ರಾಮನಾಥಪುರ: ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಮಾಡಿರುವ ಶಿಫಾರಸನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಕೊಣನೂರು ಹೋಬಳಿಯ ಸಿದ್ದಾಪುರ ಗೇಟ್ನ ಕೆ.ಬಿ. ಮಲ್ಲಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ಎಸ್. ರಾಘವೇಂದ್ರಗೌಡ, ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಮಾಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸು ಅವೈಜ್ಞಾನಿಕವಾಗಿದೆ ಎಂದು ಆಕ್ಷೇಪಿಸಿದರು.
ಕರ್ನಾಟಕದ ರೈತರ ಬದುಕಿಗೂ ಕಾವೇರಿ ನದಿ ಅತ್ಯಂತ ಮಹತ್ವದ್ದಾಗಿದೆ. ಕೊಡಗಿನಲ್ಲಿ ಹಿಂದೆ ನಿರಂತರವಾಗಿ ಉತ್ತಮ ಮಳೆಯಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ನೀರಿನ ಲಭ್ಯತೆಯಲ್ಲೂ ಅನಿಶ್ಚಿತತೆ ಉಂಟಾಗಿದೆ. ಒಂದು ರಾಜ್ಯದ ರೈತರ ಅಗತ್ಯ ಪೂರೈಸುವ ಸಂದರ್ಭದಲ್ಲಿ ಮತ್ತೊಂದು ರಾಜ್ಯದ ರೈತರಿಗೆ ಸಂಕಷ್ಟ ಉಂಟಾಗದಂತೆ ವೈಜ್ಞಾನಿಕ ಹಾಗೂ ನ್ಯಾಯಯುತ ನೀರು ಹಂಚಿಕೆ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಕಾನೂನು ತಜ್ಞರೊಂದಿಗೆ ಚರ್ಚಿಸಿ, ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಕೊಡಗು, ಹಾಸನ, ಮೈಸೂರು, ಮಂಡ್ಯ ಹಾಗೂ ಬೆಂಗಳೂರು ಸೇರಿದಂತೆ ಕಾವೇರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ನೀರಿನ ಕೊರತೆ ಎದುರಾಗಿದ್ದು, ರೈತರು ಭತ್ತ, ಕಬ್ಬು, ಶುಂಠಿ ಸೇರಿದಂತೆ ವಿವಿಧ ಬೆಳೆಗಳಿಗೆ ನೀರಿಗಾಗಿ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದರು.

ಕಾವೇರಿ ನದಿಗೆ ವಿಶೇಷ ಸಂರಕ್ಷಣಾ ಕಾಯ್ದೆಗೆ ಒತ್ತಾಯ
ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಮಾತನಾಡಿ, ಕೊಡಗಿನ ತಲಕಾವೇರಿಯಿಂದ ತಮಿಳುನಾಡಿನ ಪೂಂಪುಹಾರ್ವರೆಗೆ ಸುಮಾರು 840 ಕಿ.ಮೀ. ಹರಿಯುವ ಕಾವೇರಿ ನದಿ ಕೋಟ್ಯಂತರ ಜನರ ಜೀವನಾಡಿಯಾಗಿದೆ. ನದಿ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಕಾಯ್ದೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯಿಂದ ಕಳೆದ 15 ವರ್ಷಗಳಿಂದ ಕಾವೇರಿ ಅಭಿಯಾನ ಯಾತ್ರೆ ಹಾಗೂ ನದಿ ಸ್ವಚ್ಛತಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಕಾವೇರಿ ನದಿಯನ್ನು ಉಳಿಸಲು ಹಾಗೂ ಮಾಲಿನ್ಯದಿಂದ ರಕ್ಷಿಸಲು ವಿಶೇಷ ಕಾನೂನು ಜಾರಿಗೆ ತರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಮಹಿಳಾ ರಾಜ್ಯಾಧ್ಯಕ್ಷೆ ಮಧುಶ್ರೀ ರಾಘವೇಂದ್ರಗೌಡ, ಹೊಸನಗರ ಲಕ್ಷ್ಮಮ್ಮ, ಮೆಕ್ಯಾನಿಕ್ ರಮೇಶ್, ಕೃಷ್ಣೇಗೌಡ, ಗಿರೀಶ್ಗೌಡ, ನಂಜೇಗೌಡ, ಅಶೋಕ, ಆನಂದಾಚಾರ್, ಅನಿತಾ ಆಚಾರ್, ದರ್ಶನ್, ಶಶಾಂಕ್, ವೆಂಕಟೇಶ್, ಯೋಗೇಶ್, ರವೀಂದ್ರ, ಗೋವಿಂದೇಗೌಡ, ಮೆಕ್ಯಾನಿಕ್ ನಾಗೇಂದ್ರ, ಲಕ್ಷ್ಮ, ಕಾಳಯ್ಯ, ನವೀಶ್, ಕಿರಣ್, ವರುಣ್, ದೇವರಾಜ್, ದೊಡ್ಡೇಗೌಡ, ಕುಮಾರ್, ಹೋಟೆಲ್ ರೇವಣ್ಣ, ಸ್ವಾಮಿಗೌಡ, ನಾಗರಾಜ್, ಸ್ವಾಮಿ, ಪ್ರದೀಪ್, ದಿನೇಶ್, ರವಿ, ಜಗದೀಶ್, ಚಂದ್ರಶೇಖರ್, ಪ್ರಕಾಶ್, ಮಂಜೇಗೌಡ ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಳಬೋಯಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರತಿಭಟನೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೊಣನೂರು ಪಿಎಸ್ಐ ಮರಿಯಪ್ಪ, ಆರ್. ಬ್ಯಾಳಿ ಹಾಗೂ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
– ಕುಮಾರಸ್ವಾಮಿ ಎಂ.ಎಸ್.
