ಕೊರಟಗೆರೆ: ಕೊರಟಗೆರೆ ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮಾಜಿ ಕೆಪಿಸಿಸಿ ಸದಸ್ಯ ಹಾಗೂ ಮಾಜಿ ಕೋಳಾಲ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ಅವರು ಅಪಾರ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

ಬೆಂಗಳೂರಿನ ಜೆ.ಪಿ. ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷದ ಬಾವುಟ ಸ್ವೀಕರಿಸುವ ಮೂಲಕ ಕೃಷ್ಣಮೂರ್ತಿ ಜೆಡಿಎಸ್ ಸೇರಿದರು. ಕಾರ್ಯಕ್ರಮದಲ್ಲಿ ರಮೇಶ್ ಬಾಬು ಹಾಗೂ ಕೋಲಾರ ಸಂಸದ ಮಲ್ಲೇಶ್ ಬಾಬು ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಕೃಷ್ಣಮೂರ್ತಿ ಅವರ ಜೆಡಿಎಸ್ ಸೇರ್ಪಡೆಗೆ ಬೆಂಬಲ ಸೂಚಿಸಲು ಕೊರಟಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಕಾರ್ಯಕರ್ತರು ಬೆಂಗಳೂರಿಗೆ ತೆರಳಿದ್ದರು. ಈ ಮೂಲಕ ಜೆಡಿಎಸ್ ಕಚೇರಿ ಆವರಣದಲ್ಲಿ ಕಾರ್ಯಕರ್ತರ ಶಕ್ತಿ ಪ್ರದರ್ಶನ ಕಂಡುಬಂತು.

ಕೃಷ್ಣಮೂರ್ತಿ ಅವರ ಸೇರ್ಪಡೆಯಿಂದ ಕೊರಟಗೆರೆ ಜೆಡಿಎಸ್ ಸಂಘಟನೆಗೆ ಮತ್ತಷ್ಟು ಬಲ ಬಂದಿದೆ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕಾಮರಾಜು ಅಭಿಪ್ರಾಯಪಟ್ಟರು. ಸಂಘಟನಾ ದೃಷ್ಟಿಯಿಂದಲೂ ಈ ಸೇರ್ಪಡೆ ಪಕ್ಷಕ್ಕೆ ಹೊಸ ಚೈತನ್ಯ ನೀಡಲಿದೆ ಎಂದು ಹೇಳಿದರು.

ಚುನಾವಣಾ ಕಣಕ್ಕೆ ಹೊಸ ತಿರುವು?
ಕೊರಟಗೆರೆ ವಿಧಾನಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಿ.ಎನ್. ಕೃಷ್ಣಮೂರ್ತಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಕುರಿತು ಇದೀಗ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ.

ಕೃಷ್ಣಮೂರ್ತಿ ಅವರ ಸೇರ್ಪಡೆ ಕೇವಲ ಪಕ್ಷ ಸೇರ್ಪಡೆಯೇ ಅಥವಾ ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆಯನ್ನು ಬಲಪಡಿಸುವ ರಾಜಕೀಯ ತಂತ್ರದ ಭಾಗವೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಲಿಂಗಪ್ಪ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕಾಮರಾಜು, ಮಾಜಿ ಕಾರ್ಯಾಧ್ಯಕ್ಷ ನರಸಿಂಹರಾಜು, ಲಕ್ಷ್ಮೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ದೊಡ್ಡಯ್ಯ, ಲಕ್ಷ್ಮಿಕಾಂತ್ ಸೇರಿದಂತೆ ಕೊರಟಗೆರೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
