ಕೊರಟಗೆರೆ:- ತುಮಕೂರು–ರಾಯದುರ್ಗ ರೈಲು ಮಾರ್ಗ ಕಾಮಗಾರಿ 2027ರ ಅಂತ್ಯದೊಳಗೆ ಪೂರ್ಣಗೊಂಡು, ಕೊರಟಗೆರೆ–ಮಧುಗಿರಿ ಮಾರ್ಗವಾಗಿ ಪಾವಗಡದವರೆಗೆ ರೈಲು ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ಪಟ್ಟಣದ ಬೈಪಾಸ್ ರಸ್ತೆಯ ಸಮೀಪ ಶನಿವಾರ ರೈಲ್ವೆ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಸುಮಾರು ₹2,500 ಕೋಟಿ ವೆಚ್ಚದ ತುಮಕೂರು–ರಾಯದುರ್ಗ ರೈಲು ಯೋಜನೆ ಎರಡು ದಶಕಗಳ ಬಳಿಕ ಮತ್ತೆ ವೇಗ ಪಡೆದಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡುವ ಗುರಿ ಹೊಂದಲಾಗಿದೆ’ ಎಂದರು.
ಚಿಕ್ಕಬಳ್ಳಾಪುರ–ಬೈರೇನಹಳ್ಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದ್ದು, ಶಿರಾ–ಬಡವನಹಳ್ಳಿ–ಮಧುಗಿರಿ–ಬೈರೇನಹಳ್ಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೂ ಶೀಘ್ರ ಗುದ್ದಲಿಪೂಜೆ ನಡೆಯಲಿದೆ. ದಾಬಸ್ಪೇಟೆ–ಕೊರಟಗೆರೆ–ಮಧುಗಿರಿ–ಪಾವಗಡ ಮಾರ್ಗವಾಗಿ ಕಲ್ಯಾಣದುರ್ಗದವರೆಗೆ ಹೊಸ ರಾಷ್ಟ್ರೀಯ ಹೆದ್ದಾರಿಯ ರೂಪುರೇಷೆ ಸಿದ್ಧಗೊಂಡಿದೆ ಎಂದು ತಿಳಿಸಿದರು.
‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಅಭಿವೃದ್ಧಿ ವೇಗ ಪಡೆಯುತ್ತದೆ. ಈ ಭಾಗದ ಜನರ ಬೆಂಬಲವೇ ಇಂತಹ ಯೋಜನೆಗಳಿಗೆ ಶಕ್ತಿ ನೀಡಿದೆ’ ಎಂದು ಹೇಳಿದರು.
ಜನರಿಲ್ಲದ ಕಾರ್ಯಕ್ರಮಕ್ಕೆ ಅಸಮಾಧಾನ
ಕಾರ್ಯಕ್ರಮ ಆರಂಭವಾದ ವೇಳೆ ವೇದಿಕೆಯ ಎದುರು ಜನಸಂದಣಿ ಕಡಿಮೆ ಇದ್ದುದನ್ನು ಗಮನಿಸಿದ ಸಚಿವ ಸೋಮಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್ ಹಾಗೂ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಮರಾಜು ಅವರಿಗೆ ಕಾರ್ಯಕರ್ತರನ್ನು ಹೆಚ್ಚು ಸಂಘಟಿಸುವಂತೆ ಸೂಚಿಸಿದರು.
‘ಮುಂದಿನ ಉದ್ಘಾಟನೆ ವೇಳೆಗೆ ಸಾವಿರಾರು ಜನರು ಭಾಗವಹಿಸುವಂತೆ ಸಂಘಟನೆ ಬಲಪಡಿಸಿ. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಇನ್ನಷ್ಟು ತಲುಪಿಸಬೇಕು’ ಎಂದು ಹೇಳಿದರು.
ಆಹ್ವಾನವಿಲ್ಲದೇ ಕಾರ್ಯಕ್ರಮ
ರೈಲ್ವೆ ನಿಲ್ದಾಣ ಕಾಮಗಾರಿಯ ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ನೀಡಲಾಗಿಲ್ಲ ಎಂಬ ಆರೋಪ ಕೇಳಿಬಂತು. ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪತ್ರಕರ್ತರಿಗೆ ಅಧಿಕೃತ ಆಹ್ವಾನ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ತಹಶೀಲ್ದಾರ್ ಮಂಜುನಾಥ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಅಪೂರ್ವ ಸೇರಿದಂತೆ ಕೆಲವು ಅಧಿಕಾರಿಗಳು ವೇದಿಕೆ ಹೊರಗಡೆಯೇ ಕಾರ್ಯಕ್ರಮ ವೀಕ್ಷಿಸುವಂತಾಯಿತು.
ರೈಲ್ವೆ ಅಧಿಕಾರಿಗಳ ಸ್ಪಷ್ಟನೆ
ಕಾರ್ಯಕ್ರಮದ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ರೈಲ್ವೆ ಅಧಿಕಾರಿಗಳು, ‘ಇದು ಸಚಿವರ ಸೂಚನೆಯಂತೆ ಆಯೋಜಿಸಲಾದ ಕಾರ್ಯಕ್ರಮ. ಅಗತ್ಯ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿಕೊಂಡಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಐಎಎಸ್ ಅಧಿಕಾರಿ ಅನಿಲ್ಕುಮಾರ್, ಜಿಲ್ಲಾ ಕಾರ್ಯದರ್ಶಿ ಡಾ. ದರ್ಶನ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಮರಾಜು, ಬಿಜೆಪಿ ಮಾಜಿ ಅಧ್ಯಕ್ಷ ಪವನಕುಮಾರ್, ಮಾಜಿ ತಾಪಂ ಸದಸ್ಯ ಎಲ್.ವಿ. ಪ್ರಕಾಶ್ ಹಾಗೂ ಇತರರು ಉಪಸ್ಥಿತರಿದ್ದರು.
“ಅಹಂಕಾರದ ಪರಮಾವಧಿ”
‘ವಿದೇಶ ಹಾಗೂ ಇತರ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿದವರು ನಮ್ಮ ರಾಜ್ಯದಲ್ಲೇ ಅಧಿಕಾರ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲೂ ಇದೇ ನಡೆಯುತ್ತಿತ್ತು. ದೇಶವನ್ನು 50 ವರ್ಷ ಆಡಿದವರು ಏನು ಮಾಡಿದ್ದಾರೆ? ಇದು ಅಹಂಕಾರದ ಪರಮಾವಧಿ ಅಲ್ಲದೆ ಮತ್ತೇನು,’ ಎಂದು ಶಾಶ್ವತ ನಿವಾಸಿ ಪ್ರಮಾಣಪತ್ರ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸಚಿವ ವಿ. ಸೋಮಣ್ಣ ಪ್ರತಿಕ್ರಿಯಿಸಿದರು.
– ಶ್ರೀನಿವಾಸ್ ಕೊರಟಗೆರೆ.
