ಹಾಸನ : ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಅವರ “ಪುಟ್ಟಗೂಡಿನ ಪಟ್ಟದರಸಿ” ಕಾದಂಬರಿ ನೈಜ ಬದುಕಿನ ಪ್ರತಿಬಿಂಬವಾಗಿದ್ದು, ಮಾನವೀಯ ಮೌಲ್ಯಗಳನ್ನು ಅರಿಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಶೈಕ್ಷಣಿಕ ಚಿಂತಕಿ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ಜಿಲ್ಲಾ ಕಾರ್ಯದರ್ಶಿ ಪ್ರತಿಭಾ ಸುದರ್ಶನ್ ಅಭಿಪ್ರಾಯಪಟ್ಟರು.

ನಗರದ ರಿಂಗ್ ರಸ್ತೆಯಲ್ಲಿರುವ ಉಡುಪಿ ಹೋಟೆಲ್ನಲ್ಲಿ ಕವಯಿತ್ರಿ ಪದ್ಮಾವತಿ ವೆಂಕಟೇಶ್ ಅವರ ಪ್ರಾಯೋಜಕತ್ವದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ 43ನೇ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಪುಟ್ಟಗೂಡಿನ ಪಟ್ಟದರಸಿ” ಕಾದಂಬರಿಯು ಬಡ ಕುಟುಂಬದ ಹೆಣ್ಣುಮಗಳು ಕಮಲಿಯ ಬದುಕು, ಆಕೆಯ ಬಾಲ್ಯ, ಶಿಕ್ಷಣ, ಪ್ರತಿಭೆ, ಆಸೆ-ಕನಸುಗಳು ಹಾಗೂ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ. ಕಮಲಿಯ ಹೋರಾಟ, ಸಮಯಪ್ರಜ್ಞೆ ಮತ್ತು ಧೈರ್ಯ ಓದುಗರಿಗೆ ಪ್ರೇರಣೆಯಾಗುತ್ತದೆ ಎಂದು ಪ್ರತಿಭಾ ಸುದರ್ಶನ್ ಹೇಳಿದರು.

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ಕೊಟ್ರೇಶ್ ಎಸ್. ಉಪ್ಪಾರ್ ಅವರು ಸಾಹಿತ್ಯ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಅನೇಕ ಯುವ ಪ್ರತಿಭೆಗಳನ್ನು ಬೆಳೆಸುತ್ತಿದ್ದಾರೆ. ಅವರಿಗೆ ಕನ್ನಡ ಸಾರಸ್ವತ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವಿದೆ ಎಂದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ ಮಾತನಾಡಿ, ಕಳೆದ ಏಳೆಂಟು ವರ್ಷಗಳಿಂದ ವೇದಿಕೆಯು ಹೊಸ ಬರಹಗಾರರು ಹಾಗೂ ಎಲೆಮರೆ ಕಾಯಿಯಂತಹ ಪ್ರತಿಭೆಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ. “ಪುಟ್ಟಗೂಡಿನ ಪಟ್ಟದರಸಿ” ಕಾದಂಬರಿಯು ಆಲೂರು ತಾಲ್ಲೂಕಿನ ಗ್ರಾಮೀಣ ಬದುಕಿನ ಚಿತ್ರಣವನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದೆ ಎಂದರು.

ತಾಲೂಕು ಅಧ್ಯಕ್ಷೆ ಕೆ.ಸಿ. ಗೀತಾ ಮಾತನಾಡಿ, ಸಾಹಿತ್ಯ ವೇದಿಕೆಯು ತಮ್ಮಂತಹ ಅನೇಕ ಬರಹಗಾರರಿಗೆ ಹೊಸ ಅವಕಾಶ ಹಾಗೂ ಪ್ರೋತ್ಸಾಹ ನೀಡಿದೆ ಎಂದು ಹೇಳಿದರು. ಪ್ರಾಯೋಜಕಿ ಹಾಗೂ ಕವಯಿತ್ರಿ ಪದ್ಮಾವತಿ ವೆಂಕಟೇಶ್ ಅವರು ಕೊಟ್ರೇಶ್ ಎಸ್. ಉಪ್ಪಾರ್ ಅವರ ಮಾರ್ಗದರ್ಶನವನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ಪೂಜಾ ರಘುನಂದನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜಿಲ್ಲಾಮಟ್ಟದ ಕವಿಗೋಷ್ಠಿ
ಕಾರ್ಯಕ್ರಮದ ಬಳಿಕ ನಡೆದ ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ರಾಜೇಶ್ವರಿ ಹುಲ್ಲೇನಹಳ್ಳಿ, ಜಯಾ ರಮೇಶ್, ಎಚ್.ಬಿ. ಚೂಡಾಮಣಿ, ಸಿ.ಎನ್. ನೀಲಾವತಿ, ಚಂದ್ರಕಲಾ ಎಂ. ಆಲೂರು, ಮಂಜುಳಾ ಪ್ರಸಾದ್, ಎಚ್.ಎನ್. ಭಾರತಿ, ಸಂತೋಷ ಕುಮಾರಿ, ಗಿರಿಜಾ ನಾಗೇಶ್ ಸೇರಿದಂತೆ ಹಲವು ಕವಿಗಳು ತಮ್ಮ ಕವನ ಹಾಗೂ ಚುಟುಕುಗಳನ್ನು ವಾಚಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹ ಕಾರ್ಯದರ್ಶಿ ರಶ್ಮಿ, ಜಿಲ್ಲಾ ನಿರ್ದೇಶಕಿ ರೂಪಾ, ಸ್ವಾಮಿಗೌಡ ಸೇರಿದಂತೆ ಸಾಹಿತ್ಯಾಸಕ್ತರು ಹಾಗೂ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

