ಕೆ.ಆರ್.ಪೇಟೆ : ರಾಜಕೀಯ ಕ್ಷೇತ್ರ ಇಂದು ಕಲುಷಿತಗೊಂಡಿರುವುದರಿಂದ 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಆದರೆ ಸಕ್ರಿಯ ರಾಜಕಾರಣದಲ್ಲಿದ್ದು ಜನರ ಕಷ್ಟ, ಸುಖಗಳಿಗೆ ಧ್ವನಿಯಾಗಿ ನಿಲ್ಲುವುದಾಗಿ ಮಾಜಿ ಮುಖ್ಯ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಅಗ್ರಹಾರಬಾಚಹಳ್ಳಿ ಗೇಟ್ ಬಳಿ ಇರುವ ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ ಅವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವರುಣ ಕ್ಷೇತ್ರದ ಜನರು ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಅಂದುಕೊಂಡಿದ್ದೇನೆ. ಈ ಹಿಂದೆ ಎಲ್ಲಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಕ್ಷೇತ್ರದ ಜನರೇ ನಮಗೆ ದುಡ್ಡುಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ, ಇಂದು ಅಂತಹ ಪರಿಸ್ಥಿತಿ ಇಲ್ಲ. ಜೊತೆಗೆ ಈಗ ನನಗೆ 79 ವರ್ಷ. ನಮ್ಮ ಸರ್ಕಾರದ ಅವಧಿ ಇನ್ನು ಒಂದೂವರೆ ವರ್ಷ ಇದೆ. ಆಗ ನನಗೆ 81ವಯಸ್ಸಾಗಿರುತ್ತದೆ. ಈಗಿನಂತೆ ಆರೋಗ್ಯವೂ ಸದೃಢವಾಗಿ ಇರುವುದಿಲ್ಲ. ಹಿಂದಿನಂತೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
2028ರ ವೇಳೆಗೆ ನನಗೆ 81 ವರ್ಷವಾಗಿರುತ್ತದೆ. ಆಗ ನನ್ನ ರಾಜಕೀಯ ಜೀವನಕ್ಕೆ 50 ವರ್ಷಗಳು ಪೂರ್ಣಗೊಳ್ಳುತ್ತದೆ. 1978ರಲ್ಲಿ ನಾನು ತಾಲೂಕು ಮಂಡಳಿ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿದ್ದೆ. ಸೋಲು – ಗೆಲುವು ಎಲ್ಲವನ್ನೂ ಕಂಡಿದ್ದೇನೆ. ಆದರೆ ನಂಬಿದ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದಿಲ್ಲ, ಆತ್ಮಸಾಕ್ಷಿಗೆ ದ್ರೋಹ ಬಗೆದಿಲ್ಲ ಎನ್ನುವ ಸಂತೃಪ್ತಿ ನನಗಿದೆ.
ಚುನಾವಣೆಯಲ್ಲಿ ಸ್ಪರ್ಧಿಸಿದರೆ ನಾವು ಜನರಿಗೆ ದುಡ್ಡುಕೊಡಬೇಕಾದ ಕಾಲ ಬಂದಿದೆ. ಇಂದು ರಾಜಕಾರಣ ಸಾಕಷ್ಟು ಕಲುಷಿತವಾಗಿದೆ. ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲ ವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗಳಲ್ಲಿ ನಾನು ಸ್ಪರ್ಧಿಸುವುದಿಲ್ಲ ಎನ್ನುವ ನಿರ್ಧಾರಕ್ಕೆ ಸರಳ ಸಜ್ಜನ ರಾಜಕಾರಣಿ, ಮಂಡ್ಯದ ಗಾಂಧೀ ಸ್ಪೀಕರ್ ಕೃಷ್ಣ ಅವರ ಹುಟ್ಟೂರಿನಲ್ಲಿ 2028ಕ್ಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಇರುವ ನಿರ್ಧಾರಕ್ಕೆ ಬಂದಿದ್ದೇನೆ.
ನಾಡಿನ ಜನತೆ ಅದರಲ್ಲೂ ವರುಣಾ ಕ್ಷೇತ್ರ, ಚಾಮುಂಡೇಶ್ವರಿ ಕ್ಷೇತ್ರ ಬಾದಾಮಿ ಕ್ಷೇತ್ರದ ಜನತೆ ಐದು ದಶಕಗಳ ಕಾಲ ರಾಜ್ಯದ ಜನತೆ ನನ್ನನ್ನು ತಮ್ಮಲ್ಲೊಬ್ಬ ಎಂಬಂತೆ ಕಂಡಿದ್ದಾರೆ, ಪ್ರೀತಿಯಿಂದ ಸಲಹಿದ್ದಾರೆ. ಈ ಋಣಭಾರ ನನ್ನ ಮೇಲಿದೆ. ಹೀಗಾಗಿ ನನ್ನ ಮುಂದಿನ ಜೀವನವನ್ನು ನಾಡಿನ ಏಳು ಕೋಟಿ ಜನರ ಸೇವೆಗೆ ಮುಡಿಪಾಗಿಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
– ಶ್ರೀನಿವಾಸ್ ಆರ್.
