿದ.
ಬ್ಯಾಗಿನಲ್ಲಿದ್ದ ಟೊಮ್ಯಾಟೊ, ಈರುಳ್ಳಿ, ಬದನೆಕಾಯಿ, ಬಿಡಿಸೋಕಾಳು, ಮೂಲಂಗಿ, ಕಡ್ಲೆಪುರಿ, ಹೇರ್ಪಿನ್, ಭೂತಾಯಿ ಮೀನು, ಮೆಣಸಿನಕಾಯಿ ಬೋಂಡಾ, ನೆಕ್ಕರೆ ಮಾವಿನಹಣ್ಣು, ಹೊಸ ಹವಾಯಿ ಚಪ್ಪಲಿ—ಎಲ್ಲವೂ ಟಾರು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಬ್ಯಾಗಿನ ಯಜಮಾನ ನೋಡ್ತಾನೆ, ಕೈಯಲ್ಲಿ ಬ್ಯಾಗೇ ಇಲ್ಲ! ಕ್ಷುದ್ರನಾಗಿ ತನ್ನ ಗ್ರಾಮೀಣ ಡಿಕ್ಷನರಿಯನ್ನೇ ಓಪನ್ ಮಾಡಿದ.
“ಎಲ್ಲಾ ತುಂಬಿ ತಂದುಕೊಡ್ತೀಯೋ, ಇಲ್ಲಾ ನಿನ್ ತಿಥಿನೇ ಮಾಡ್ತೀನಿ. ಏನ್ ನೋಡ್ತಿದ್ದೀಯ? ತುಂಬ್ಸೋ, ತುಂಬ್ಸು!” ಎಂದು ಬೊಬ್ಬಿರಿಯತೊಡಗಿದ.
ಬಿದ್ದವನು, “ಕೆಲ್ಸ ಕೆಟ್ಟೋಯ್ತಲಪ್ಪಾ!” ಎಂದು ಉರುಳುರುಳಿ ಹೋಗುತ್ತಿದ್ದ ಈರುಳ್ಳಿ, ಟೊಮ್ಯಾಟೊಗಳನ್ನು ಹಿಡಿಯಲು ಹೋಗಿ ಎತ್ತಿನ ಗಾಡಿಯೊಂದರಡಿ ಸಿಕ್ಕಿಹಾಕಿಕೊಂಡು ಗೋಳಾಡತೊಡಗಿದ.
ಈ ಎಲ್ಲಾ ಗೊಂದಲಗಳ ನಡುವೆಯೇ ಬಳೆ ಮಾರುವ ಹೆಂಗಸೊಂದು, “ಅಣ್ಣಾ, ನಿಮ್ ಕೈಮುಗಿತೀನಣ್ಣಾ. ಇದೇ ಲಾಸ್ಟ್ ಬಸ್. ಈಟೇ ಈಟು ಜಾಗ ಕೊಡಣ್ಣಾ,” ಎಂದು ಬ್ಯಾಗ್ ಕಳೆದುಕೊಂಡು ಕೂಗಾಡುತ್ತಿದ್ದವನನ್ನು ಕೇಳತೊಡಗಿದಳು.
ಮೊದಲೇ ತನ್ನ ಬ್ಯಾಗಿನ ರಹಸ್ಯವೆಲ್ಲ ಹ್ಯಾಂಡ್ಪೋಸ್ಟ್ನಂತಹ ಮರ್ದಾರಿ ಕೂಡುವಲ್ಲಿ ಜಗಜ್ಜಾಹಿರಾಗಿದ್ದರಿಂದ ವ್ಯಗ್ರನಾಗಿದ್ದ ಆ ಮನುಷ್ಯ, “ನಿನಗೆ ಹತ್ತಕ್ಕೆ ಈ ಬಸ್ಸೇ ಬೇಕಾ? ಎಲ್ಲಾದ್ರೂ ನುಸ್ಕೊಂಡು ಸಾಯಿ. ನಾವೇ ಸರ್ಕಸ್ ಮಾಡ್ತಿದ್ದೀವಿ. ಏಯ್, ಎತ್ತೋ! ಒಂದೇ ಒಂದು ಸಾಮಾನು ಕಡಿಮೆ ಆಗಿದ್ರೂ ನಿನ್ನ ಇಲ್ಲೇ ಹಾಕಿ ಕುಕ್ಕರಿಸ್ತೀನಿ,” ಎಂದು ಒಂದೇ ಮಾತಿನಲ್ಲಿ ಇಬ್ಬರನ್ನೂ ಜಾಡಿಸತೊಡಗಿದ.
ಇತ್ತ ಬಸ್ನೊಳಗೆ ಭೂತಾಯಿ ಮೀನಿನ ರಸವತ್ತಾದ ಪರಿಮಳ, ಯಾರೋ ಮುಡಿದಿದ್ದ ಪಾತಾಳಗರುಡ ಕುಡಿಯ ತಲೆನೋವು ತರಿಸುವ ವಾಸನೆ, ಶುಕ್ರವಾರದ ನಮಾಜಿಗೆ ಬಂದಿದ್ದ ಕಾಕಾಗಳ ಅತ್ತರಿನ ಘಮಲು, ಪೋರ್ಕ್ ಬಾಯಮ್ಮನ ಹಂದಿ ಮಾಂಸದ ಪ್ಯಾಕೆಟ್ಟಿನ ಹಸಿ ಮಾಂಸದ ವಾಸನೆ, ಗದ್ದೆ ಹೂಡಲು ಸಿದ್ಧ ಮಾಡಿಸಿಕೊಂಡ ಟಿಲ್ಲರಿನ ಕೇಜ್ವ್ಹೀಲಿನ ಗ್ರೀಸ್ ವಾಸನೆ—ಹೀಗೆ ನಾನಾ ವಾಸನೆಗಳು ಬೆರೆತು ವಿಚಿತ್ರ ವಾತಾವರಣ ಸೃಷ್ಟಿಯಾಗಿತ್ತು.
ಶನಿದೇವರ ಫೋಟೋವನ್ನು ಎದೆ ಮೇಲೆ ತೂಗುಹಾಕಿಕೊಂಡು ಕಾಣಿಕೆ ಎತ್ತುವ ದೇವರ ಏಜೆಂಟ್, ಕೆಂಪು, ನೀಲಿ, ಹಸಿರು ಟೇಪ್ಗಳಿಂದ ಜಡೆ ಕಟ್ಟಿದ, ಬಿಳಿ ರವಿಕೆ, ಹೂಹೂವಿನ ಲಂಗ ಹಾಗೂ ಅದೇ ಬಣ್ಣದ ದಾವಣಿ ಧರಿಸಿದ್ದ ಹದಿನಾರು ಕೆಲಸದ ಹುಡುಗಿಯರು ಸ್ಥಳೀಯರಿಗೆ ಸುಲಭವಾಗಿ
ಅರ್ಥವಾಗದ ಭಾಷೆಯಲ್ಲಿ ತಮ್ಮತಮ್ಮಲ್ಲೇ ಕಚಪಚನೆ ಭಾರೀ ಹುರುಪಿನಿಂದ ಮಾತನಾಡುತ್ತಿದ್ದರು. ಸ್ಥಳೀಯ ಪ್ಯಾಂಟ್-ಶರ್ಟ್ ಧರಿಸಿದ್ದ ಹುಡುಗರ ಎದುರು ಹೂಹೂವಿನ ಚಿತ್ರಗಳಿದ್ದ ಲುಂಗಿಯನ್ನು ಸುತ್ತಿಕೊಂಡು ಕೀಳರಿಮೆಯಿಂದ ನಿಂತಿದ್ದ ಅದೇ ಹದಿನಾರು ಕೆಲಸದ ಯುವಕರು. ಬೇಕೆಂದೇ ದಾವಣಿಗಳನ್ನು ಒತ್ತಿಕೊಂಡು ಆಚೀಚೆ ಹೊಸೆದಾಡುತ್ತಿದ್ದ ಕಾಲೇಜು ಪಡ್ಡೆಗಳು. ದಾವಣಿಗಳ ರಕ್ಷಣೆಗೆ ಹಾತೊರೆದು ಅಡ್ಡಡ್ಡ ನಿಂತಿದ್ದ ಅದೇ ಹದಿನಾರು ಕೆಲಸದ ಮುದುಕಿಯರು. ಏನಾದರೂ ಆಗಲಿ, ಪೆಟ್ಟು ಬೀಳದಿದ್ದರೆ ಸಾಕೆಂದು ಎತ್ತಲೋ ನೋಡುತ್ತಿದ್ದ ಅದೇ ಗುಂಪಿನ ಹಿರಿಯ ಗಂಡಸರು.
ವಾರದ ಹಸುಗೂಸನ್ನು ಎತ್ತಿಕೊಂಡಿದ್ದ ಹೆಂಗಸು ತನ್ನ ಪಕ್ಕ ಕುಳಿತಿದ್ದ ಟೀಚರಮ್ಮನಿಗೆ, “ಸರ್ಕಾರಿ ಆಸ್ಪತ್ರೆಯಂತೆ ಆಸ್ಪತ್ರೆ, ಮನುಷ್ಯರಾದವರು ಯಾರಾದ್ರೂ ಇರ್ತಾರಾ ಅಲ್ಲಿ? ಕೆಲ ಡಾಕ್ಟರು ಯಾಕಾದ್ರೂ ಈ ಆಸ್ಪತ್ರೆ ಇದೆಯಪ್ಪಾ ಅಂತ ಬೇಕೋ ಬೇಡವೋ ಎಂದು ಬರ್ತಾರೆ. ಇನ್ನು ಕೆಲವರನ್ನು ನೋಡಿದರೆ ಇಲ್ಲದಿದ್ದ ಖಾಯಿಲೆಯೇ ಹೊಸದಾಗಿ ಬರುತ್ತೆ. ಕೆಲಸಗಾರರು ಈ ಕ್ಷಣ ಇಲ್ಲಿದ್ರೆ ಮುಂದಿನ ಕ್ಷಣ ಕ್ಯಾಂಟೀನಿನಲ್ಲಿ ಹರಟೆ ಹೊಡಿತಾ ಇರ್ತಾರೆ. ಯಾರಾದ್ರೂ ಮಾತಾಡಿಸಿದ್ರೆ ಇದ್ಯಾವ ಉಪದ್ರವ ಅಂತ ಹುಳವನ್ನ ನೋಡಿದಂತೆ ನೋಡ್ತಾರೆ ಮಾರಾಯ್ತಿ. ಸರ್ಕಾರಿ ಸಂಬಳಕ್ಕೆ ಕೆಲಸ ಮಾಡಿದ್ರೂ ಏನೋ ಮಹಾ ಉಪಕಾರ ಮಾಡ್ತಿದೀವಿ ಅನ್ನೋ ತರ ಆಡ್ತಾರೆ. ಸುಮ್ಸುಮ್ನೆ ಯಾವ್ಯಾವುದೋ ಕಾರಣಕ್ಕೆ ಅತ್ತಿಂದಿತ್ತ ಓಡಾಡ್ತಾನೇ ಇರ್ತಾರೆ. ಆ ಗಂಡ-ಹೆಂಡತಿ ಡಾಕ್ಟರ್ ಇದ್ರಲ್ಲ, ಅವಾಗ ಎಷ್ಟು ಚೆನ್ನಾಗಿತ್ತು. ಈಗೇನು ರೋಗ ಬಡಿದಿದೆಯೋ ಆ ಆಸ್ಪತ್ರೆಗೆ ದೇವ್ರಿಗೇ ಗೊತ್ತು. ಇರೋದ್ರಲ್ಲಿ ಕುಳ್ಳಗೆ ಇದಾರಲ್ಲ, ಮತ್ತೆ ಎತ್ತರಕ್ಕೆ ಕನ್ನಡಕ ಹಾಕ್ಕಂತಾರಲ್ಲ, ಅವ್ರೇನೋ ಒಳ್ಳೆಯವರು. ಇನ್ನು ಕೆಲಸಗಾರರಲ್ಲಿ ಅದೇ ಆಚಾರ್ರು, ಶೆಟ್ರು, ನಾಯಕ್ರು ಇದ್ದದ್ದರಲ್ಲಿ ಆಗಬಹುದು. ಹೀಗೆ ಮಾಡಿ ಜನ ಬೇಸತ್ತು ಹೋಗುವಂತೆ ಮಾಡಿ, ಇಷ್ಟು ದೊಡ್ಡ ಆಸ್ಪತ್ರೆಯನ್ನು ಯಾರಾದ್ರೂ ಪ್ರೈವೇಟ್ನವರಿಗೆ ಮಾರೋ ಅಂದಾಜಿದೆಯೇನೋ?” ಎಂದಳು.
“ಹೂ, ಎಷ್ಟೋ ಸರ್ಕಾರಿ ಸಂಸ್ಥೆಗಳನ್ನು ಸುಮ್ಮನೇ ಕೆಲಸಗಾರರನ್ನು ಸಾಕಲಿಕ್ಕೆ ನಡೆಸ್ತಾ ಇದಾರೆ. ಯಾವಾಗಲೂ ಲಾಸ್ನಲ್ಲೇ ನಡೆಯುತ್ತಿರುತ್ತವೆ ಅಥವಾ ನಡೆಸುತ್ತಾ ಇರ್ತಾರೆ. ರೋಗಗ್ರಸ್ತ ಅಂತ ತೋರಿಸಿ, ಒಂದು ದಿನ ಯಾರೋ ಅವರಿಗೇ ಬೇಕಾದವರಿಗೆ, ಖಾಸಗಿಯವರಿಗೆ ಪುಗ್ಸಟ್ಟೆ ಮಾರಿದಂತೆ ಮಾರಿ ಕೈತೊಳ್ಕೋತಾರೆ. ಅವನು ಕಡಿಮೆ ಕೆಲಸಗಾರರಿಂದಲೇ ಜಾಸ್ತಿ ಉತ್ಪಾದನೆ ಮಾಡಿ ಲಾಭ ಮಾಡ್ಕೋಳ್ತಾನೆ. ಇದೊಂಥರಾ ‘ನಾ ಸತ್ತಂಗೆ ಮಾಡ್ತೀನಿ, ನೀ ಅತ್ತಂಗೆ ಮಾಡು’ ಎನ್ನುವಂತೆ. ಸರ್ಕಾರಿ ಕೆಲಸ ಅಂದರೆ ಬೇಕಾಬಿಟ್ಟಿಯಾಗಿ ಕಾಟಾಚಾರಕ್ಕೆ ಲೆಕ್ಕ ತೋರಿಸಲಿಕ್ಕೆ ಮಾಡುವುದು ಅಂತಾಗಿದೆ. ನಾನೂ ಸರ್ಕಾರಿ ಸ್ಕೂಲ್ ಟೀಚರೇ. ನಮ್ಮನ್ನು ಸರ್ಕಾರ ಹೆಂಗೆ ದುಡಿಸ್ಕೋತಿದೆ ಗೊತ್ತಾ? ಕೋಳಿ-ಕುರಿಗಳ ಲೆಕ್ಕ ಬರಿಯೋಕೂ ನಾವೇ, ಓಟ್ ಲಿಸ್ಟ್ ಮಾಡಕ್ಕೂ ನಾವೇ. ನನ್ನದು ನೋಡಿ, ದಾವಣಗೆರೆ; ನನ್ನನ್ನು ಇಲ್ಲಿಗೆ ಮುನ್ನೂರು ಕಿಲೋಮೀಟರ್ ದೂರಕ್ಕೆ ವರ್ಗ ಮಾಡಿದ್ದಾರೆ. ನನ್ನ ಗಂಡ ವ್ಯವಸಾಯ ಮಾಡ್ತಾರೆ. ಎರಡು ಸಣ್ಣ ಮಕ್ಕಳಿದಾವೆ. ಮನೇಲಿ ವಯಸ್ಸಾದ ಅತ್ತೆ-ಮಾವ ಇದಾರೆ. ಇಲ್ಲಿಯವರು ಕೆಲ ಟೀಚರ್ಗಳು ನಮ್ಮೂರಿನ ಕಡೆ ಇದ್ದಾರೆ. ಅವರಿಗೂ ತೊಂದರೆ, ನಮಗೂ ತೊಂದರೆ. ನಾವಿಲ್ಲಿ ದಿನಕ್ಕೊಂದೇ ಬಸ್ ಹೋಗುವ ಗುತ್ತಿ ಅನ್ನೋ ಕುಗ್ರಾಮಕ್ಕೆ ಹೋಗಿ ಪಾಠ ಮಾಡಬೇಕು. ಕೆಲಸ ಮಾಡುವ ಅನುಕೂಲವಿಲ್ಲ; ಕೆಲಸ ಮಾಡದೆ ವಿಧಿಯೂ ಇಲ್ಲ. ನನ್ನ ಸ್ಟಾಪ್ ಬಂತು, ನಾನಿಳೀತೀನಿ,” ಎಂದು ಆ ಇಕ್ಕಟ್ಟಿನ ನಡುವೆಯೇ ನುಗ್ಗಾಡಿಕೊಂಡು ಅಂತೂ ಇಂತೂ ಕೆಳಗಿಳಿದಳು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬರುತ್ತಿದ್ದ ವಾರದ ಮಗುವಿನ ತಾಯಿ, ಈ ಸಖೆ-ಬಿಸಿಗೆ ರಚ್ಚೆ ಹಿಡಿದು ಕಿರುಚಾಡುತ್ತಾ ಸಂಕಟಪಡುತ್ತಿದ್ದ ಮಗುವನ್ನು ತನ್ನ ತಾಯಿಗೆ ಕೊಟ್ಟು ಸಮಾಧಾನಿಸಲು ಹೇಳುತ್ತಿದ್ದಳು. ತಾರಕಸ್ವರದಲ್ಲಿ ಅಳುತ್ತಿದ್ದ ಮಗುವಿನತ್ತ ತಿರುಗಿ ಕುಳಿತಲ್ಲಿಂದಲೇ ಕತ್ತು ಎತ್ತಿ ನೋಡಿದ ತೋಟದ ಕರೀಗೌಡರು, “ಮಗೀಗೆ ಉಸಿರು ಕಟ್ಟೋಹಾಗೆ ಸ್ವೆಟರ್, ಮಂಕೀಟೋಪಿ ಹಾಕಿ, ಬಿಗಿಯಾಗಿ ಅವುಚಿಕೊಂಡು ಕೂತ್ರೆ ಆ ಮಗಾ ಬದ್ಕರ್ತದಾ? ಮೊದ್ಲು ಹಾಕಿರೋ ಟೋಪಿ, ಸ್ವೆಟರ್ ತಗ್ದು, ಗಾಳಿಯಾಡಂಗೆ ಮಾಡಿ,” ಎಂದವರೇ, “ಮಕ್ಳು ಹುಟ್ಸುದ್ರೆ ಸಾಕಾಗಲ್ಲ, ಸಾಕೋದನ್ನೂ ಕಲೀಬೇಕು,” ಎಂದು ಮೆತ್ತಗೆ ಅಂದರು.
ಮುಂದುವರಿಯುವುದು…..

