ಹಾಸನ, ಜು. 26: ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಹಾಸನ ಜಿಲ್ಲಾ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ನಗರದ ಫೀಲ್ಡ್ ಮಾರ್ಷಲ್ ಕರಿಯಪ್ಪ ಪಾರ್ಕ್ನಲ್ಲಿರುವ ವಾರ್ ಮೆಮೋರಿಯಲ್ನಲ್ಲಿ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್ ಅವರು ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಉದ್ಘಾಟಿಸಿದರು. ಬಳಿಕ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಸದಸ್ಯರು ಕೂಡ ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಮಾಜಿ ಸೈನಿಕರ ಸಮನ್ವಯ ಸಮಿತಿಯ ಸದಸ್ಯರು, ಮಾಜಿ ಸೈನಿಕರು, ಸೈನಿಕರ ಕುಟುಂಬದವರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಅಧ್ಯಕ್ಷ ರೋ. ಕೆ.ಎಸ್. ಯೋಗೇಶ್, ಕಾರ್ಯದರ್ಶಿ ಬಿ.ಎಂ. ದರ್ಶನ್, ಜಂಟಿ ಕಾರ್ಯದರ್ಶಿ ಎಸ್. ಸಿರಾಜೇಶ್, ಹಿರಿಯ ಸದಸ್ಯರಾದ ಡಾ. ಎಂ.ಸಿ. ರಾಜು, ರೋ. ಸಿದ್ದನಂಜಪ್ಪ, ರೋ. ಶೈಲಾ, ರೋ. ಆದರ್ಶ್ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಸಂಘ-ಸಂಸ್ಥೆಗಳು, ಮಾಜಿ ಸೈನಿಕರು ಹಾಗೂ ಭಾಗವಹಿಸಿದ ಎಲ್ಲರಿಗೂ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
