ರಾಮನಾಥಪುರ, ಸೆ.25: ಚಾರ್ತುರ್ಮಾಸದ ಸಂದರ್ಭದಲ್ಲಿ ದಾನ, ವ್ರತ, ಹೋಮ, ಜಪ-ತಪಾದಿಗಳನ್ನು ಆಚರಿಸುವವರಿಗೆ ಶ್ರೀಹರಿಯು ಅನಂತ ಫಲವನ್ನು ನೀಡುತ್ತಾನೆ. ಆದ್ದರಿಂದ ಚಾರ್ತುರ್ಮಾಸದಲ್ಲಿ ಗುರುಪರಂಪರೆಯನ್ನು ವಿಶೇಷವಾಗಿ ಆರಾಧಿಸುವ ಸಂಪ್ರದಾಯವನ್ನು ನಮ್ಮ ಹಿರಿಯರು ಹಾಕಿಕೊಟ್ಟಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಮಹಾಸಂಸ್ಥಾನ ಪೀಠದ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಹೇಳಿದರು.

ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದಲ್ಲಿ ಶ್ರೀ ವ್ಯಾಸಪೂಜೆ ಹಾಗೂ ಶ್ರೀ ಗುರುಪರಂಪರಾ ಪೂಜಾ ಸಂಕಲ್ಪದೊಂದಿಗೆ ನಡೆದ ಚಾರ್ತುರ್ಮಾಸದ 46ನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಎಲ್ಲರೂ ಶ್ರೀಗುರುಗಳ ಕೃಪೆ ಹಾಗೂ ಭಗವದನುಗ್ರಹಕ್ಕೆ ಪಾತ್ರರಾಗಬೇಕು ಎಂದು ಆಶಿಸಿದರು.

ಭಾರತೀಯ ಸಂಸ್ಕೃತಿ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುತ್ತದೆ
ಭಾರತೀಯ ಸಂಸ್ಕೃತಿಯು ಪುಣ್ಯಭೂಮಿಯಾದ ಭಾರತದಲ್ಲಿ ಜನಿಸಿ, ವಿಕಾಸಗೊಂಡ ಸಂಸ್ಕೃತಿಯಾಗಿದೆ. ತಮ್ಮ ಸಂಪ್ರದಾಯದ ಮೂಲ ತಾಯಿಬೇರು ಹಾಗೂ ನಂಬಿಕೆಯ ಪ್ರಧಾನ ಶ್ರದ್ಧಾ ಕೇಂದ್ರವನ್ನು ಭಾರತದಲ್ಲೇ ಹೊಂದಿರುವವರು ಭಾರತೀಯ ಸಂಸ್ಕೃತಿಯ ಭಾಗವಾಗಿದ್ದಾರೆ ಎಂದು ಹೇಳಿದರು.

‘ಏಕಂ ಸದ್, ಜ್ಞಾನಿನಃ ಬಹುಧಾ ವದಂತಿ’ ಎಂಬ ತತ್ವದಂತೆ ಸತ್ಯ ಒಂದೇ ಆಗಿದ್ದು, ಅದನ್ನು ತಲುಪುವ ಮಾರ್ಗಗಳು ಹಲವು. ಭಾರತೀಯ ಸಂಸ್ಕೃತಿಯು ಸದಾ ಜಗತ್ತಿಗೆ ವೈವಿಧ್ಯತೆಯಲ್ಲಿ ಏಕತೆಯ ಸಂದೇಶವನ್ನು ಸಾರುತ್ತಿದೆ. ಇಂತಹ ಪುಣ್ಯಭೂಮಿಯಾದ ಭಾರತದಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯ ಎಂದು ಜಗದ್ಗುರುಗಳು ತಿಳಿಸಿದರು.

ಈ ಸಂದರ್ಭದಲ್ಲಿ ಕಿರಿಯ ಶ್ರೀಗಳಾದ ಪರಮಪೂಜ್ಯ ಶ್ರೀ ಶ್ರೀ ಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮೀಜಿ, ಗೌರವ ಸಲಹೆಗಾರ ಎ.ಆರ್. ದಿವಾಕರಸ್ವಾಮಿ, ಶ್ರೀಮಠದ ಪಾರುಪತ್ತೇಗಾರ ಎ.ಆರ್. ಶೇಷಕುಮಾರ್, ಹಾಸನ ಜಿಲ್ಲಾ ಶ್ರೀ ಶಿವರಾತ್ರಿ ರಾಜೇಂದ್ರ ಭಕ್ತ ಬಳಗದ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹಾಗೂ ರಾಮನಾಥಪುರದ ಆರ್.ಕೆ. ಶ್ರೀನಿವಾಸ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ತಾಲೂಕು ಅಧ್ಯಕ್ಷ ಸಿದ್ದರಾಜು ಸೇರಿದಂತೆ ಹಲವರನ್ನು ಶ್ರೀಗಳು ಗೌರವಿಸಿದರು.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
