ರಾಮನಾಥಪುರ : ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯಗಳ ನಿರ್ಮಾಣದಿಂದ ಸಮಾಜದಲ್ಲಿ ಸಾಮರಸ್ಯ, ಶಾಂತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳು ವೃದ್ಧಿಯಾಗುತ್ತವೆ ಎಂದು ಮಾಜಿ ಸಚಿವರು ಹಾಗೂ ಅರಕಲಗೂಡು ಕ್ಷೇತ್ರದ ಶಾಸಕ ಎ. ಮಂಜು ಹೇಳಿದರು.
ರಾಮನಾಥಪುರ ಹೋಬಳಿಯ ಗರುಡನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ, ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಭಕ್ತರು ಪ್ರತಿದಿನ ಶ್ರದ್ಧಾ-ಭಕ್ತಿಯಿಂದ ತಮ್ಮ ದಿನಚರಿಯನ್ನು ಆರಂಭಿಸಿದರೆ ಆತ್ಮಸ್ಥೈರ್ಯ ವೃದ್ಧಿಯಾಗುತ್ತದೆ. ನಂಬಿಕೆ, ಭಕ್ತಿ ಹಾಗೂ ಶ್ರದ್ಧೆಯಿಂದ ದೇವರ ಆರಾಧನೆ ಮಾಡಿದರೆ ಮನಸ್ಸಿಗೆ ನೆಮ್ಮದಿ ದೊರೆಯುವುದರ ಜೊತೆಗೆ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಿದರು.
ಭಕ್ತಿಯು ಮನುಷ್ಯನ ಮನಸ್ಸನ್ನು ನಿಯಂತ್ರಿಸುವ ಶಕ್ತಿಯಾಗಿದೆ. ಆಧ್ಯಾತ್ಮಿಕ ಜೀವನವನ್ನು ಅಳವಡಿಸಿಕೊಂಡಾಗ ವ್ಯಕ್ತಿಯ ಜೀವನ ಶುದ್ಧೀಕರಣಗೊಂಡು ಉತ್ತಮ ಮೌಲ್ಯಗಳು ಬೆಳೆಯುತ್ತವೆ ಎಂದು ಎ. ಮಂಜು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು, ದೇವಾಲಯ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
