ಬೆಂಗಳೂರು, ಜುಲೈ 12, 2026 :ಭಾರತದಲ್ಲಿ ಕ್ರೀಡೆ ಮತ್ತು ಫಿಟ್ನೆಸ್ ಚಟುವಟಿಕೆಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕ್ರೀಡೆಗೆ ಸಂಬಂಧಿಸಿದ ಗಾಯಗಳ ಚಿಕಿತ್ಸೆಗೆ ವಿಶೇಷ ಒತ್ತು ನೀಡುವ ಉದ್ದೇಶದಿಂದ ಮಣಿಪಾಲ್ ಹಾಸ್ಪಿಟಲ್ ಮಿಲರ್ಸ್ ರೋಡ್ನಲ್ಲಿ ‘ಸ್ಪೋರ್ಟ್ಸ್ ಇಂಜುರಿ ಕೇರ್ ಸೆಂಟರ್’ (ಕ್ರೀಡಾ ಗಾಯಗಳ ಆರೈಕೆ ಕೇಂದ್ರ)ವನ್ನು ಆರಂಭಿಸಲಾಗಿದೆ. ಈ ಕೇಂದ್ರವು ಮೊಣಕಾಲು ಹಾಗೂ ಹೆಗಲಿನ ಗಾಯಗಳಿಗೆ ಸುಧಾರಿತ ಆರ್ತ್ರೋಸ್ಕೋಪಿಕ್ ಮತ್ತು ಸ್ಪೋರ್ಟ್ಸ್ ಸರ್ಜರಿ ಮೂಲಕ ವಿಶೇಷ ರೋಗನಿರ್ಣಯ ಹಾಗೂ ಚಿಕಿತ್ಸೆಯನ್ನು ಒದಗಿಸಲಿದೆ.
ಕೇಂದ್ರ ಉದ್ಘಾಟನೆ
ಈ ವಿಶೇಷ ಕೇಂದ್ರವನ್ನು ಮಣಿಪಾಲ್ ಹಾಸ್ಪಿಟಲ್ ಮಿಲರ್ಸ್ ರೋಡ್ನ ಆರ್ತ್ರೋಸ್ಕೋಪಿ ಮತ್ತು ಸ್ಪೋರ್ಟ್ಸ್ ಸರ್ಜರಿ ತಜ್ಞ ಹಾಗೂ ಹೆಗಲು-ಮೊಣಕಾಲು ಶಸ್ತ್ರಚಿಕಿತ್ಸಕರಾದ ಡಾ. ಚಿರಾಗ್ ಥೋನ್ಸೆ, ಮಣಿಪಾಲ್ ಆಸ್ಪತ್ರೆಗಳ ಜೋನಲ್ ನಿರ್ದೇಶಕ ಡಾ. ಮನೀಶ್ ರೈ, ಮಿಲರ್ಸ್ ರೋಡ್ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಡಾ. ನಿರಂಜನ್ ರೈ, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ, ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಉಪ ಕಾರ್ಯದರ್ಶಿ ಹನೀಫ್ ಮೊಹಮ್ಮದ್, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ಮುರಳೀಧರ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅರವಿಂದ್ ಗೌಡ ಹಾಗೂ ಕೆಬಿಎ ಕಾರ್ಯಕಾರಿ ಸಮಿತಿ ಸದಸ್ಯ ಡಾ. ನಿಶಾಂತ್ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.

ಕ್ರೀಡಾ ಗಾಯಗಳ ಹೆಚ್ಚಳ
ಭಾರತದ ಜನಸಂಖ್ಯೆಯಲ್ಲಿ ಸುಮಾರು 65% ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 23% ಭಾರತೀಯರು ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದು, ಇದರ ಪರಿಣಾಮವಾಗಿ ACL ಲಿಗಮೆಂಟ್ ಹರಿತ, ಮೆನಿಸ್ಕಸ್ ಗಾಯ, ಕಾರ್ಟಿಲೆಜ್ ಹಾನಿ, ರೋಟೇಟರ್ ಕಫ್ ಹರಿತ ಹಾಗೂ ಹೆಗಲಿನ ಅಸ್ಥಿರತೆ ಮೊದಲಾದ ಗಾಯಗಳು ಹೆಚ್ಚುತ್ತಿವೆ. ಇಂತಹ ಗಾಯಗಳಿಗೆ ಆರಂಭಿಕ ರೋಗನಿರ್ಣಯ ಮತ್ತು ಸಮಯೋಚಿತ ಚಿಕಿತ್ಸೆ ಅತ್ಯಂತ ಅಗತ್ಯವಾಗಿದೆ.
ಕೇಂದ್ರದ ವಿಶೇಷತೆಗಳು
ಈ ಕೇಂದ್ರದಲ್ಲಿ ಸಮಗ್ರ ವೈದ್ಯಕೀಯ ಮೌಲ್ಯಮಾಪನ, ಸುಧಾರಿತ ಇಮೇಜಿಂಗ್, ಔಷಧ ಚಿಕಿತ್ಸೆ, ಫಿಸಿಯೋಥೆರಪಿ ಹಾಗೂ ಅಗತ್ಯವಿದ್ದಲ್ಲಿ ಕನಿಷ್ಠ ಆಕ್ರಮಣಕಾರಿ ಆರ್ತ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತದೆ. ಇದರಿಂದ ಕಡಿಮೆ ನೋವು, ಕಡಿಮೆ ದಿನಗಳ ಆಸ್ಪತ್ರೆ ವಾಸ ಹಾಗೂ ತ್ವರಿತ ಚೇತರಿಕೆ ಸಾಧ್ಯವಾಗಲಿದೆ.
ಡಾ. ಚಿರಾಗ್ ಥೋನ್ಸೆ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ಈ ಕೇಂದ್ರದಲ್ಲಿ ಮೆನಿಸ್ಕಸ್ ಕಸಿ, ಶೋಲ್ಡರ್ ಪ್ಯಾಚ್ ಆಗ್ಮೆಂಟೇಶನ್, ಸುಧಾರಿತ ಲಿಗಮೆಂಟ್ ಪುನರ್ನಿರ್ಮಾಣ ಹಾಗೂ ಕಾರ್ಟಿಲೆಜ್ ಮರುಸ್ಥಾಪನೆ ಸೇರಿದಂತೆ ಅತ್ಯಾಧುನಿಕ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಇಲ್ಲಿನ ಆರ್ಥೋಪೆಡಿಕ್ ತಂಡವು ವರ್ಷಕ್ಕೆ ಸುಮಾರು 1,600 ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದು, ಅವುಗಳಲ್ಲಿ ಸುಮಾರು 700 ಕ್ರೀಡಾ ಗಾಯಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳಾಗಿವೆ.
ಡಾ. ಚಿರಾಗ್ ಥೋನ್ಸೆ ಹೇಳಿಕೆ
“ಇತ್ತೀಚಿನ ದಿನಗಳಲ್ಲಿ ಕ್ರೀಡಾ ಗಾಯಗಳು ಕೇವಲ ವೃತ್ತಿಪರ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಕ್ರಿಯ ಜೀವನಶೈಲಿಯನ್ನು ಅನುಸರಿಸುವ ಯಾರಿಗಾದರೂ ಇಂತಹ ಗಾಯಗಳು ಸಂಭವಿಸಬಹುದು. ಪ್ರತಿಯೊಂದು ಗಾಯಕ್ಕೂ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ. ಆದರೆ ಆರಂಭಿಕ ರೋಗನಿರ್ಣಯ ಮತ್ತು ಸರಿಯಾದ ಚಿಕಿತ್ಸೆಯ ಮೂಲಕ ದೀರ್ಘಕಾಲೀನ ಕೀಲು ಹಾನಿಯನ್ನು ತಡೆಗಟ್ಟಿ, ರೋಗಿಗಳನ್ನು ಮತ್ತೆ ತಮ್ಮ ಸಕ್ರಿಯ ಜೀವನಕ್ಕೆ ಸುರಕ್ಷಿತವಾಗಿ ಮರಳುವಂತೆ ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ,” ಎಂದು ಹೇಳಿದರು.
ಕುಮಾರ್ ಬಂಗಾರಪ್ಪ ಅಭಿಪ್ರಾಯ
“ಕ್ರೀಡೆಯಲ್ಲಿ ಗಾಯವಾಗುವುದು ಸಾಮಾನ್ಯ. ಆದರೆ ಕ್ರೀಡಾಪಟುಗಳಿಗೆ ಗಾಯ ಎಂದರೆ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರುವ ಆತಂಕ. ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರೆತರೆ ಮಾತ್ರ ಅವರು ಮತ್ತೆ ಕ್ರೀಡಾಂಗಣಕ್ಕೆ ಮರಳಲು ಸಾಧ್ಯ. ಕ್ರೀಡಾ ಗಾಯಗಳಿಗೆ ವಿಶೇಷ ಚಿಕಿತ್ಸೆ ನೀಡುವ ಉದ್ದೇಶದಿಂದ ಮಣಿಪಾಲ್ ಆಸ್ಪತ್ರೆ ಪ್ರತ್ಯೇಕ ಕೇಂದ್ರ ಆರಂಭಿಸಿರುವುದು ರಾಜ್ಯದ ಕ್ರೀಡಾಪಟುಗಳಿಗೆ ಬಹಳ ಅನುಕೂಲಕರವಾಗಿದೆ,” ಎಂದು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಕುಮಾರ್ ಬಂಗಾರಪ್ಪ ಹೇಳಿದರು.
ಗುರಿ : ಈ ಕೇಂದ್ರದ ಮೂಲಕ ವೃತ್ತಿಪರ ಹಾಗೂ ಹವ್ಯಾಸಿ ಕ್ರೀಡಾಪಟುಗಳಿಗೆ ಗಾಯದ ರೋಗನಿರ್ಣಯದಿಂದ ಸಂಪೂರ್ಣ ಚೇತರಿಕೆ ಮತ್ತು ಮತ್ತೆ ಗರಿಷ್ಠ ಪ್ರದರ್ಶನ ಮಟ್ಟಕ್ಕೆ ಸುರಕ್ಷಿತವಾಗಿ ಮರಳುವವರೆಗೆ ಸಮಗ್ರ ಹಾಗೂ ವೈಯಕ್ತಿಕಗೊಳಿಸಿದ ಚಿಕಿತ್ಸೆಯನ್ನು ನೀಡುವ ಗುರಿಯನ್ನು ಮಣಿಪಾಲ್ ಹಾಸ್ಪಿಟಲ್ ಮಿಲರ್ಸ್ ರೋಡ್ ಹೊಂದಿದೆ.
