ಬೀಜಿಂಗ್ನಿಂದ ಸುಮಾರು ಒಂದೂವರೆ ಗಂಟೆಗಳ ಬಸ್ ಪ್ರಯಾಣದ ಬಳಿಕ ನಾವು ಹೆಬೇ (Hebei) ಪ್ರಾಂತ್ಯದಲ್ಲಿರುವ ವಿಶ್ವವಿಖ್ಯಾತ ಗ್ರೇಟ್ ವಾಲ್ ಆಫ್ ಚೈನಾ ತಲುಪಿದೆವು. ಮಾನವ ನಿರ್ಮಿತ ಈ ಬೃಹತ್ ಗೋಡೆ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದ್ದು, ಚೀನಾದ ಇತಿಹಾಸದ ಹೆಮ್ಮೆಯ ಸಂಕೇತವಾಗಿದೆ.

ಸುಮಾರು ಇಪ್ಪತ್ತು ಸಾವಿರ ಕಿಲೋಮೀಟರ್ ಉದ್ದ ಹೊಂದಿದ್ದ ಈ ಕೋಟೆಯ ಗೋಡೆಯ ಪೈಕಿ ಇಂದು ಸುಮಾರು ಎಂಟು ಸಾವಿರ ಕಿಲೋಮೀಟರ್ ಮಾತ್ರ ಉಳಿದಿದೆ. ಉಳಿದ ಭಾಗಗಳು ಕಾಲಗರ್ಭದಲ್ಲಿ ಪ್ರಕೃತಿಯ ಪ್ರಭಾವದಿಂದ ನಾಶವಾಗಿವೆ. ಅವುಗಳಲ್ಲಿ ಸುಮಾರು ಆರುನೂರು ಕಿಲೋಮೀಟರ್ ಭಾಗವನ್ನು ಅತ್ಯಂತ ಅಚ್ಚುಕಟ್ಟಾಗಿ ಸಂರಕ್ಷಿಸಲಾಗಿದೆ. ಈ ಐತಿಹಾಸಿಕ ತಾಣವು ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಗುಡ್ಡ-ಕಂದಕಗಳನ್ನು ದಾಟುತ್ತಾ ಸಾಗುವ ಈ ಗೋಡೆ ಏರಿಳಿತಗಳಿಂದ ಕೂಡಿದೆ. ನಾನು ಮತ್ತು ಶ್ರೀಮತಿ ಸುಮಾರು ಐನೂರು ಮೆಟ್ಟಿಲುಗಳನ್ನು ಹತ್ತಿದೆವು. ಎತ್ತರದ ಹಾಗೂ ಕಡಿದಾದ ಮೆಟ್ಟಿಲುಗಳನ್ನು ಏರುವುದು ನಿಜಕ್ಕೂ ಸಾಹಸವೇ ಸರಿ. ಪ್ರತಿ ಮುನ್ನೂರು ಅಡಿಗೊಮ್ಮೆ ಕಾವಲು ಗೋಪುರ (Watch Tower) ನಿರ್ಮಿಸಲಾಗಿದ್ದು, ದೂರದಿಂದಲೇ ಶತ್ರುಗಳ ಚಲನವಲನವನ್ನು ಗಮನಿಸುವ ವ್ಯವಸ್ಥೆ ಮಾಡಲಾಗಿತ್ತು.

ಈ ಗೋಡೆಯ ನಿರ್ಮಾಣದ ಉದ್ದೇಶ ಮಂಗೋಲಿಯಾದ ದಾಳಿಕೋರ ಬುಡಕಟ್ಟು ಜನಾಂಗಗಳ ಆಕ್ರಮಣವನ್ನು ತಡೆಯುವುದಾಗಿತ್ತು. ಕ್ರಿ.ಪೂ. 220ರಿಂದ ಕ್ರಿ.ಶ. 1600ರವರೆಗೆ ವಿವಿಧ ರಾಜವಂಶಗಳು ತಮ್ಮ ಆಡಳಿತಾವಧಿಯಲ್ಲಿ ಈ ಕೋಟೆಯನ್ನು ವಿಸ್ತರಿಸುತ್ತಾ ಬಂದಿದ್ದು, ಸುಮಾರು ಎರಡು ಸಾವಿರ ವರ್ಷಗಳ ಕಾಲ ಇದರ ನಿರ್ಮಾಣ ಕಾರ್ಯ ನಡೆದಿರುವುದು ಇತಿಹಾಸದ ವಿಶಿಷ್ಟ ಸಂಗತಿಯಾಗಿದೆ. ಗೋಡೆಯ ಮೇಲ್ಭಾಗದಲ್ಲಿ ಜನರು ಸುಲಭವಾಗಿ ನಡೆದು ಹೋಗಬಹುದಾದ ಅಗಲವಾದ ದಾರಿಯನ್ನು ನಿರ್ಮಿಸಿರುವುದು ಅದರ ಮತ್ತೊಂದು ವಿಶೇಷತೆ.

ಅನಂತರ ನಾವು ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಮತ್ತೊಂದು ಪ್ರಸಿದ್ಧ ತಾಣವಾದ ಟೆಂಪಲ್ ಆಫ್ ಹೆವನ್ (Temple of Heaven) ಅಥವಾ ಹಾರ್ವೆಸ್ಟ್ ದೇವಾಲಯಕ್ಕೆ ಭೇಟಿ ನೀಡಿದೆವು. ಇದು ಚೀನೀಯರ ಆಧ್ಯಾತ್ಮಿಕ ನಂಬಿಕೆಯ ಪ್ರಮುಖ ಕೇಂದ್ರವಾಗಿದೆ. ದೇವಾಲಯದ ಒಳಭಾಗಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.
ಈ ದೇವಾಲಯದ ವಾಸ್ತುಶಿಲ್ಪ ವಿಶಿಷ್ಟವಾಗಿದೆ. ಸಂಪೂರ್ಣ ಮರದಿಂದ, ಅಡಿಪಾಯವಿಲ್ಲದೆ, ಬೃಹತ್ ಮರದ ಕಂಬಗಳ ಆಧಾರದ ಮೇಲೆ ನಿರ್ಮಿಸಿರುವುದು ಅಚ್ಚರಿಯ ಸಂಗತಿ. ನೆಲಮಹಡಿಯ ನಾಲ್ಕು ಬೃಹತ್ ಕಂಬಗಳು ನಾಲ್ಕು ಋತುಗಳನ್ನು ಸಂಕೇತಿಸುತ್ತವೆ. ಮೊದಲ ಮಹಡಿಯ ಹನ್ನೆರಡು ಒಳಕಂಬಗಳು ಮತ್ತು ಹನ್ನೆರಡು ಹೊರಕಂಬಗಳು ವರ್ಷದ ಹನ್ನೆರಡು ತಿಂಗಳು ಹಾಗೂ ದಿನದ ಹನ್ನೆರಡು ಕಾಲಘಟ್ಟಗಳನ್ನು ಪ್ರತಿನಿಧಿಸುತ್ತವೆ. ಮೇಲಿನ ಮಹಡಿಯ ಹದಿನಾರು ಕಂಬಗಳು ನೀಲಿ ಬಣ್ಣದ ಗೋಪುರವನ್ನು ಭದ್ರವಾಗಿ ಹಿಡಿದಿವೆ. ನೀಲಿ ಬಣ್ಣವು ಸ್ವರ್ಗದ ಸಂಕೇತವಾಗಿದ್ದು, ದೇವಾಲಯದ ಮೇಲ್ಛಾವಣಿ ಆಕಾಶದೊಂದಿಗೆ ಒಂದಾಗುತ್ತದೆ ಎಂಬುದು ಅಲ್ಲಿನ ಜನರ ನಂಬಿಕೆ.
ಮಿಂಗ್ ರಾಜವಂಶದ ಚಕ್ರವರ್ತಿ ಯೋಂಗ್ಲೆ (Yongle) ಕ್ರಿ.ಶ. 1420ರಲ್ಲಿ ಈ ದೇವಾಲಯವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ಇಂದಿಗೂ ರೈತರು ಉತ್ತಮ ಬೆಳೆ ಹಾಗೂ ಸಮೃದ್ಧ ಕೊಯ್ಲಿಗಾಗಿ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ.
ಜಪಾನ್ ಪ್ರವಾಸದ ವೇಳೆ ಅಲ್ಲಿನ ಒಲಿಂಪಿಕ್ ಕ್ರೀಡಾಂಗಣವನ್ನು ನೋಡಿದ್ದೆವು. ಆದರೆ ಬೀಜಿಂಗ್ ಒಲಿಂಪಿಕ್ ಕ್ರೀಡಾಂಗಣದ ವಿನ್ಯಾಸ ನನಗೆ ಹೆಚ್ಚು ಆಕರ್ಷಕವಾಗಿ ಕಂಡಿತು. ಕಬ್ಬಿಣದ ಜಾಲರಿಯಂತೆ ನಿರ್ಮಿಸಿರುವ ಈ ಕ್ರೀಡಾಂಗಣವನ್ನು ಬರ್ಡ್ಸ್ ನೆಸ್ಟ್ (Bird’s Nest) ಎಂದು ಕರೆಯುತ್ತಾರೆ.
ಅದನ್ನು ನೋಡುತ್ತಿದ್ದಂತೆಯೇ ನನಗೆ ವೈದ್ಯಕೀಯ ವಿದ್ಯಾಭ್ಯಾಸ ಮಾಡಿದ ಬಳ್ಳಾರಿ ನೆನಪಾಯಿತು. ಬಳ್ಳಾರಿಯ ಕಬ್ಬಿಣದ ಅದಿರು ಸಾವಿರಾರು ಕಿಲೋಮೀಟರ್ ದೂರದ ಬೀಜಿಂಗ್ನಲ್ಲಿ ಬರ್ಡ್ಸ್ ನೆಸ್ಟ್ ರೂಪದಲ್ಲಿ ನಿಂತಿರುವುದು ವಿಚಿತ್ರವಾದರೂ ಸತ್ಯ.
ಇದರ ಪಕ್ಕದಲ್ಲೇ ಇರುವ ಐಸ್ ಕ್ಯೂಬ್ (Ice Cube) ಒಳಾಂಗಣ ಜಲಕ್ರೀಡಾ ಸಂಕೀರ್ಣವೂ ತನ್ನ ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಈ ಸಮುಚ್ಚಯದ ಒಳಗೆ ಪ್ರವಾಸಿಗರಿಗೆ ಪ್ರವೇಶವಿಲ್ಲ. ಹೊರಗಿನಿಂದಲೇ ಅದರ ಸೌಂದರ್ಯವನ್ನು ಸವಿದು ಛಾಯಾಚಿತ್ರಗಳನ್ನು ತೆಗೆಯಬಹುದು.
ಮಂಗೋಲಿಯಾ ಪ್ರವಾಸದ ವೇಳೆ ಆಮೆಯಾಕಾರದ ಬೃಹತ್ ಶಿಲೆಯನ್ನು ನೋಡಿದ್ದೆವು. ಅದನ್ನು ದರ್ಶನ ಮಾಡಿದರೆ ಆಯುಷ್ಯ ವೃದ್ಧಿಯಾಗುತ್ತದೆ ಎಂಬುದು ಅಲ್ಲಿನ ಬೌದ್ಧರ ನಂಬಿಕೆ.
ಅದೇ ರೀತಿಯಲ್ಲಿ, ಬೀಜಿಂಗ್ನಿಂದ ಸುಮಾರು ಎರಡು ಸಾವಿರ ಕಿಲೋಮೀಟರ್ ದೂರದಲ್ಲಿರುವ ಗಿಲಿನ್ (Guilin) ನಗರದಲ್ಲಿರುವ ಎಲಿಫೆಂಟ್ ಟ್ರಂಕ್ ಹಿಲ್ (Elephant Trunk Hill) ಪ್ರಕೃತಿಯ ಅದ್ಭುತ ಕಲಾಕೃತಿಯಾಗಿದೆ. ಬೆಟ್ಟದ ಒಂದು ಭಾಗ ಆನೆಯ ಸೊಂಡಿಲಿನಂತೆ ಲೀ (Li) ನದಿಗೆ ತಾಗಿ ನೀರು ಕುಡಿಯುತ್ತಿರುವಂತೆ ಕಾಣುತ್ತದೆ. ಸೊಂಡಿಲಿನ ಮಧ್ಯಭಾಗದಲ್ಲಿ ರೂಪುಗೊಂಡಿರುವ ಕಮಾನು ಆಕಾರದ ಜಾಗದಲ್ಲಿ ಹುಣ್ಣಿಮೆ ರಾತ್ರಿ ಚಂದ್ರನ ಪ್ರತಿಬಿಂಬ ಕಾಣಿಸುತ್ತದೆ. ಈ ಮನಮೋಹಕ ದೃಶ್ಯವನ್ನು “ಮೂನ್ ಆನ್ ದ ವಾಟರ್” ಎಂದು ಕರೆಯುತ್ತಾರೆ.
ಸುಣ್ಣದ ಕಲ್ಲು (Limestone) ಹಾಗೂ ಕ್ಯಾಲ್ಸಿಯಂ ಕಾರ್ಬೋನೇಟ್ನಿಂದ ರೂಪುಗೊಂಡಿರುವ ಈ ಪ್ರದೇಶದಲ್ಲಿ ಸಾವಿರಾರು ವರ್ಷಗಳ ಭೌಗೋಳಿಕ ಬದಲಾವಣೆಗಳಿಂದ ಕಾರ್ಸ್ಟ್ (Karst) ಶಿಲಾರಚನೆಗಳು ಉಂಟಾಗಿವೆ. ಮಳೆನೀರು ಮತ್ತು ಕಾರ್ಬನ್ ಡೈಆಕ್ಸೈಡ್ ಸೇರಿ ರೂಪುಗೊಂಡ ದುರ್ಬಲ ಆಮ್ಲವು ಸುಣ್ಣದ ಕಲ್ಲನ್ನು ಕರಗಿಸುತ್ತಾ ಗುಹೆಗಳು, ಕಮಾನುಗಳು ಮತ್ತು ವಿಭಿನ್ನ ಆಕಾರದ ಬೆಟ್ಟಗಳನ್ನು ಸೃಷ್ಟಿಸಿದೆ. ಎಲಿಫೆಂಟ್ ಟ್ರಂಕ್ ಹಿಲ್ ಕೂಡ ಇದೇ ನೈಸರ್ಗಿಕ ಪ್ರಕ್ರಿಯೆಯ ಫಲವಾಗಿದೆ.
ಹೀಗೆ ಚೀನಾ ಪ್ರವಾಸದಲ್ಲಿ ಮಾನವ ನಿರ್ಮಿತ ಅದ್ಭುತಗಳ ಜೊತೆಗೆ ಪ್ರಕೃತಿಯ ಅಸಾಧಾರಣ ಕಲಾಕೃತಿಗಳನ್ನೂ ಕಣ್ತುಂಬಿಕೊಂಡ ಅನುಭವ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಿತು.
(ಮುಂದುವರಿಯುವುದು…)
