ಅವತ್ತು ದೆಬ್ರಳ್ಳಿ ಊರೊಟ್ಟಿನ ಚೌಡಿ ಹಬ್ಬ. ಕಾಡುಕಣದ ಪಕ್ಕದ ಕಾಫಿತೋಟದ ಒಳಗಿನ ಹಲಸಿನಮರದ ಬುಡದಲ್ಲಿ ಪೂಜಿಸಲಾಗುವ ದೇವರಕಲ್ಲಿಗೆ ಹಂದಿ ಬಲಿಕೊಟ್ಟು, ದೇವರಿಗೆ ನೈವೇದ್ಯ ಮಾಡಿ, ಊರೆಲ್ಲರಿಗೂ ಬಾಡಿನೂಟ ಹಾಕುವ ಸಡಗರದ ಸಂಭ್ರಮ.
ಹಲಸಿನಮರದ ಬುಡದ ಪೂರ್ವಭಾಗದಲ್ಲಿ ಮೂರಡಿ ಉದ್ದ, ಮೂರಡಿ ಅಗಲದ ಚಿಕ್ಕ ಚಪ್ಪರವನ್ನು ಹಾಕಿ, ಮೂರು ಸುತ್ತಲೂ ಬೈನೇಉಲಿಯ ಎಲೆಗಳನ್ನು ಗೋಡೆಯಂತೆ ಕಟ್ಟಲಾಗಿತ್ತು. ದೇವರಕಲ್ಲಿನ ಎದುರಿನಲ್ಲಿ ಹಾಲುವಾಣ ಮರದ ಗೆಲ್ಲಿನಿಂದ ‘+’ ಆಕಾರದ ಆಕೃತಿಯೊಂದನ್ನು ರಚಿಸಿ, ಅದರ ಬುಡದಲ್ಲಿ ಬಾಳೆಲೆಯೊಂದನ್ನು ಹಾಸಿ, ಸ್ವಲ್ಪ ಅಕ್ಕಿ ಹರಡಿ, ಆ ಆಕಾರಕ್ಕೆ ಅರಸಿನ-ಕುಂಕುಮ ಹಚ್ಚಲಾಗಿತ್ತು. ಕಾಲುಕಟ್ಟಿದ ಹಂದಿಯನ್ನು ದೈಹಿಕವಾಗಿ ಬಲವಾಗಿದ್ದ ಮೂರ್ನಾಲ್ಕು ಜನ ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಊರಿಗೆ ಊರೇ ದಿಗಿಲುಗೊಳ್ಳುವಂತೆ ಅರಚುತ್ತಿದ್ದ ಹಂದಿಯ ಬಾಯನ್ನು ಬಲವಾದ ಹಗ್ಗದಿಂದ ಬಂಧಿಸಿದ್ದರು.
ಬಲಿಕೊಡುವ ಸಂದರ್ಭದಲ್ಲಿ ಕಾಲಿಗೆ ಮತ್ತು ಬಾಯಿಗೆ ಕಟ್ಟಿದ್ದ ಹಗ್ಗವನ್ನು ಕತ್ತಿಯಿಂದ ಕೊಯ್ದು, ಕಟ್ಟನ್ನು ಸಡಿಲಗೊಳಿಸಿ, ಹಂದಿಯ ಕುತ್ತಿಗೆಯ ಭಾಗ ಬಾಳೆಲೆಯ ಮೇಲೆ ಬರುವಂತೆ ಹಿಡಿದುಕೊಳ್ಳಲು ನಾರಾಯಣ, ಜಗದೀಶ, ಮಂಜುನಾಥ ಮತ್ತು ಸಣ್ಣೇಗೌಡ ಸಿದ್ಧರಾದರು. ಕುತ್ತಿಗೆ ಕತ್ತರಿಸಿದಾಗ ಹೊರಚೆಲ್ಲುವ ರಕ್ತ ಆ ‘+’ ಆಕಾರದ ಮೇಲೆ ಸಿಂಚನವಾಗುವಂತೆ ಹಿಡಿದುಕೊಳ್ಳುವುದು ಅವರ ಕೆಲಸವಾಗಿತ್ತು.
ಬೆಳಗಿನಿಂದಲೂ ಮಡಿಯಿದ್ದು, ಆಹಾರ ಸೇವಿಸದೆ ‘ಹಸ್ಕೊಂಡಿದ್ದ’ ಬೆಳ್ಳಾಚಾರಿ ಬಾಯಿಗೆ ಬಟ್ಟೆ ಕಟ್ಟಿಕೊಂಡು, ಹರಿತವಾದ ಕತ್ತಿಯಿಂದ ಹಂದಿಯ ಕುತ್ತಿಗೆಯನ್ನು ಚರಚರನೆ ಕೊಯ್ದು ಬಲಿಕೊಡುವ ಶಾಸ್ತ್ರವನ್ನು ಪೂರೈಸಿದ.
ಕುಕ್ಕರನೆ ಕುಳಿತುಕೊಂಡು ಹಂದಿಯ ಬಾಯನ್ನು ಎರಡೂ ಅಂಗೈಗಳ ನಡುವೆ ಸೇರಿಸಿಕೊಂಡು ಹಿಸುಕಿ ಹಿಡಿದಿದ್ದ ನಾರಾಯಣನ ಉಟ್ಟಿದ್ದ ಲುಂಗಿ ಅದ್ಹೇಗೋ ಸಡಿಲವಾಗಿ ಬಿಚ್ಚಿಕೊಂಡಿತು. ಕುಳಿತವನಿಗೆ ಎದ್ದು ನಿಲ್ಲಲು ಸರಿಯಾದ ಬ್ಯಾಲೆನ್ಸ್ ಸಿಗದೆ, ಹಂದಿಯ ಮೂತಿ ಹಿಡಿದಿದ್ದ ಕೈಯನ್ನು ನೆಲಕ್ಕೂ ಊರಲಾಗದೆ, ಮೊಣಕೈಯನ್ನೇ ನೆಲಕ್ಕೆ ಕೊಟ್ಟು ನಿಲ್ಲಲು ತಡಬಡಾಯಿಸಿದ. ಹಂಗೂ ಹಿಂಗೂ ಮಾಡಿ ಎದ್ದವನ ಕಾಲಿನ ಸುತ್ತ ಉಟ್ಟಿದ್ದ ಲುಂಗಿ ಸಿಂಬಿ ಸುತ್ತಿದಂತೆ ಬಿದ್ದು, ನಾಲ್ಕಾರು ತೂತಾಗಿದ್ದ ಹಳೆಯ ಪೂಂಬುಕಾರ್ ಚಡ್ಡಿಯೇ ಅವನಿಗೆ ಅಂತಿಮ ಆಸರೆಯಾಯಿತು.
ಪ್ರತಿ ಚೌಡಿ ಹಬ್ಬದಲ್ಲೂ ಯಾವುದಾದರೂ ಕಾರಣಕ್ಕೆ ಜಗಳ ತೆಗೆದು ಕಿತಾಪತಿ ಮಾಡುತ್ತಿದ್ದ ಉಮಾಪತಿ ಸುಮ್ಮನಿರಲಾರದೆ,
“ಯಂತಾ ಶಾಟುದ್ ಲುಂಗಿ ಕಟ್ತೀರಿ ಮಾರಾಯ!” ಎಂದ.
ಬೆಳಿಗ್ಗೆಯಿಂದಲೂ ಚೌಡಿಬನದ ಅಂಗಳವನ್ನು ಹೆರೆದು ಅಚ್ಚುಕಟ್ಟುಗೊಳಿಸಿ, ಪಕ್ಕದ ಬೀಜುವಳ್ಳಿಯ ಯಲ್ಲಪ್ಪನ ಹಂದಿ ಫಾರ್ಮಿನಿಂದ ಹಂದಿಯನ್ನು ತರಲು ಹೋಗಿದ್ದ ನಾರಾಯಣನಿಗೆ ಉಮಾಪತಿಯ ಮಾತು ಕೇಳಿ ರೇಗಿಹೋಯಿತು. ಹಂದಿ ಕುಯ್ಯಲು ಕುಳಿತಾಗ ಅವನ ಅಂಡರ್ವೇರ್ ಜೇಬಿನಲ್ಲಿದ್ದ ಬೀಡಿಯ ಕಟ್ಟು ಬೇರೆ ಪಜ್ಜಿಯಾಗಿ, ಬೀಡಿಗಳೆಲ್ಲ ಮುರಿದುಹೋಗಿದ್ದವು.
“ನನ್ಮಕ್ಳಾ, ನೀವು ಅಣ್ತಮ್ದುರು ಬರೀ ಯಜ್ಮಾನ್ಕೆ ಕಿಸಿಯಕ್ಕೆ ಬರ್ಬೇಡಿ. ಮುಕ್ಳಿ ಬಗ್ಸಿ ಊರೊಟ್ಟಿನ ಕೆಲ್ಸ ಮಾಡಿ!” ಎಂದ.
ಇಸ್ಪೀಟಾಟ, ಮಾಂಸದೂಟ ಎಂದು ಸುಮಾರಾಗಿ ಕಳ್ಳಭಟ್ಟಿಯನ್ನು ಏರಿಸಿಕೊಂಡೇ ಬಂದಿದ್ದ ಉಮಾಪತಿಗೆ ಅಪಮಾನವಾದಂತಾಗಿ,
“ನಿನ್ನವ್ವನ್, ಊರೊಟ್ಟಿನ ಚೌಡಿ ಎಂದ್ರೆ ನಿನ್ನಪ್ಪನ್ದಾ?” ಎಂದು ಕೂಗಿದವನೇ, ಬಡಿದಾಡಲು ಪಕ್ಕದಲ್ಲಿದ್ದ ಹಾಲುವಾಣ ಗೂಟವನ್ನು ಕಿತ್ತುಕೊಳ್ಳಲು ಅಣಿಯಾದ.
ಇತ್ತ ನಾರಾಯಣ ಅಡುಗೆ ಒಲೆಗೆ ಹಾಕಲು ತಂದಿದ್ದ ಸೌದೆಯಲ್ಲಿದ್ದ ಗಟ್ಟಿಯಾದ ದಡಿಯನ್ನೇ ಹಿಡಿದು ನಿಂತ.
ಅಷ್ಟರಲ್ಲಿ ಬೆಳ್ಳಾಚಾರಿ, “ನೀವು ಹಿಂಗೆ ಹೊಡೆದಾಡದಾದ್ರೆ ಈ ಚೌಡಿ ಮಾರಿನೆಲ್ಲ ಯಾಕೆ ಮಾಡ್ತೀರಿ? ನಮ್ಮನ್ನೂ ಬೆಳಗಿನಿಂದ ಉಪಾಸ ಕೆಡಗಿ, ಮುಂದಿನ ವರ್ಷದಿಂದ ನಾನು ಈ ಚೌಡಿ ಪೂಜಕ್ಕೇ ಬರಲ್ಲ! ಓ ನಾಗೇಸಣ್ಣ, ಪ್ರಕಾಸಣ್ಣ, ಬನ್ನಿ ಬನ್ನಿ; ಹೊಡ್ದಾಟ ಬಿಡ್ಸಿ!” ಎಂದು ಬಾಯಿಮಾಡಲು ಶುರು ಮಾಡಿದ.
ನಾಲ್ಕಾರು ಜನ ಬಂದು ಉಮಾಪತಿಗೆ ಉಗಿದು, “ನೋಡಾ ಮಾರಾಯ, ಊರೊಟ್ಟಿನ ಚೌಡಿಗೆ ಬಂದೀಯ, ಉಂಡ್ಕಂಡ್ ಹೋಗ್ಬೇಕಷ್ಟೆ. ಅವ ಲುಂಗಿನಾದ್ರೂ ಉಡ್ಲಿ, ಇಲ್ಲಾ ಹಂಗೇನಾದ್ರೂ ಇರ್ಲಿ, ಅದು ನಿಂಗೆ ಬೇಡ. ಮುಂದಿನ ವರ್ಷ ಊರೊಟ್ಟಿನ ಕೆಲ್ಸ ನಿಮ್ ಪಾಲಿಂದು ತಾನೇ? ಆಗ ನೀನ್ಹೇಗೆ ಮಾಡ್ತೀಯ ನೋಡನಂತೆ!” ಎಂದು ಗದರಿಸಿದರು.
ಪ್ರಳಯಾಂತಕ ಕಿತಾಪತಿಯಾದ ಈ ಉಮಾಪತಿ, ತನ್ನ ಪರವಾಗಿ ಯಾರೂ ಮಾತನಾಡದ್ದನ್ನು ಕಂಡು ಸುಮ್ಮನಾದರೂ ಗುರುಗುರು ಎನ್ನುತ್ತಲೇ ಇದ್ದ.
ಎಂಟು-ಹತ್ತು ಜನ ಸೇರಿ ಹಂದಿಯನ್ನು ಸ್ವಚ್ಛಗೊಳಿಸಿ, ಸುಟ್ಟು, ಹೆರೆದು, ಬಾಳೆಲೆಯ ಹಂಪು ಹಾಕಿ, ಅಡುಗೆಗೆ ಮಾಂಸವನ್ನು ಸಿದ್ಧಪಡಿಸಿದರು. ಹಂದಿಯ ಈರಿಯನ್ನು ತೆಳುವಾದ ಹಸಿಕೋಲೊಂದಕ್ಕೆ ಪೋಣಿಸಿ, ಉಪ್ಪು ಸವರಿ ಸುಟ್ಟು, ಆ ಕೋಲನ್ನು ಚಪ್ಪರದ ಎರಡೂ ಬದಿಯ ನೆಲಕ್ಕೆ ಚುಚ್ಚಲಾಯಿತು. ಹಸಿ ಕೋಲಿಗೆ ಎಣ್ಣೆಯಲ್ಲಿ ನೆನೆಸಿದ ಹತ್ತಿಯ ಮಡಿಬಟ್ಟೆಯನ್ನು ಸುತ್ತಿ, ಅದನ್ನು ದೀಪದಂತೆ ಉರಿಸಲಾಯಿತು.
ದೇವರಿಗೆ ನೈವೇದ್ಯ ಮಾಡಲು ಖಾರ ಹಾಕದೆ, ಬರೀ ಉಪ್ಪು ಮತ್ತು ಅರಸಿನಪುಡಿ ಹಾಕಿ ಮಾಂಸವನ್ನು ಬೇಯಿಸಲಾಯಿತು. ನಂತರ ಬಿಸಿಬಿಸಿ ಕೆಂಪಕ್ಕಿಯ ಅನ್ನದ ಜೊತೆ ದೇವರಿಗೆ ಅರ್ಪಿಸಲಾಯಿತು.
ಬರೀ ಉಪ್ಪು ಮತ್ತು ಅರಸಿನದೊಂದಿಗೆ ಬೇಯಿಸಿದ್ದ ಮಾಂಸಕ್ಕೆ ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೆಂಪುಮೆಣಸಿನಪುಡಿ, ಕಾಳುಮೆಣಸಿನಪುಡಿ ಹಾಗೂ ಹುರಿದ ಧನಿಯಾಪುಡಿಯನ್ನು ಬೆರೆಸಿ, ಒಂದಷ್ಟು ಹೊತ್ತು ಬೇಯಿಸಿ, ಊರ ಜನರಿಗೆ ಬಡಿಸಲು ಅಣಿಮಾಡಲಾಯಿತು.
ಕಾಫಿತೋಟದ ಮಧ್ಯದ ರಸ್ತೆಯ ಎರಡೂ ಬದಿಗಳಲ್ಲಿ ಎದುರುಬದುರಾಗಿ ಸಾಲಿನಲ್ಲಿ ಕುಳಿತಿದ್ದ ಊರಜನರಿಗೆ ಚೌಡಿ ಹಬ್ಬದ ಭೋಜನವನ್ನು ಬಡಿಸುತ್ತಿದ್ದರು. ಹಂದಿ ಉಪ್ಸಾರು, ಕೋಳಿ ಉಪ್ಸಾರು, ಮಸಾಲೆ ಮಿಶ್ರಣದ ಹಂದಿ ಹುರಿತೊಂಡು ಹೀಗೆ ಬಗೆಬಗೆಯ ಖಾದ್ಯಗಳು ಸಿದ್ಧವಾಗಿದ್ದವು. ನೂರಾರು ಜನ ಸೇರಿದ್ದರಿಂದ ಎಲ್ಲರಿಗೂ ಒಂದೇ ಸಲ ಊಟಕ್ಕೆ ಕೂರಲು ಸ್ಥಳಾವಕಾಶವಿರಲಿಲ್ಲ. ಹೀಗಾಗಿ ಮೂವತ್ತು-ಮೂವತ್ತು ಜನರಂತೆ ಎರಡು ಹಂತಗಳಲ್ಲಿ ಊಟ ನಡೆಯಿತು.
ಅಷ್ಟರಲ್ಲಿ ಕಾಫಿರೂಟಿನ ಬದಿಯಲ್ಲಿ ಇಸ್ಪೀಟಾಡುತ್ತಿದ್ದವರ ಗುಂಪಿನಿಂದ ಯಾರೋ ಎರಡಡಿ ಉದ್ದದ ಸೌದೆಯ ಕೋಲೊಂದನ್ನು ಊಟ ಮುಗಿಸಿ ಕೈತೊಳೆಯುತ್ತಿದ್ದವರ ಗುಂಪಿನತ್ತ ಎಸೆದರು. ಇಸ್ಪೀಟಿನಲ್ಲಿ ದುಡ್ಡು ಕಳೆದುಕೊಂಡ ಹತಾಶೆಗೋ, ಊಟ ತಡವಾಗುತ್ತಿದೆ ಎಂಬ ಸಿಟ್ಟಿಗೋ, ಜಗಳ ಹತ್ತಿಸಿ ತಮಾಷೆ ನೋಡುವ ತೆವಲಿಗೋ—ಯಾವುದೋ ಕಾರಣಕ್ಕೆ ಎಸೆದ ಆ ಕೋಲು ಗುರಿ ತಪ್ಪಿ ದಿಕ್ಕಾಪಾಲಾಯಿತು. ಬೇಲಿಯ ಪಕ್ಕದ ಪನ್ನೇರಲೆ ಮರದಲ್ಲಿದ್ದ ಬ್ಯಾಣದ ಕೊಟ್ಟೆಗೆ ಬಡಿದು, ಅರ್ಧ ಕೊಟ್ಟೆಯನ್ನೇ ಹರಿದುಹಾಕಿದ್ದಲ್ಲದೆ, ರಸ್ತೆ ಪಕ್ಕದಲ್ಲಿ ಮಾತನಾಡುತ್ತಾ ನಿಂತಿದ್ದವರ ಮುಸುಡಿಗೇ ಹೋಗಿ ಬಡಿಯಿತು.
“ಯಾವನ್ರಲ ಅವ್ನು, …..”
ಕೋಲಿನ ಪೆಟ್ಟು ತಿಂದು ಒಡೆದ ತುಟಿಯನ್ನು ಕೈಯಲ್ಲಿ ಒತ್ತಿಕೊಂಡು ತಿರುಗಿ ನೋಡಿದ ಶ್ರೀನಿವಾಸನಿಗೆ, ರ್ರುಮ್ ರ್ರುಮ್ ಎಂದು ಎರಡು ಬ್ಯಾಣಗಳು ಕಣ್ಣಿನ ಹುಬ್ಬಿನ ಮೇಲೊಂದೂ, ಕುತ್ತಿಗೆಯ ಬಳಿಯೊಂದೂ ಬಾರಿಸಿಯೇಬಿಟ್ಟವು.
ಕಾಫಿತೋಟದೊಳಗಿನ ತೊಟ್ಟಿಲು ಗುಂಡಿಯಲ್ಲಿ ಅಡಗಿಸಿಟ್ಟು, ಹಂಚಿಕೊಂಡು ಭಟ್ಟಿಸಾರಾಯಿ ಸೇವಿಸುತ್ತಿದ್ದ ಹತ್ತಾರು ಮಂದಿಯ ಮುಖಮೂತಿ ಎನ್ನದೆ ಬ್ಯಾಣಗಳು ದಾಳಿ ಮಾಡಿದವು.
ಇಸ್ಪೀಟಾಡುತ್ತಿದ್ದ ರಾಜ, ಗುಲಾಮ, ಕಳವಾರ, ಜೋಕರ್ಗಳು ತಮ್ಮ ತಿಕದ ಸುತ್ತ ಸುತ್ತಿಕೊಂಡಿದ್ದ ಲುಂಗಿಯನ್ನು ಬಿಚ್ಚಿಕೊಂಡು, ತಲೆಗೆ ಮುಸುಕು ಹಾಕಿಕೊಂಡು, “ಈ ತೊಂಡೂ ಬೇಡ, ಚೌಡೀನೂ ಬೇಡ!” ಎಂದುಕೊಂಡು ರಾಮ್ನಳ್ಳಿ ಗದ್ದೆ ಹಾರಿ ದಿಕ್ಕಾಪಾಲಾಗಿ ಓಡಿದರು.
ಅಷ್ಟರಲ್ಲಿ ಮಂಜಯ್ಯ ಅಂಡ್ ಗ್ಯಾಂಗ್ ಚೌಡಿ ಹಬ್ಬದ ಕೊನೆಯ ಹಂತಿಯ ಊಟಕ್ಕಾಗಿ ಸೋಡಾ ಬೆನ್ನಣ್ಣನ ಆಟೋದಿಂದ ಕೆಳಗಿಳಿದರು. ಆದರೆ ಬ್ಯಾಣದ ದಾಳಿಗೆ ತಲೆಕೆಟ್ಟವರಂತಾದ ಅವರು, ಹಿಂದಿರುಗಿ ಓಡಿಹೋಗಿ ತಾವು ಬಂದಿದ್ದ ಆಟೋ ಹತ್ತಲು ಮುಂದಾದರು.
ಆ ಗದ್ದಲಮಯ ಗೊಂದಲವನ್ನು ಕಂಡ ಸೋಡಾ ಬೆನ್ನಣ್ಣ, “ಸತ್ತೆನೋ, ಕೆಟ್ಟೆನೋ!” ಎಂದುಕೊಂಡು, ಅಷ್ಟರಲ್ಲಾಗಲೇ ಆಟೋದೊಂದಿಗೆ ಪಂಪ್ಹೌಸ್ ಅಪ್ಪನ್ನು ದಾಟಿಯಾಗಿತ್ತು.

