ಹಾಸನ, ಆ.3: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಹಾಸನ ಜಿಲ್ಲಾ ಜಾಗೃತ ಸಮಿತಿ ಸಂಯುಕ್ತ ಆಶ್ರಯದಲ್ಲಿ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮವು ನಗರದ ಅರಳೆಪೇಟೆಯ ಹಿರಿಯ ಸಾಹಿತಿ ರಾಜಣ್ಣ ರಾಶಿ (ಶಂಕರಪ್ಪ ಹುಲ್ಲಂಗಾಲ) ಅವರ ನಿವಾಸದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ಪ್ರಾಧ್ಯಾಪಕ ಡಾ. ಕುಶಾಲ್ ಬರಗೂರು, ‘ಮನೆಗೊಂದು ಗ್ರಂಥಾಲಯ’ ಅಭಿಯಾನವು ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಲ್ಲಿಯೂ ಉತ್ತಮ ಸ್ಪಂದನೆ ಪಡೆದಿದೆ. ಈ ಕಾರ್ಯಕ್ರಮದ ಮೂಲಕ ಪುಸ್ತಕಗಳ ಮೂಲಕ ಜ್ಞಾನ ಪ್ರಸರಣವಾಗುವುದರ ಜೊತೆಗೆ ಲೇಖಕರ ಕೃತಿಗಳ ಪರಿಚಯವೂ ಜನರಿಗೆ ತಲುಪುತ್ತಿದೆ. ಓದುವ ಸಂಸ್ಕೃತಿ ಬೆಳೆಸುವ ಮೂಲಕ ಜನಮನವನ್ನು ಶುದ್ಧೀಕರಿಸುವ ಕಾರ್ಯಕ್ಕೆ ಈ ಅಭಿಯಾನ ಪೂರಕವಾಗಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ರಾಜಣ್ಣ ರಾಶಿ ಅವರ ‘ಜೀವನ ನಿರಂತರ’ ಕಾದಂಬರಿಯನ್ನು ವಿಮರ್ಶಿಸಿದ ಲೇಖಕಿ ಸುವರ್ಣ ಕೆ.ಟಿ. ಶಿವಪ್ರಸಾದ್, ಜೀವನದ ಕಷ್ಟ-ಸುಖಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಸರಳ ಭಾಷೆಯಲ್ಲಿ ಚಿತ್ರಿಸಿರುವ ಕೃತಿ ಓದುಗರನ್ನು ಹಿಡಿದಿಡುತ್ತದೆ. ಕಥಾನಾಯಕ ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಬಗೆಯನ್ನು ಲೇಖಕರು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಪ್ರಾಂಶುಪಾಲ ಹಾಗೂ ಲೇಖಕ ಟಿ.ಎಚ್. ಅಪ್ಪಾಜಿಗೌಡ ಮಾತನಾಡಿ, ಲೇಖಕರು ತಮ್ಮ ವೃತ್ತಿಜೀವನದ ಪ್ರಾಮಾಣಿಕ ಸೇವೆಯನ್ನು ಆತ್ಮವಿಶ್ವಾಸದಿಂದ ದಾಖಲಿಸಿರುವುದು ಕೃತಿಯ ಪ್ರಮುಖ ಅಂಶವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹಾಗೂ ಸಂಚಾಲಕ ಗೊರೂರು ಅನಂತರಾಜು ಮಾತನಾಡಿ, ರಾಜಣ್ಣ ರಾಶಿ ಅವರ ಸಾಹಿತ್ಯ ಕೃಷಿ ಗಮನಾರ್ಹವಾಗಿದೆ. ಅವರ ‘ಜೀವನ ನಿರಂತರ’ ಕಾದಂಬರಿ ಪ್ರವಾಸ ಕಥನದ ಜೊತೆಗೆ ಐತಿಹಾಸಿಕ ಅಂಶಗಳನ್ನೂ ಒಳಗೊಂಡಿದ್ದು, ಓದುಗರಲ್ಲಿ ಕುತೂಹಲ ಮೂಡಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಇಂಜಿನಿಯರ್ ರಾಮಕೃಷ್ಣ ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ಹಾಸನ ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ಕುಮಾರ ಗೌರವ್, ಝುಲ್ಪಿಕರ್ ಅಹ್ಮದ್, ಚಿನ್ನೇನಹಳ್ಳಿ ಸ್ವಾಮಿ ಉಪಸ್ಥಿತರಿದ್ದರು.
ಸಾಹಿತಿ ಶಂಕರಪ್ಪ ಹುಲ್ಲಂಗಾಲ ಹಾಗೂ ಶಕುಂತಲ ದಂಪತಿಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ತಹಸೀಲ್ದಾರ್ ಎ.ವಿ. ರುದ್ರಪ್ಪಾಜಿರಾವ್, ಲೇಖಕ ಗೊರೂರು ಶಿವೇಶ್, ನಿವೃತ್ತ ಇಂಜಿನಿಯರ್ ಮಂಜುನಾಥ್, ಕಲಾವಿದ ಸುರೇಶ್ ಅತ್ನಿ, ನಟ ಗಣೇಶ್, ಕಿರುತೆರೆ ಕಲಾವಿದ ಮಂಡ್ಯ ಕೆ. ಜಯರಾಮು, ಗಾಯಕ ಜಿ.ಎಸ್. ಶ್ರೀಕಾಂತ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ರಂಗಭೂಮಿ ಕಲಾವಿದ ಪುಟ್ಟಸ್ವಾಮಿಗೌಡ ಪ್ರಾರ್ಥನೆ ನೆರವೇರಿಸಿದರೆ, ಸಾಹಿತಿ ಶಂಕರಪ್ಪ ಹುಲ್ಲಂಗಾಲ ವಂದಿಸಿದರು.
