ಶ್ಲೋಕ – 02
ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ ಗುಣಪ್ರವೃದ್ಧಾ ವಿಷಯಪ್ರವಾಲಾಃ ।
ಅಧಶ್ಚ ಮೂಲಾನ್ಯನುಸಂತತಾನಿ ಕರ್ಮಾನುಬನ್ಧೀನಿ ಮನುಷ್ಯಲೋಕೇ ॥೨॥
ಅಧಃ ಚ ಊರ್ಧ್ವಂ ಪ್ರಸೃತಾಃ ತಸ್ಯ ಶಾಖಾ ಗುಣ ಪ್ರವೃದ್ಧಾಃ ವಿಷಯ ಪ್ರವಾಲಾಃ ।
ಅಧಃ ಚ ಮೂಲಾನಿ ಅನುಸಂತತಾನಿ ಕರ್ಮ ಅನುಬನ್ಧೀನಿ ಮನುಷ್ಯಲೋಕೇ –ತ್ರಿಗುಣಗಳಿಂದ ಕೊಬ್ಬಿದ ಇದರ ಟೊಂಗೆಗಳು ಕೆಳಗೂ ಮೇಲೂ ಹಬ್ಬಿ ಹರಡಿವೆ. ಇಂದ್ರಿಯ ವಿಷಯಗಳೆ ಇವುಗಳ ತಳಿರುಗಳು. ಇದರ ಬುಡಕಟ್ಟುಗಳೂ ಜೀವಿಗಳ ಕರ್ಮಕ್ಕೆ ತಕ್ಕಂತೆ ಕೆಳಗೆ ಕೂಡ, ಭೂಮಿಯಲ್ಲು ಹರವಿಕೊಂಡಿವೆ.
ಮರದ ವರ್ಣನೆಯನ್ನು ಇಲ್ಲಿ ಮತ್ತಷ್ಟು ವಿವರಿಸಲಾಗಿದೆ. ಈ ಮರದ ಬೇರುಗಳು ಕೆಳಮುಖವಾಗಿಯೂ, ಮೇಲ್ಮುಖವಾಗಿಯೂ ಹರಡಿಕೊಂಡಿದೆ ಎನ್ನುವಲ್ಲಿ ಆಲದ ಮರದ ವರ್ಣನೆ ಎದ್ದು ಕಾಣುತ್ತದೆ. ಪಂಚಭೂತ ಎನ್ನುವ ಟೊಂಗೆ ಟಿಸಿಲು ಮೇಲಿನಿಂದ ಕೆಳಗಿನ ತನಕ ವ್ಯಾಪಿಸಿಕೊಂಡಿದೆ. ನಮ್ಮ ಶರೀರವನ್ನೇ ನೋಡಿದಾಗ- ನಮ್ಮ ಸಹಸ್ರಾರದಲ್ಲಿ ಭಗವಂತ ಕೂತಿದ್ದಾನೆ. ಮೇಲಿನಿಂದ ಕೆಳಗಿನ ತನಕ ಪಂಚಭೂತಗಳು, ಸತ್ವ-ರಜಸ್ಸು-ತಮಸ್ಸು ಎನ್ನುವ ತ್ರಿಗುಣಗಳು ಟೊಂಗೆಗಳಾಗಿ ನಿಂತಿವೆ. ಇಲ್ಲಿ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಚಿಗುರೆಲೆಗಳಿದ್ದಂತೆ. ಅಂದರೆ ಪಂಚಭೂತಾತ್ಮಕವಾದ ವಿಷಯಗಳೇ ಈ ಮರದ ಚಿಗುರು. ಈ ಚಿಗುರು ನಮಗೆ ಯಾವಾಗಲೂ ಆಕರ್ಷಣೆ. ಭಗವಂತನ ಅನಂತ ರೂಪ ಮೇಲಿನಿಂದ ಕೆಳಗಿನ ತನಕ ನಮ್ಮ ಅಂಗಾಂಗದಲ್ಲಿ ತುಂಬಿದೆ. ಅಲ್ಲಿ ನಮ್ಮ ಕರ್ಮವನ್ನು ಅವಲಂಬಿಸಿ ಅವನ ಕ್ರಿಯೆ. ಭಗವಂತನ ಮೂಲ ಮೇಲೆ, ಆದರೆ ಆತ ಮೇಲಿನಿಂದ ಕೆಳಗಿನ ತನಕ ಹರವಿಕೊಂಡಿದ್ದಾನೆ. ಹೀಗೆ ಆತ ಎಲ್ಲ ಕಡೆ ವ್ಯಾಪಿಸಿ ನಿಂತಿದ್ದಾನೆ.
