ಹಾಸನ, ಆ.9: ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ನಡೆಯಲಿರುವ ಹೋರಾಟದ ರೂಪುರೇಷೆಗಳ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ. ಮಂಜು ಭಾಗವಹಿಸಿದರು.
ಸಭೆಯಲ್ಲಿ ಬಿಡದಿ ಟೌನ್ಶಿಪ್ ಯೋಜನೆಯಿಂದ ರೈತರು ಹಾಗೂ ಸ್ಥಳೀಯರಿಗೆ ಎದುರಾಗಬಹುದಾದ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ರೈತರ ಭೂಮಿ ಹಾಗೂ ಹಕ್ಕುಗಳ ರಕ್ಷಣೆಗೆ ಹೋರಾಟವನ್ನು ಪರಿಣಾಮಕಾರಿಯಾಗಿ ಸಂಘಟಿಸುವುದು ಮತ್ತು ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುವ ಬಗ್ಗೆ ಮುಖಂಡರು ಸಮಾಲೋಚನೆ ನಡೆಸಿದರು.

ರೈತರ ಭೂಮಿ ಮತ್ತು ಹಕ್ಕುಗಳ ರಕ್ಷಣೆಗೆ ನಡೆಯುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಶಾಸಕ ಎ. ಮಂಜು ತಿಳಿಸಿದರು. ಜನರ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ಯಾವುದೇ ಕ್ರಮದ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸುವ ಸಂಕಲ್ಪವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.
“ನಮ್ಮ ಭೂಮಿ–ನಮ್ಮ ಹಕ್ಕು; ರೈತರ ಭೂಮಿ ಉಳಿಸುವವರೆಗೂ ಹೋರಾಟ ನಿಲ್ಲದು” ಎಂಬ ಘೋಷಣೆಯೊಂದಿಗೆ ಹೋರಾಟವನ್ನು ಯಶಸ್ವಿಗೊಳಿಸಲು ಮುಖಂಡರು ಹಾಗೂ ಕಾರ್ಯಕರ್ತರು ಸಜ್ಜಾಗಿದ್ದಾರೆ.
– ಕುಮಾರಸ್ವಾಮಿ ಎಂ.ಎನ್.
