ತುಮಕೂರು: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ,ಇಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ನೇತೃತ್ವದಲ್ಲಿ ನಗರದ ಟೌನ್ಹಾಲ್ನ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಟೌನ್ಹಾಲ್ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಜಮಾವಣೆಗೊಂಡಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತ ರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್ ದೇಶದ ಯುವಜನರ ಭವಿಷ್ಯ ನಿರ್ಧರಿಸುವ ಒಂದು ನೀಟ್ ಪರೀಕ್ಷೆ ನಡೆಸಲು ಆಗದವರು ಇನ್ನೂ ದೇಶ ನಡೆಸಲು ಸಾಧ್ಯವೇ ?, ನೀಟ್ ಪರೀಕ್ಷೆ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೆ 12ಕ್ಕೂ ಹೆಚ್ಚು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.ಬಡವರ ಮಕ್ಕಳ ಬದಲು ಶ್ರೀಮಂತರ ಮಕ್ಕಳು ಡಾಕ್ಟರ್ಗಳಾಗಬೇಕೆಂಬ ಕಾರ್ಪೋರೇಟ್ ಮನಸ್ಥಿತಿಯ ಪರಿಣಾಮ ಇದಕ್ಕೆ ಕಾರಣ.ಮರು ಪರೀಕ್ಷೆಯಿಂದ ಪ್ರತಿಭಾವಂತರಿಗೆ ಅನ್ಯಾಯವಾಗಿದೆ. ಸುಮಾರು 22 ಜನ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.ಇದುವರೆಗೂ ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿಲ್ಲ. ಇಷ್ಟು ದುರ್ಬಲ ಮನಸ್ಥಿತಿಯ ಪ್ರಧಾನಿಯನ್ನು ಈ ದೇಶ ಹಿಂದೆಂದು ಕಂಡಿಲ್ಲ. ಇದೇನಾ ನಿಮ್ಮ 56 ಇಂಚಿನ ಎದೆ. ಮೊದಲು ಈ ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ, ಶಿಕ್ಷಣ ಮಂತ್ರಿಗಳ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದಲ್ಲಿ ಮತ್ತಷ್ಸು ಹೋರಾಟವನ್ನು ತೀವ್ರಗೊಳಿಸಲಿದ್ದೇವೆ ಎಂದರು.
ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ,ಪ್ರತಿಭಾವಂತರಿಗೆ ಅವಕಾಶಗಳು ಸಿಗಬೇಕೆಂಬ ಉದ್ದೇಶದಿಂದ ಸರಕಾರ 2013ರಲ್ಲಿ ಜಾರಿಗೆ ತಂದ ನೀಟ್ ಪರೀಕ್ಷೆಯ ಉದ್ದೇಶ ಸಂಪೂರ್ಣ ವಿಫಲವಾಗಿದೆ.ಪ್ರಧಾನಿಗಳು ಹಾಗೂ ಅವರ ಸಂಪುಟದ ಸಹದ್ಯೋಗಿಗಳಿಗೆ ಬಡವರ ಮಕ್ಕಳು ಡಾಕ್ಟರ್ ಆಗುವುದಕ್ಕಿಂತ ಶ್ರೀಮಂತರ ಮಕ್ಕಳು ಡಾಕ್ಟರ್ ಆಗುವುದು ಮುಖ್ಯ ಹಾಗಾಗಿ ಪ್ರಶ್ನೆ ಪ್ರತಿಕೆ ಸೋರಿಕೆ ಮಾಡಿ,ಪ್ರತಿಭಾವಂತರ ಹಕ್ಕುಗಳನ್ನು ಕಸಿಯುತ್ತಿದೆ.2004 ರಿಂದ ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ.ಕಳೆದ 12 ವರ್ಷಗಳಲ್ಲಿ ಹತ್ತಾರು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ, ನಕಲಿ ಡಾಕ್ಟರ್ಗಳು ಸೃಷ್ಟಿಯಾಗಿ, ಇಡೀ ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿದೆ.ಹಾಗಾಗಿ ಕೇಂದ್ರ ಸರಕಾರ ಈ ದುಸ್ಥಿತಿಗೆ ಕಾರಣರಾದ ಮಂತ್ರಿಗಳ ರಾಜೀನಾಮೆ ಪಡೆಯಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಫಯಾಜ್, ಮಹೇಶ್, ಜಿಲ್ಲಾ ವಕ್ತಾರರಾದ ಶ್ರೀಮತಿ ಕೆ.ಎಂ.ಸುಜಾತ, ಇತರರು ಇದ್ದರು.
– ಚಂದ್ರಚೂಡ ಕೆ.ಬಿ
