ರಾಮನಾಥಪುರ – ರಾಜ್ಯಾದ್ಯಂತ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದ್ದು ” ಸದೃಢ ಪ್ರಜಾಪ್ರಭುತ್ವಕ್ಕೆ ಸಂವಿಧಾನ ನೀಡಿರುವ ಮತದಾನ ಎಂಬ ಪವಿತ್ರ ಕಾರ್ಯ ತುಂಬಾ ಅವಶ್ಯ”, ಈ ನಿಟ್ಟಿನಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯ ಅರ್ಹ ಪ್ರಜೆ ತಮ್ಮಗಳ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳಬೇಕೆಂದು ಸಾರ್ವಜನಿಕ ಬಂಧುಗಳಲ್ಲಿ ಜಿಲ್ಲಾ ಅತ್ಯುತ್ತಮ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ಎನ್. ರವಿಕುಮಾರ್ ವಿನಂತಿಸಿದರು.

ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮ ಪಂಚಾಯತಿ ಮತ್ತು ದಿ ಗೌರಮ್ಮ ಪುಟ್ಟಸ್ವಾಮಪ್ಪ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಜಂಟಿಯಾಗಿ ಹಮ್ಮಿಕೊಂಡಿದ್ದ ಎಸ್ ಐ ಆರ್ ಜಾಗೃತಿ ಅಭಿಯಾನದಲ್ಲಿ ಮಾತನಾಡುತ್ತಾ ಹನ್ಯಾಳು ಗ್ರಾಮಸ್ಥರು ತಮ್ಮ ತಮ್ಮ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು ಬಂದಾಗ ಗಣತಿ ನಮೂನೆಗಳನ್ನು ಜುಲೈ 29 ರ ಒಳಗೆ ಭರ್ತಿ ಮಾಡಿಕೊಡುವುದು ಹಾಗೆಯೇ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿ ಇದೆಯೇ, ತಿದ್ದುಪಡಿ ಆಗಬೇಕೆ, ಸೇರ್ಪಡೆ ಆಗಬೇಕೆ ಎಂದು ನೋಡಿಕೊಳ್ಳುವ ಸದವಕಾಶ ನಿಮ್ಮದಾಗಲಿದೆ ಎಂದರು.

ಗ್ರಾಮ ಪಂಚಾಯತಿ ಕಾರ್ಯದರ್ಶಿ ರವಿಕುಮಾರ ಜಿ ಸಿ ಮಾತನಾಡುತ್ತಾ ಎಲ್ಲಾ ಅರ್ಹ ಮತದಾರರು ತಮ್ಮಗಳ ಹೆಸರನ್ನು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳಿ ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೇ ಮತದಾನದ ಕಾರ್ಯದಿಂದ ದೂರವಾಗಿ ಒಂದು ಜವಾಬ್ದಾರಿ ಸರ್ಕಾರ ರಚನೆ ಮಾಡುವ ಅವಕಾಶದಿಂದ ವಂಚಿತರಾಗುತ್ತಿರಿ ಎಂದರು.
ಜಾಗೃತಿ ಅಭಿಯಾನದಲ್ಲಿ ಪ್ರೌಢಶಾಲಾ ಮಕ್ಕಳು ವಿವಿಧ ಘೋಷ ವಾಕ್ಯಗಳನ್ನು ಹೇಳುತ್ತ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದರು. ಅಭಿಯಾನದಲ್ಲಿ ಪಿಡಿಒ ಕೃಷ್ಣೇಗೌಡ, ನಿವೃತ್ತ ಶಿಕ್ಷಕರಾದ ಲಕ್ಕೇಗೌಡ, ಬಿ ಎಲ್ ಒ ನಂದಿನಿ, ಶಾಲಾ ಶಿಕ್ಷಕರಾದ ಗೀತಾ ಡಿ ಹೆಚ್, ಸುಬ್ಬಲಕ್ಷ್ಮಿ ಆರ್, ರಂಗಯ್ಯ, ಮೇಘನಾ, ಕುಮಾರ್, ಗ್ರಾಮ ಪಂಚಾಯತಿ ನೌಕರರಾದ ದಿನೇಶ್, ಹನುಮೇಶ್, ಗ್ರಾಮಸ್ಥರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ. ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
