ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸ್ವಯಂ ನಿವೃತ್ತ ಶಿಕ್ಷಕ ಹಾಗೂ ‘ತನ್ಮಯ ಕನ್ನಡ’ ಪತ್ರಿಕೆಯ ಉಪಸಂಪಾದಕ ಕೆ.ಜಿ. ರಂಗಸ್ವಾಮಿ (ರಂಗಸ್ವಾಮಿಗೌಡ್ರು) ಅವರು ಕ್ಷೇತ್ರದಾದ್ಯಂತ ಸಂಚರಿಸಿ ಪದವೀಧರರನ್ನು ಸಂಘಟಿಸುವುದು ಹಾಗೂ ಅವರ ಸಮಸ್ಯೆಗಳನ್ನು ಆಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಿಕ್ಷಕರು ಹಾಗೂ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸಬೇಕು. ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ನೀಡಲಾಗುತ್ತಿರುವ ಮೊಟ್ಟೆ ಹಾಗೂ ಬಾಳೆಹಣ್ಣಿಗೆ ಸಂಬಂಧಿಸಿದ ಅನುದಾನವನ್ನು ಹೆಚ್ಚಿಸಬೇಕು. ಸರ್ಕಾರಿ ಶಾಲಾ ಶಿಕ್ಷಕರಿಗೆ ಪ್ರತಿವರ್ಷ ನಿಯಮಾನುಸಾರ ಬಡ್ತಿ ಮತ್ತು ವರ್ಗಾವಣೆ ಪ್ರಕ್ರಿಯೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಶಿಕ್ಷಕರು, ವಕೀಲರು, ಪತ್ರಕರ್ತರು, ಸೈನಿಕರು, ಕಾರ್ಮಿಕರು ಹಾಗೂ ಚಾಲಕರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ವಿಧಾನಪರಿಷತ್ನಲ್ಲಿ ಒಂದು ಸ್ಥಾನ ಕಲ್ಪಿಸಬೇಕು. 1ರಿಂದ 7ನೇ ತರಗತಿವರೆಗೆ ಬೋಧಿಸುತ್ತಿರುವ ಶಿಕ್ಷಕರಿಗೆ ಟಿಇಟಿ ಪರೀಕ್ಷೆಯಿಂದ ವಿನಾಯಿತಿ ನೀಡಬೇಕು. ಶಿಕ್ಷಕರನ್ನು ಬಿಎಲ್ಒ, ಜನಗಣತಿ ಸೇರಿದಂತೆ ಬೋಧನಾ ಕಾರ್ಯಕ್ಕೆ ಸಂಬಂಧಿಸದ ಕರ್ತವ್ಯಗಳಿಗೆ ನಿಯೋಜಿಸಬಾರದು ಎಂದು ಆಗ್ರಹಿಸಿದರು.
ಸರ್ಕಾರಿ ಇಲಾಖೆಗಳಲ್ಲಿರುವ ಪದವೀಧರ ನೌಕರರಿಗೆ ಮೂರು ವರ್ಷಕ್ಕೊಮ್ಮೆ ಬಡ್ತಿ ನೀಡುವ ವ್ಯವಸ್ಥೆ ಜಾರಿಯಾಗಬೇಕು. ಸರ್ಕಾರಿ ನೌಕರರಿಗೆ ಮನೆ ಹಾಗೂ ನಿವೇಶನ ಖರೀದಿ ಸೇರಿದಂತೆ ಅಗತ್ಯ ಉದ್ದೇಶಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು. ಸರ್ಕಾರಿ ಬ್ಯಾಂಕ್ಗಳು, ಸಹಕಾರ ಬ್ಯಾಂಕ್ಗಳು ಹಾಗೂ ಪತ್ತಿನ ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾಗುವ ಉಪನ್ಯಾಸಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಹುದ್ದೆಗಳನ್ನು ನಿವೃತ್ತಿಯಾದ ಮೂರು ತಿಂಗಳೊಳಗೆ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. 2022ರ ಜುಲೈ 1ರಿಂದ 2024ರ ಜುಲೈ 31ರವರೆಗೆ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಡಿಸಿಆರ್ಜಿ, ಕಮ್ಯುಟೇಶನ್, ಇಎಲ್ ಎನ್ಕ್ಯಾಶ್ಮೆಂಟ್ ಸೇರಿದಂತೆ ಇತರೆ ಆರ್ಥಿಕ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ನಿವೃತ್ತ ನೌಕರರಿಗೂ ಸರ್ಕಾರದ ವತಿಯಿಂದ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಪದವೀಧರರ ಉದ್ಯೋಗಕ್ಕೆ ಆದ್ಯತೆ
ತಾವು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದರೆ ಪದವೀಧರರ ಸಮಸ್ಯೆಗಳಿಗೆ ಆದ್ಯತೆ ನೀಡಿ, ಅವರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ರಂಗಸ್ವಾಮಿ ಹೇಳಿದರು.
ನಿರುದ್ಯೋಗಿ ಪದವೀಧರರನ್ನು ಗುರುತಿಸಿ ವಿವಿಧ ಕಂಪನಿಗಳು ಹಾಗೂ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಪದವೀಧರ ರೈತರಿಗೆ ಬ್ಯಾಂಕ್ಗಳು, ಸರ್ಕಾರ ಹಾಗೂ ವಿವಿಧ ಸಂಸ್ಥೆಗಳಿಂದ ಸಬ್ಸಿಡಿ ಸೌಲಭ್ಯ ದೊರೆಯುವಂತೆ ಪ್ರಯತ್ನಿಸಲಾಗುವುದು. ಪದವೀಧರರಿಗೆ ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ ನೀಡಲು ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಅತೀ ಬಡತನದಲ್ಲಿರುವ ಪದವೀಧರರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಎಸ್ಡಿಸಿ, ಎಫ್ಡಿಸಿ, ಉಪನ್ಯಾಸಕರು, ಪ್ರಾಂಶುಪಾಲರು ಸೇರಿದಂತೆ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪಿಎಸ್ಐ ಹಾಗೂ ಪೊಲೀಸ್ ಪೇದೆಗಳ ಹುದ್ದೆಗಳನ್ನು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು ಮತ್ತು ದಾದಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರ್ಕಾರದ ಎಲ್ಲ ಇಲಾಖೆಗಳ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೆಪಿಎಸ್ಸಿ ಹಾಗೂ ಕೆಇಎಗಳು ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
60 ವರ್ಷ ಪೂರೈಸಿದ ಪದವೀಧರರಿಗೆ ಸರ್ಕಾರದ ವತಿಯಿಂದ ಜೀವವಿಮೆ ಹಾಗೂ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ಕೌಶಲ್ಯಾಧಾರಿತ ಶಿಕ್ಷಣ ಪಡೆದ ಪದವೀಧರರು ಸ್ವಯಂ ಉದ್ಯೋಗ ಕೈಗೊಳ್ಳಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಬೇಕು. ರಾಜ್ಯದಲ್ಲಿರುವ ಖಾಲಿ ಹುದ್ದೆಗಳಿಗೆ ಅರ್ಹ ಪದವೀಧರರನ್ನು ನೇಮಕ ಮಾಡಿಕೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
30 ವರ್ಷ ಶಿಕ್ಷಕರಾಗಿ ಸೇವೆ
ಕಳೆದ 30 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿರುವ ತಾವು, ಪ್ರಸ್ತುತ ಪತ್ರಿಕೋದ್ಯಮದ ಜೊತೆಗೆ ಕಲೆ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದೇನೆ. ಇದೀಗ ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಕ್ಷೇತ್ರದ ಪದವೀಧರರು ಆಶೀರ್ವದಿಸಬೇಕು ಎಂದು ಕೆ.ಜಿ. ರಂಗಸ್ವಾಮಿ ಮನವಿ ಮಾಡಿದರು.
ಆಗ್ನೇಯ ಪದವೀಧರ ಕ್ಷೇತ್ರದಾದ್ಯಂತ ನಿರಂತರವಾಗಿ ಸಂಚರಿಸಿ ಪದವೀಧರರನ್ನು ಸಂಘಟಿಸುವುದು, ಅವರ ಕುಂದುಕೊರತೆಗಳನ್ನು ಆಲಿಸುವುದು ಹಾಗೂ ಅವುಗಳನ್ನು ಸರ್ಕಾರದ ಗಮನಕ್ಕೆ ತರುವ ಕಾರ್ಯವನ್ನು ಮುಂದುವರಿಸುವುದಾಗಿ ಅವರು ಹೇಳಿದರು.
ವರದಿ : ಕೆ ಬಿ ಚಂದ್ರಚೂಡ್
