ಚನ್ನರಾಯಪಟ್ಟಣ : ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮದ ಅಂಗವಾಗಿ ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್ ಮಿನಿ ರಂಗಮಂದಿರದಲ್ಲಿ ಗ್ರಂಥಾಲಯ ಉದ್ಘಾಟನಾ ಸಮಾರಂಭ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಸ್ಯ ಸಾಹಿತಿ ಗೊರೂರು ಅನಂತರಾಜು, “ನಾಡಿನ ಶ್ರೇಷ್ಠ ಕಾದಂಬರಿಕಾರರಾದ ಡಾ. ಎಸ್. ಎಲ್. ಭೈರಪ್ಪ ಅವರ ಕಾದಂಬರಿಗಳನ್ನು ಓದುತ್ತಲೇ ನಾವು ಬೆಳೆದವರು. ಅವರ ಸಾಹಿತ್ಯ ನಮ್ಮ ಮೇಲೆ ಅಪಾರ ಪ್ರಭಾವ ಬೀರಿದೆ. ಅವರು ಇದೇ ಚನ್ನರಾಯಪಟ್ಟಣ ತಾಲ್ಲೂಕಿನವರಾಗಿರುವುದು ನಮ್ಮ ಹೆಮ್ಮೆ. ಅವರು ನಿಧನರಾಗುವ ಮೊದಲು ನನಗೆ ಸಾರ್ಥ ಕಾದಂಬರಿಯನ್ನು ಉಡುಗೊರೆಯಾಗಿ ನೀಡಿದ್ದರು. ಅದನ್ನು ಓದಿ ಪ್ರಭಾವಿತರಾಗಿ ಪತ್ನಿಯೊಂದಿಗೆ ಕಾಶೀಯಾತ್ರೆ ಕೈಗೊಂಡೆ. ಆದರೆ ಯಾತ್ರೆಯ ವೇಳೆ ಮೊಬೈಲ್ ಕಳೆದುಕೊಂಡೆ,” ಎಂದು ಹಾಸ್ಯಮಿಶ್ರಿತವಾಗಿ ತಮ್ಮ ಅನುಭವ ಹಂಚಿಕೊಂಡರು.

ಅದೇ ಸಂದರ್ಭದಲ್ಲಿ, ತಮ್ಮ ಕವಿಮಿತ್ರ ಗದಗದ ಡಿ.ವಿ. ಬಡಿಗೇರ ಅವರ ‘ಕಬ್ಬಿಗರ ಕೂಟ’ ಸಂಘಟನೆಯ ವತಿಯಿಂದ ಭೈರಪ್ಪ ಅವರ ಜನ್ಮದಿನದಂದು ಅವರ ನಿವಾಸದಲ್ಲೇ ಕಾದಂಬರಿಗಳ ಕುರಿತು ಉಪನ್ಯಾಸ ಹಾಗೂ ಕವಿಗೋಷ್ಠಿ ಆಯೋಜಿಸುವ ಉದ್ದೇಶವಿದ್ದು, ಜಿಲ್ಲೆಯ ಕವಿಗಳ ಸಹಕಾರ ಕೋರಲಾಗಿದೆ ಎಂದು ತಿಳಿಸಿದರು. ಗದಗದಿಂದ ಕವಿಗಳ ತಂಡ ಭಾಗವಹಿಸುವುದಾಗಿ ತಿಳಿಸಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ‘ತಿಂಗಳ ಪುಸ್ತಕ’ ಕಾರ್ಯಕ್ರಮವನ್ನು ಚನ್ನರಾಯಪಟ್ಟಣದ ಈ ರಂಗವೇದಿಕೆಯಲ್ಲಿ ಆಯೋಜಿಸಬೇಕೆಂದು ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ, ‘ಮನೆಗೊಂದು ಗ್ರಂಥಾಲಯ’ ಯೋಜನೆಯು ರಾಜ್ಯಾದ್ಯಂತ ಜಿಲ್ಲಾ ಅನುಷ್ಠಾನ ಸಮಿತಿಗಳ ಸಹಯೋಗದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಮೊದಲ ಹಂತ ಪೂರ್ಣಗೊಂಡಿದೆ. ಇದೀಗ ಎರಡನೇ ಹಂತದಲ್ಲಿ ಹಾಸನ ಜಿಲ್ಲೆಯಲ್ಲಿ ಕಾರ್ಯಕ್ರಮಗಳು ಉತ್ತಮವಾಗಿ ಸಾಗುತ್ತಿವೆ ಎಂದು ಮಾಹಿತಿ ನೀಡಿದರು.
ಪ್ರತಿಮಾ ಟ್ರಸ್ಟ್ ಹಾಗೂ ಅದರ ಚಟುವಟಿಕೆಗಳನ್ನು ಪರಿಚಯಿಸಿದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪೇಟೆ), ಚನ್ನರಾಯಪಟ್ಟಣದ ಮುಖ್ಯ ಶಿಕ್ಷಕಿ ಶ್ರೀಮತಿ ನೇತ್ರಾವತಿ, ನಾಟಕಕಾರ ಉಮೇಶ್ ತೆಂಕನಹಳ್ಳಿ ಅವರ ಕಪ್ಪು ಹಲ್ಲಿನ ಕಥೆ ಕಾದಂಬರಿಯ ಪ್ರಮುಖ ಸನ್ನಿವೇಶಗಳು ಮತ್ತು ಅದರ ಸಾಹಿತ್ಯಿಕ ಮಹತ್ವವನ್ನು ವಿವರಿಸಿದರು. ಜೊತೆಗೆ ಪ್ರತಿಮಾ ಟ್ರಸ್ಟ್ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಉಚಿತ ತರಬೇತಿ ನೀಡುತ್ತಿರುವ ಕಾರ್ಯವನ್ನು ಶ್ಲಾಘಿಸಿ, ಈ ಬಾರಿಯ ವಾರ್ಷಿಕ ಶಿಬಿರಕ್ಕೆ ತಮ್ಮ ಶಾಲೆಯನ್ನು ಆಯ್ಕೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಚ್.ಎನ್. ಲೋಕೇಶ್ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರವು ಜಿಲ್ಲೆಯಲ್ಲಿ ಆಯೋಜಿಸುವ ಎಲ್ಲ ಸಾಹಿತ್ಯ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಪ್ರತಿಮಾ ಟ್ರಸ್ಟ್ ಆಯೋಜಿಸುವ ಕಾರ್ಯಕ್ರಮಗಳಿಗೂ ತಮ್ಮ ಬೆಂಬಲ ಮುಂದುವರಿಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಬರಾಳು ಶಿವರಾಮ, ಡಾ. ಕುಶಾಲ ಬರಗೂರು, IACT ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಸಂಸ್ಥಾಪಕ ಲೋಕೇಶ್, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತೆಂಕನಹಳ್ಳಿ ಉಮೇಶ್ ದಂಪತಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಸನ್ಮಾನಿಸಿ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
